ಮುಂಗಾರು ಆರಂಭಕ್ಕೆ ಮುನ್ನ ಕೃಷಿ ಸಲಕರಣೆ ಸಿದ್ಧತೆ

KannadaprabhaNewsNetwork |  
Published : May 21, 2024, 12:34 AM ISTUpdated : May 21, 2024, 12:35 AM IST
ರೈತರ ಕೃಷಿ ಸಲಕರಣೆಗಳ ರಿಪೇರಿಯಲ್ಲಿ ತೊಡಗಿರುವ ಬಡಿಗೇರ ಕೆಲಸಗಾರರು. | Kannada Prabha

ಸಾರಾಂಶ

ಇನ್ನೇನು ಮುಂಗಾರು ಆರಂಭವಾಗುವ ಹಂತದಲ್ಲಿದ್ದು, ಶಿರಹಟ್ಟಿ ತಾಲೂಕಿನಲ್ಲಿ ರೈತರು ತಮ್ಮ ಕೃಷಿ ಸಲಕರಣೆಗಳ ಸಿದ್ಧತೆ ಹಾಗೂ ಬಿತ್ತನೆ ಬೀಜ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಕಂಬಾರ, ಬಡಿಗೇರರಿಗೆ ಈಗ ಇನ್ನಿಲ್ಲದ ಕೆಲಸ.

ಮಹದೇವಪ್ಪ ಎಂ. ಸ್ವಾಮಿ

ಶಿರಹಟ್ಟಿ: ಮುಂಗಾರು ಮಳೆ ಆರಂಭವಾಗುತ್ತಿದ್ದು, ರೈತರು ತಮ್ಮ ಕೃಷಿ ಸಲಕರಣೆಗಳ ಸಿದ್ಧತೆ ಹಾಗೂ ಬಿತ್ತನೆ ಬೀಜ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಜತೆಗೆ ಕೃಷಿ ಸಲಕರಣೆಗಳ ರಿಪೇರಿಗಾಗಿ ಕಂಬಾರ, ಬಡಿಗೇರ ಅಂಗಡಿಗಳಿಗೆ ಅಲೆಯುವುದು ಸಾಮಾನ್ಯವಾಗಿದೆ. ಹೀಗಾಗಿ ಹಿಂದಿನ ವರ್ಷವಿಡೀ ಕೃಷಿ ಕೆಲಸದಲ್ಲಿ ಬಳಸಿಕೊಂಡಿದ್ದ ಸಲಕರಣೆಗಳು ಈಗ ಮತ್ತೆ ಕೆಲಸಕ್ಕೆ ಸಿದ್ಧವಾಗುತ್ತಿವೆ. ಶಿರಹಟ್ಟಿ ತಾಲೂಕಿನ ಬಹುತೇಕ ರೈತರು ಮಳೆಯನ್ನೇ ಅವಲಂಬಿಸಿ ಬೇಸಾಯ ಕೈಗೊಂಡಿದ್ದಾರೆ. ಮೊದಲೇ ಹೇಳಿಕೇಳಿ ಬರಗಾಲ ತಾಲೂಕು. ಅದರಲ್ಲೂ ಮಳೆಯಾದರೆ ಮಾತ್ರ ಇಲ್ಲಿ ಬೆಳೆ ಬರುತ್ತದೆ. ಇಲ್ಲದಿದ್ದರೆ ಬರಗಾಲವೇ ಗತಿ. ಕಳೆದ ವರ್ಷ ಮುಂಗಾರು ಸಂಪೂರ್ಣ ಕೈಕೊಟ್ಟಿದ್ದರಿಂದ ಬಿತ್ತಿದ ಬೀಜ, ಗೊಬ್ಬರ, ಆಳು, ಕಳೆ ಖರ್ಚು ಕೂಡ ಬರದೇ ರೈತರು ಅಪಾರ ನಷ್ಟ ಅನುಭಿವಿಸಿದ್ದರು.

ಈ ಬಾರಿಯಾದರೂ ವರುಣನು ಕೃಪೆ ತೋರಿದರೆ ವಿವಿಧ ಬೆಳೆಗಳಾದ ಹೆಸರು, ಜೋಳ, ಸೂರ್ಯಕಾಂತಿ, ಕಂಠಿ ಶೇಂಗಾ ಮುಂತಾದ ಬೆಳೆಗಳನ್ನು ಬೆಳೆಯುವ ಲೆಕ್ಕಾಚಾರ ರೈತರದ್ದು. ಹೀಗಾಗಿ ಮುಂದೆ ಬೆಳೆಯಬಹುದಾದ ವಿವಿಧ ಮುಂಗಾರು ಬೆಳೆಗಳ ಬಿತ್ತನೆ ಬೀಜಗಳ ಸಂಗ್ರಹಣೆಯಲ್ಲಿ ತೊಡಗಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ರೈತರು ಬೇಸಿಗೆಯ ಬಿರುಬಿಸಿಲು ಲೆಕ್ಕಿಸದೇ ತಮ್ಮ ಹೊಲ ಸ್ವಚ್ಛಗೊಳಿಸುವಲ್ಲಿ ನಿರತರಾಗಿದ್ದಾರೆ. ಹೊಲದಲ್ಲಿ ಟ್ರ್ಯಾಕ್ಟರ್‌ ನೇಗಿಲು, ಗಳೆ, ರಂಟಿ ಹೊಡೆಯುವ ಮೂಲಕ ಮಣ್ಣನ್ನು ಹದಗೊಳಿಸಿದ್ದಾರೆ. ಹೊಲದಲ್ಲಿನ ಕಳೆ, ಮುಳ್ಳು ಗಿಡ ಗಂಟಿಗಳನ್ನು ಕಡಿಸುವುದು. ಹೊಲದಲ್ಲಿ ಬೆಳೆದ ಕರಕಿಯನ್ನು ಕಡಿಸುವುದು ಸೇರಿದಂತೆ ತಿಪ್ಪೆಗೊಬ್ಬರ ಹಾಕಿಸಿ ಸಜ್ಜುಗೊಳಿಸಿದ್ದಾರೆ. ಮಳೆ ಬಂದರೆ ಹೊಲದಲ್ಲಿನ ನೀರು ಹೊರಗೆ ಹರಿದು ಹೋಗದಂತೆ ಅಲ್ಲಲ್ಲಿ ಒಡ್ಡು ಹಾಗೂ ಬದುಗಳನ್ನು ನಿರ್ಮಿಸಿ ರೈತರು ಆಕಾಶದ ಕಡೆ ಮುಖ ಮಾಡಿ ವರುಣನ ನಿರೀಕ್ಷೆಯಲ್ಲಿದ್ದಾರೆ.

