ಕಾರಹುಣ್ಣಿಮೆ ಆಚರಣೆಗೆ ರೈತರ ಸಿದ್ಧತೆ

KannadaprabhaNewsNetwork | Published : Jun 21, 2024 1:07 AM

ಸಾರಾಂಶ

ಕಾರಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ರೈತರು ತಯಾರಿ ನಡೆಸಿದ್ದು, ಮಂಗಳವಾರ ಇಲ್ಲಿನ ಸಂತೆಯಲ್ಲಿ ಹಬ್ಬಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ರೈತರು ಖರೀದಿಯಲ್ಲಿ ತೊಡಗಿರುವುದು ಕಂಡುಬಂತು.

ಶ್ರೀನಿವಾಸ ಬಬಲಾದಿ

ಕನ್ನಡಪ್ರಭ ವಾರ್ತೆ ಲೋಕಾಪುರ

ದುರ್ಗಾಮಾತೆ ಜಾತ್ರೆ ಮುಗಿಯಿತು. ಇದರ ನಡುವೆಯೇ ಕಾರ ಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ರೈತರು ತಯಾರಿ ನಡೆಸಿದ್ದು, ಮಂಗಳವಾರ ಇಲ್ಲಿನ ಸಂತೆಯಲ್ಲಿ ಹಬ್ಬಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ರೈತರು ಖರೀದಿಯಲ್ಲಿ ತೊಡಗಿರುವುದು ಕಂಡುಬಂತು.

ಹಬ್ಬಕ್ಕಾಗಿ ರೈತರು ಎತ್ತುಗಳು ಸೇರಿದಂತೆ ಜಾನುವಾರುಗಳನ್ನು ಶೃಂಗಾರ ಮಾಡಲು ಮುಖ್ಯ ದ್ವಾರದಲ್ಲಿ ಅಲಂಕಾರಿಕ ವಸ್ತುಗಳನ್ನು ಖರೀದಿಸಿದರು. ಮತಾಟಿ, ಮಗಡಾ, ಮೂಗುದಾರ, ಬಾರುಕೋಲು, ಗಂಟಿ, ಹಗ್ಗ ಸೇರಿದಂತೆ ಕೃಷಿ ಕೆಲಸಕ್ಕೆ ಬೇಕಾಗುವ ಸಾಮಗ್ರಿ ಮತ್ತು ಎತ್ತುಗಳ ಅಲಂಕಾರಿಕ ವಸ್ತುಗಳನ್ನು ಖರೀದಿಯಲ್ಲಿ ತೊಡಗಿದ್ದರು. ಭಂಟನೂರ, ವರ್ಚಗಲ್, ದಾದನಟ್ಟಿ, ಹೊಸಕೊಟಿ, ಹೆಬ್ಬಾಳ, ಕಾಡರಕೊಪ್ಪ ಮೊದಲಾದ ಗ್ರಾಮಗಳ ಕೃಷಿಕರು ಬಂದಿದ್ದು ಕಂಡು ಬಂತು.

ಮುಂಬರುವ ದಿನಗಳಲ್ಲಿ ಕೃಷಿ ಚಟುವಟಿಕೆಗಳು ಚೆನ್ನಾಗಿ ನಡೆಯಲಿ ಎಂಬುದು ರೈತರ ಬಯಕೆ ಮತ್ತು ಆ ಸಂಕಲ್ಪ ನಿಮಿತ್ತವಾಗಿ ರೈತರು ಕಾಲಕ್ಕೆ ತಕ್ಕಂತೆ ಒಂದು ವರ್ಷದಲ್ಲಿ ಒಟ್ಟು ಐದು ಸಲ ಮಣ್ಣಿಗೆ ಪೂಜೆ ಸಲ್ಲಿಸುತ್ತಾರೆ. ಮೊದಲು ಕಾರ ಹುಣ್ಣಿಮೆ ಸಂದರ್ಭದಲ್ಲಿ ಎತ್ತುಗಳ ಪೂಜೆ, ಮಣ್ಣಿತ್ತಿನ ಅಮಾವಾಸ್ಯೆ ಸಂದರ್ಭದಲ್ಲಿ ಗುಳ್ಳವ್ವನ ಪೂಜೆ, ಶ್ರಾವಣದಲ್ಲಿ ನಾಗಪೂಜೆ, ಭಾದ್ರಪದಲ್ಲಿ ಗಣಪತಿ ಮತ್ತು ಗೌರಿ ಪೂಜೆ ಹೀಗೆ ಗ್ರಾಮೀಣ ಪ್ರದೇಶದಲ್ಲಿ ಭೂಮಿತಾಯಿಗೆ ಪೂಜೆ ಸಲ್ಲಿಸಲಾಗುತ್ತದೆ.

