ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಮುಕ್ತ, ನ್ಯಾಯ ಸಮ್ಮತ ಹಾಗೂ ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆ ಕೈಗೊಂಡಿದೆ. ಜಿಲ್ಲಾದ್ಯಂತ ನೀತಿ ಸಂಹಿತೆ ಅನ್ವಯವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿ ಸವಣೂರು ಉಪ ವಿಭಾಗಾಧಿಕಾರಿ ಮಹ್ಮದ್ ಖೈಝರ್ ಹಾಗೂ ಸಹಾಯಕ ಚುನಾವಣಾ ಅಧಿಕಾರಿಯಾಗಿ ಶಿಗ್ಗಾಂವಿ ತಹಸೀಲ್ದಾರ್ ಸಂತೋಷ ಹಿರೇಮಠ ಕಾರ್ಯ ನಿರ್ವಹಿಸಲಿದ್ದಾರೆ. ಶಿಗ್ಗಾಂವಿ ತಹಸೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸ್ವೀಕಾರ ಮಾಡಲಾಗುವುದು. ಅ. ೧೮ರಂದು ಅಧಿಸೂಚನೆ ಪ್ರಕಟಿಸಲಾಗುವುದು. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಅ. ೨೫ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಅ. ೨೮ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅ. ೩೦ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ನ. ೧೩ರಂದು ಮತದಾನ ನಡೆಯಲಿದೆ. ನ. ೨೩ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ನ. ೨೫ ರಂದು ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಮತದಾರರ ವಿವರ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ೨೦೨೪ಕ್ಕೆ ಅನ್ವಯವಾಗುವಂತೆ ೧,೨೧,೦೬೭ ಪುರುಷರು, ೧,೧೫,೭೧೭ ಮಹಿಳೆಯರು, ೬ ಜನ ಇತರರು ಸೇರಿದಂತೆ ೨,೩೬,೭೯೦ ಮತದಾರರು ಒಳಗೊಂಡಿರುತ್ತಾರೆ ಎಂದು ಮಾಹಿತಿ ನೀಡಿದರು.ವಿಶೇಷಚೇತನರಿಗೆ ವಿಶೇಷ ವ್ಯವಸ್ಥೆ: ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಭಾರತ ಚುನಾವಣಾ ಆಯೋಗ ವಿಶೇಷ ಅವಕಾಶ ಕಲ್ಪಿಸಿದೆ. ೮೫ ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಕಲಚೇತನರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ೮೫ ವರ್ಷ ಮೇಲ್ಪಟ್ಟ ೨,೮೦೨ ಹಿರಿಯ ಮತದಾರರು, ೫,೨೫೧ ವಿಶೇಷ ಚೇತನರು, ೧೪೪ ಸೇವಾ ಮತದಾರರು ಹಾಗೂ ೧೮ರಿಂದ ೧೯ ವರ್ಷದೊಳಗಿನ ೯,೬೮೩ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು
ಮತಗಟ್ಟೆ ಸಿಬ್ಬಂದಿ: ಸುಗಮ ಚುನಾವಣೆ ಜರುಗಿಸಲು ೨೬೫ ಮತಗಟ್ಟೆ ಅಧಿಕಾರಿಗಳು, ೨೬೫ ಸಹಾಯಕ ಮತಗಟ್ಟೆ ಅಧಿಕಾರಿ ಹಾಗೂ ೫೩೦ ಪಿಒಗಳು ಸೇರಿದಂತೆ ೧೦೬೦ ಸಿಬ್ಬಂದಿ ನಿಯೋಜಿಸಲಾಗಿದೆ. ಹಾವೇರಿ, ಬ್ಯಾಡಗಿ ಹಾಗೂ ಹಾನಗಲ್ ಕ್ಷೇತ್ರದ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗುವುದು. ಮೊದಲ ಹಂತದ ತರಬೇತಿ ಆಯಾ ತಾಲೂಕು ಕೇಂದ್ರ ಸ್ಥಾನದಲ್ಲಿ ಜರುಗಲಿದೆ, ೨ನೇ ಹಂತದ ತರಗತಿ ಶಿಗ್ಗಾಂವಿಯಲ್ಲಿ ಜರುಗಲಿದೆ ಎಂದರು.
