ರಸ್ತೆಬದಿ ಸಾಲುಮರಗಳ ತೆರವಿಗೆ ಸಿದ್ಧತೆ

KannadaprabhaNewsNetwork |  
Published : Mar 11, 2026, 02:00 AM IST
10ಜಿಡಿಜಿ4 | Kannada Prabha

ಸಾರಾಂಶ

ಬಿರುಬಿಸಿಲಿನ ತಾಪದಲ್ಲಿ ಈ ರಸ್ತೆ ಮೇಲೆ ಹೋಗುತ್ತಿದ್ದರೆ ಮರಗಳು ಎರಡು ರಸ್ತೆಗೆ ಬಾಗಿ ನೆರಳು ನೀಡುತ್ತಿವೆ. ವಾಹನ ಸವಾರರಿಗೆ ಆಹ್ಲಾದಕರ ವಾತಾವರಣ ಅನುಭವ ನೀಡುತ್ತಿದೆ.

ಮಹೇಶ ಛಬ್ಬಿ

ಗದಗ: ನೂರಾರು ವರ್ಷಗಳಿಂದ ರಸ್ತೆಯ ಸೌಂದರ್ಯ ಹೆಚ್ಚಿಸಿ, ದಣಿದವರಿಗೆ, ವಾಹನ ಸವಾರರಿಗೆ ನೆರಳು ನೀಡಿ, ಜೀವ ಸಂಕುಲಗಳಿಗೆ ಆಶ್ರಯ ನೀಡಿದ ಬೃಹತ್‌ ಮರಗಳಿಗೆ ಅರಣ್ಯ ಇಲಾಖೆ ಕೊಡಲಿಪೆಟ್ಟು ನೀಡಲು ಮುಂದಾಗಿದೆ.

ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿವೆ ಎನ್ನುವ ಕಾರಣಕ್ಕೆ ಗದಗ- ಮುಳಗುಂದ ನಡುವಿನ ರಸ್ತೆ ಅಕ್ಕ-ಪಕ್ಕದಲ್ಲಿರುವ ರಸ್ತೆಬದಿ ಇರುವ ಸುಮಾರು 45 ಮರಗಳ ರೆಂಬೆ ಕೊಂಬೆ ಕತ್ತರಿಸಲು ಹಾಗೂ 15 ಮರಗಳನ್ನು ಸಂಪೂರ್ಣ ತೆರವುಗೊಳಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದು, ಪರಿಸರಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಇತ್ತೀಚೆಗೆ ರಸ್ತೆ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದೆ. ಕಾಮಗಾರಿ ಕೈಗೊಳ್ಳುವ ಮುನ್ನವೇ ಲೋಕೋಪಯೋಗಿ ಇಲಾಖೆ ರಸ್ತೆಗೆ ಅಡ್ಡ ಬರುವ ಮರಗಳ ತೆರವು ಕೈಗೊಳ್ಳದೆ ಹಾಗೇ ಬಿಟ್ಟಿದೆ. ರಸ್ತೆ ಅಭಿವೃದ್ಧಿ ನಂತರ ಮರಗಳ ತೆರವು ಕಾರ್ಯಕ್ಕೆ ಸಿದ್ಧತೆ ನಡೆಸಿದ್ದು, ಜನತೆಗೆ ಅಚ್ಚರಿ ಮೂಡಿಸಿದೆ.ಹಲವು ವರ್ಷಗಳಿಂದ ರಸ್ತೆಯ ಎರಡು ಬದಿ ಸಮೃದ್ಧವಾಗಿ ಬೆಳೆದು ನಿಂತಿರುವ ಹುಣಸೆ ಹಾಗೂ ಬೇವಿನ ಮರಗಳು ರಸ್ತೆಯ ಸೌಂದರ್ಯಕ್ಕೆ ಕಾರಣವಾಗಿದೆ. ಅಲ್ಲದೆ ರಸ್ತೆಯ ಬದಿಗಳಲ್ಲಿ 250ಕ್ಕೂ ಹೆಚ್ಚು ಮರಗಳಿವೆ. ಮಳೆಗಾಲದಲ್ಲಿ ಹಚ್ಚ ಹಸುರಿನಿಂದ ಕಂಗೊಳಿಸಿ, ಬೇಸಿಗೆಯಲ್ಲಿ ತಂಪಿನ ವಾತಾವರಣ ನೀಡುತ್ತಿವೆ.