ಈಗಾಗಲೇ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಲ್ಪಸ್ವಲ್ಪ ಮಳೆಯಾಗಿದೆ. ದಿನನಿತ್ಯ ಮೋಡಕವಿದ ವಾತಾವರಣ ನಿರ್ಮಾಣವಾಗುತ್ತಿದೆ. ಹವಾಮಾನ ಇಲಾಖೆಯಿಂದ ಉತ್ತಮ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ತಮ್ಮ ಇನ್ನಿತರ ಕೆಲಸಗಳನ್ನು ಬದಿಗೊತ್ತಿ ಕೃಷಿ ಚಟುವಟಿಕೆಯ ಸಲಕರಣೆಗಳನ್ನು ಸಜ್ಜುಗೊಳಿಸಲು ತೊಡಗಿದ್ದಾರೆ. ಕೃಷಿ ಸಾಮಗ್ರಿಗಳ ತಯಾರಿಕೆ ಹಾಗೂ ರಿಪೇರಿಗಾಗಿ ಬಡಿಗೇರ ಹಾಗೂ ಕಂಬಾರರು ಬೇಕೇಬೇಕು.

ಕೃಷಿ ಸಾಮಗ್ರಿಗಳಾದ ರಂಟೆ, ಕುಂಟೆ, ಗಳೆ, ಕೂರಿಗೆ ಇತ್ಯಾದಿಗಳನ್ನು ದುರಸ್ತಿಗಾಗಿ ಬಡಿಗೇರ ಹತ್ತಿರ ತೆಗೆದುಕೊಂಡು ಹೋದರೆ, ನೇಗಿಲ ಪಾಳು, ಖುಡ, ಕುರುಪಿ, ಕುಡಗೋಲು, ಕೊಡಲಿ, ಗುದ್ದಲಿ- ಸಲಿಕೆಗಳನ್ನು ಪುನ ಹರಿತಗೊಳಿಸಲು ಕಂಬಾರರಲ್ಲಿ ಒಯ್ಯಬೇಕಾಗುತ್ತದೆ. ಹೀಗಾಗಿ ಕೃಷಿ ಚಟುವಟಿಕೆಯ ಸಲಕರಣೆಗಳನ್ನೆಲ್ಲ ಹಿಡಿದು ಬಡಿಗ ಹಾಗೂ ಕಂಬಾರರ ಬಳಿ ಅಲೆಯುವುದು ಕಂಡುಬರುತ್ತಿದೆ.

ಇತ್ತಿತ್ತಲಾಗಿ ಬಡಿಗೇರ ಹಾಗೂ ಕಂಬಾರರು ಬೇರೆ ಬೇರೆ ಉದ್ಯೋಗ ಕೈಗೊಂಡಿದ್ದು, ಕೆಲವೇ ಕೆಲವರು ಮಾತ್ರ ಈ ಉದ್ಯೋಗದಲ್ಲಿರುವುದರಿಂದ ಸಲಕರಣೆಗಳ ದುರಸ್ತಿ ಕಾರ್ಯಕ್ಕಾಗಿ ರೈತರು ಅಲೆಯುವುದು ತಪ್ಪುತ್ತಿಲ್ಲ.

ಒಟ್ಟಿನಲ್ಲಿ ರೈತರು ತಮ್ಮ ಎಲ್ಲ ತಾಪತ್ರಯಗಳ ನಡುವೆಯೂ ಮುಂಗಾರು ಬಿತ್ತನೆಗೆ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ವರುಣನು ಒಲಿದರೆ ಬಂಪರ್ ಬೆಳೆಗಳ ನಿರೀಕ್ಷೆಯಲ್ಲಿದ್ದಾರೆ.

PREV

Recommended Stories

ಮಗುವಿಗೆ ಗಂಟೆಯೊಳಗಾಗಿ ತಾಯಿಯ ಎದೆ ಹಾಲು ನೀಡಿ
ಸರ್ಕಾರಿ ಶಾಲೆಗಳ ಉಳಿವು, ಪರಿಸರ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್​ ಮೂಲಕ ರಾಜ್ಯ ಪರ್ಯಟನೆ