ಮಾದರಿ ನೀತಿ ಸಂಹಿತೆ ಪಾಲನೆಗೆ ೨೩ ಸೆಕ್ಟರ್ ಅಧಿಕಾರಿಗಳ ತಂಡ ರಚಿಸಲಾಗಿದೆ. ೨ ವಿಡಿಯೋ ಸರ್ವಲೆನ್ಸ್ ತಂಡಗಳು, ಒಂದು ವಿಡಿಯೋ ಪರಿಶೀಲನೆ ತಂಡ, ಎಂಟು ಫ್ಲಾಯಿಂಗ್ ಸ್ಕ್ವಾಡ್, ಒಂದು ವೆಚ್ಚ ಪರಿಶೀಲನಾ ತಂಡ, ೧೮ ಎಸ್‌ಎಸ್‌ಟಿ ತಂಡ ರಚಿಸಲಾಗಿದೆ ಎಂದು ತಿಳಿಸಿದರು.
ಕಂಟ್ರೋಲ್ ರೂಂ ಸ್ಥಾಪನೆ: ಶಿಗ್ಗಾಂವಿ ವಿಧಾನಸಭಾ ಉಪ ಚುನಾವಣೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದರೆ ಸ್ವೀಕರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ೦೮೩೭೫-೨೦೦೩೮೩ ಹಾಗೂ ಶಿಗ್ಗಾಂವಿಯಲ್ಲಿ ೦೮೩೭೮-೨೨೨೪೬೮ ಸಹಾಯವಾಣಿಯನ್ನು ಕಂಟ್ರೋಲ್ ರೂಂನಲ್ಲಿ ಸ್ಥಾಪಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ ೧೯೫೦ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಮಾಹಿತಿ ನಿಡಬಹುದಾಗಿದೆ ಎಂದರು. ಅಭ್ಯರ್ಥಿಯ ಚುನಾವಣಾ ವೆಚ್ಚ ₹೪೦ ಲಕ್ಷಕ್ಕೆ ಮಿತಿ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಚುನಾವಣಾ ನಿಗಾಕ್ಕೆ ಡಿವೈಎಸ್‌ಪಿಗಳು, ಸಿಪಿಐಗಳು, ಮೂರು ಕೆಎಸ್‌ಆರ್‌ಪಿ ತುಕಡಿ, ಪ್ಯಾರಾ ಮಿಲಿಟರಿ ಪಡೆ ಹಾಗೂ ಚೆಕ್‌ಪೋಸ್ಟ್ ಸೇರಿದಂತೆ ಸೆಕ್ಟರ್ ತಂಡ, ವಿಡಿಯೋ ತಂಡಗಳಿಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು. ಯಾವುದೇ ಸಿಬ್ಬಂದಿ ಕೊರತೆ ಇರುವುದಿಲ್ಲ ಎಂದು ಮಾಹಿತಿ ನೀಡಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಶೇ. ೭೯.೯೪ರಷ್ಟು ಮತದಾನವಾಗಿದ್ದು, ಶೇ. ೮೧ ರಷ್ಟು ಪುರುಷ ಹಾಗೂ ಶೇ. ೭೭.೮೨ ರಷ್ಟು ಮಹಿಳಾ ಮತದಾನವಾಗಿದೆ. ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಮತದಾನ ಪ್ರಮಾಣ ಕಡಿಮೆಯಾದ ೨೦ ಮತಕ್ಷೇತ್ರಗಳನ್ನು ಗುರುತಿಸಿ, ಪ್ರತಿ ಮತ ಕೇಂದ್ರಗಳಿಗೆ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಿ, ಸ್ವೀಪ್ ಚಟುವಟಿಕೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ನಾಗರಾಜ, ಎಎಸ್ಪಿ ಲಕ್ಷ್ಮಣ ಶಿರಕೋಳ ಉಪಸ್ಥಿತರಿದ್ದರು.