ಹಾವೇರಿ: ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳ ಸಭೆ ಕರೆಯಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ಈಗಾಗಲೇ ಜಿ.ಎಂ. ಶುಗರ್ಸ್ ಮತ್ತು ಹೆಬ್ಬಾರ್ ಶುಗರ್ಸ್ ಆಡಳಿತ ಮಂಡಳಿಗಳನ್ನು ಸಂಪರ್ಕಿಸಲಾಗಿದ್ದು, ಹೆಬ್ಬಾರ್ ಶುಗರ್ಸ್ ಸಭೆಗೆ ಬರಲು ಒಪ್ಪಿಗೆ ಸೂಚಿಸಿದೆ. ಜಿ.ಎಂ. ಶುಗರ್ಸ್ ಆಡಳಿತ ಮಂಡಳಿಯೊಂದಿಗೆ ಇನ್ನೂ ಸಂಪರ್ಕ ಸಾಧ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಕೆಲ ರೈತರು ಕಾರ್ಖಾನೆ ಮಾಲೀಕರನ್ನು ಭೇಟಿಯಾಗಿ ಕಬ್ಬು ನಿಂತಲ್ಲೇ ಒಣಗುತ್ತಿದ್ದು, ವಿದ್ಯುತ್ ಅವಘಡಗಳಿಂದ ಬೆಂಕಿಗೆ ಆಹುತಿಯಾಗುತ್ತಿದೆ. ಆದ್ದರಿಂದ ಮೊದಲು ಕಾರ್ಖಾನೆ ಆರಂಭಿಸಿ, ಸರ್ಕಾರ ನಿಗದಿಪಡಿಸುವ ದರವನ್ನು ನಂತರ ಪಾವತಿಸುವಂತೆ ಮನವಿ ಮಾಡಿಕೊಂಡಿರುವ ಮಾಹಿತಿ ಇದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ ನಿಗದಿಪಡಿಸಿರುವ ದರವನ್ನು ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೂ ನೀಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ರೈತರು, ಕಾರ್ಖಾನೆ ಮಾಲೀಕರು ಹಾಗೂ ಸಚಿವರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗುವುದು. ಎರಡು ದಿನಗಳಲ್ಲಿ ಸಭೆ ಕರೆಯುವ ಕುರಿತು ರೈತರಿಗೆ ತಿಳಿಸಲಾಗಿದೆ. ರೈತರ ಬೇಡಿಕೆ ಮತ್ತು ಕಾರ್ಖಾನೆಗಳ ನಿಲುವಿನ ನಡುವೆ ಒಮ್ಮತ ಮೂಡಿಸಿ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಪ್ರಯತ್ನಿಸಲಿದೆ ಎಂದು ತಿಳಿಸಿದರು.