ಮನೆಗಳಲ್ಲಿ ಎತ್ತು ಇಲ್ಲದವರು ಕೂಡ ಕುಂಬಾರರು ಮಾಡಿದ ಮಣ್ಣಿನ ಎತ್ತು ತಂದು ಮನೆಯ ದೇವರ ಜಗಲಿಯ ಮೇಲಿಟ್ಟು ಪೂಜಿಸುತ್ತಾರೆ. ಅವುಗಳಿಗೆ ಕೂಡಬಳೆಗಳನ್ನು ಮಾಡಿ ಹಾಕುತ್ತಾರೆ. ಇದೊಂದು ರೀತಿಯಲ್ಲಿ ಎತ್ತುಗಳ ಅಲಂಕಾರದ ಹಬ್ಬವೆಂದೇ ಗುರುತಿಸಿಕೊಂಡಿದೆ. ಕಾರ ಹುಣ್ಣಿಮೆಯೂ ರೈತನ ಮಿತ್ರ ಎತ್ತುಗಳನ್ನು ಪೂಜಿಸಿ ಗೌರವಿಸುವ ಹಬ್ಬವಾಗಿದ್ದು, ಈ ಸಂದರ್ಭದಲ್ಲಿ ಎಲ್ಲ ಎತ್ತುಗಳನ್ನು ಬಣ್ಣ ಹಾಗೂ ಹೊಸ ಹೊಸ ಮೂಗುದಾರ, ಬಾರಕೋಲುಗಳಿಂದ ಶೃಂಗರಿಸಿ ಸಂಭ್ರಮಪಡುತ್ತಾರೆ.

ಕಾರ ಹುಣ್ಣಿಮೆಯ ದಿನದಂದು ಸಂಜೆ ಎತ್ತುಗಳ ಓಟದ ಸ್ಪರ್ಧೆಯು ರೈತರ ಸಂಭ್ರಮಕ್ಕೆ ಮೆರಗು ಹೆಚ್ಚಿಸುತ್ತದೆ. ಈ ಮೂಲಕ ಹಿಂಗಾರಿಗೆ ಯಾವ ಬೆಳೆಗಳನ್ನು ಬೆಳೆಯಬೇಕು ಎಂಬುದರ ಮುನ್ಸೂಚನೆ ಪಡೆಯುತ್ತಾನೆ. ಜಗತ್ತು ಎಷ್ಟೇ ಆಧುನಿಕತೆಯತ್ತ ಸಾಗಿದ್ದರೂ ಗ್ರಾಮೀಣ ಭಾಗದ ಜನರು ಮಾತ್ರ ಇನ್ನೂ ನಮ್ಮ ದೇಸಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೊರಟಿರುವುದಕ್ಕೆ ಕಾರಹುಣ್ಣಿಮೆ ಸಾಕ್ಷಿಯಾಗಿದೆ.

ಕಾರ ಹುಣ್ಣಿಮೆ ಎಂದರೆ ರೈತರಿಗೆ ಎಲ್ಲಿಲ್ಲದ ಸಂಭ್ರಮ. ಈ ಬಾರಿ ಮಳೆಬೆಳೆ ಚೆನ್ನಾಗಿರುವುದು ರೈತರ ಸಂಭ್ರಮ ಇಮ್ಮಡಿಸಿಗೊಳಿಸಿದೆ. ಕೃಷಿಯಲ್ಲಿ ರೈತನಿಗೆ ಬೆನ್ನೆಲುಬಾಗಿ ನಿಂತು ದುರಿಯುವ ಎತ್ತುಗಳಿಗೆ ಈ ಹಬ್ಬದಂದು ಪೂಜಿಸುವ ಮೂಲಕ ಋಣ ಸಂದಾಯ ಮಾಡಲಾಗುತ್ತದೆ. ಕರಿಹರಿಯುವ ಸಂದರ್ಭದಲ್ಲಿ ಕರಿ ಹಾಗೂ ಬಿಳಿ ಎತ್ತುಗಳ ಮೂಲಕ ಹಿಂಗಾರಿನಲ್ಲಿ ಯಾವ ಬೆಳೆ ಹುಲುಸಾಗಿ ಬೆಳೆಯುತ್ತದೆ ಎಂಬ ಮಾಹಿತಿ ಸಿಗುತ್ತದೆ.

- ಹಣಮಂತಗೌಡ ಪಾಟೀಲ ಪ್ರಗತಿಪರ ರೈತ ಲಕ್ಷ್ಯಾನಟ್ಟಿ

Share this article