ಬಿರುಬಿಸಿಲಿನ ತಾಪದಲ್ಲಿ ಈ ರಸ್ತೆ ಮೇಲೆ ಹೋಗುತ್ತಿದ್ದರೆ ಮರಗಳು ಎರಡು ರಸ್ತೆಗೆ ಬಾಗಿ ನೆರಳು ನೀಡುತ್ತಿವೆ. ವಾಹನ ಸವಾರರಿಗೆ ಆಹ್ಲಾದಕರ ವಾತಾವರಣ ಅನುಭವ ನೀಡುತ್ತಿದೆ. ಹೀಗಿದ್ದರೂ ಮರಗಳ ತೆರವಿಗೆ ಅರಣ್ಯ ಇಲಾಖೆ ಮುಂದಾಗಿದ್ದು, ತಕರಾರು, ಅಶ್ಲೇಷಣೆಗೆ ಪ್ರಕಟಣೆ ನೀಡಿರುವುದು ವಾಹನ ಸವಾರರ, ಪರಿಸರಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಆಕ್ಷೇಪಣೆ ಸಲ್ಲಿಸಲು ಸೂಚನೆ: ಗದಗ- ಮುಳಗುಂದ ರಸ್ತೆಗೆ ಅಡ್ಡಲಾಗಿರುವ ರಸ್ತೆಯ ಎಡಬದಿ ಹಾಗೂ ಬಲ ಬದಿಯಲ್ಲಿರುವ ಮರಗಳನ್ನು ತೆರವುಗೊಳಿಸಲಾಗುತ್ತಿದ್ದು, ಈ ಬಗ್ಗೆ ತಕರಾರು ಸಲ್ಲಿಸಬಯಸುವವರಿಗೆ ಮಾ. 12ರೊಳಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗದಗ ಉಪವಿಭಾಗ, ಬಿಂಕದಕಟ್ಟಿ ಕಚೇರಿಗೆ ಹಾಗೂ ಮಾ. 13ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರ ವರೆಗೆ ನಾಗಾವಿ ಕ್ರಾಸ್ ಮತ್ತು ಮುಳಗುಂದ ಬಸಾಪುರ ಕ್ರಾಸ್‌ದಲ್ಲಿ ಬಂದು ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಲು ಅರಣ್ಯ ಇಲಾಖೆ ಸೂಚಿಸಿದೆ.

ಪವನ ವಿದ್ಯುತ್ ಕಂಪನಿಯ ಒತ್ತಡ?

ಸದ್ಯ ಮುಳಗುಂದ ವ್ಯಾಪ್ತಿಯ ರೈತರ ಹೊಲಗಳಲ್ಲಿ ಪವನ ವಿದ್ಯುತ್‌ ಕಂಪನಿಯ ಫ್ಯಾನ್‌ಗಳ ಅಳವಡಿಕೆ ಕೆಲಸ ಪ್ರಾರಂಭಿಸಿದ್ದು, ಅದಕ್ಕೆ ಸಂಬಂಧಿಸಿದ ಫ್ಯಾನ್‌ ರೆಕ್ಕೆಗಳು, ಇನ್ನಿತರ ಸಲಕರಣೆಗಳು ಬೃಹತ್‌ ವಾಹನಗಳಲ್ಲಿ ಗದಗದಿಂದ ಮುಳಗುಂದಕ್ಕೆ ಇದೇ ರಸ್ತೆ ಮಾರ್ಗದಲ್ಲಿಯೇ ಬರುವುದರಿಂದ ಅವುಗಳ ಸಂಚಾರಕ್ಕೆ ಅಡಚಣೆಯುಂಟಾಗುತ್ತದೆ ಎನ್ನುವ ಕಾರಣದಿಂದ ಪವನ ವಿದ್ಯುತ್‌ ಕಂಪನಿಯ ಒತ್ತಡಕ್ಕೆ ಮಣಿದು ಮರಗಳ ತೆರವಿಗೆ ಮುಂದಾಗಿದ್ದಾರೆಯೇ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.ಆಕ್ಷೇಪಣೆ ಸಲ್ಲಿಕೆಯಾದರೆ ತೆರವು ಸ್ಥಗಿತರಸ್ತೆ ಅಭಿವೃದ್ಧಿ ನಂತರ ವಾಹನಗಳ ಸಂಚಾರಕ್ಕೆ ಮರಗಳ ರೆಂಬೆ- ಕೊಂಬೆಗಳು ತಾಗಿ ಅಪಘಾತಗಳು ನಡೆಯುತ್ತಿವೆ ಎನ್ನುವ ಕಾರಣಕ್ಕೆ ಲೋಕೋಪಯೋಗಿ ಇಲಾಖೆ ಅಡಚಣೆ ಉಂಟು ಮಾಡುತ್ತಿರುವ ಮರಗಳನ್ನು ಗುರುತಿಸಿ ಅವುಗಳ ತೆರವಿಗೆ ಮುಂದಾಗಿದೆ. ಈ ಪೈಕಿ 15 ಮರಗಳನ್ನು ಸಂಪೂರ್ಣ ತೆರವು ಮಾಡಬೇಕು ಹಾಗೂ 45 ಮರಗಳ ರೆಂಬೆ- ಕೊಂಬೆ ತೆಗೆಯುವುದಕ್ಕೆ ಗುರುತಿಸಲಾಗಿದೆ. ಸಾರ್ವಜನಿಕರು ಮರಗಳ ತೆರವಿಗೆ ನಿಗದಿತ ಅವಧಿಯೊಳಗೆ ಆಕ್ಷೇಪಣೆ ಸಲ್ಲಿಸಿದ ಪಕ್ಷದಲ್ಲಿ ತೆರವು ಕಾರ್ಯ ಸ್ಥಗಿತಗೊಳಿಸುತ್ತೇವೆ ಎಂದು ಗದಗ ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ವೀರೇಂದ್ರ ಮರಿಬಸಣ್ಣವರ ತಿಳಿಸಿದ್ದಾರೆ.

ಇನ್ನಷ್ಟು ಗಿಡ ನೆಡಿ: ನೂರಾರು ವರ್ಷಗಳಿಂದ ಹುಣಸೆ ಮರಗಳು ಫಲ ನೀಡುವುದರ ಜತೆಗೆ ನೆರಳು ನೀಡುತ್ತಿದ್ದ ಮರಗಳ ತೆರವಿಗೆ ಮುಂದಾಗಿರುವುದು ನೋವು ತರಿಸಿದೆ. ಮರಗಳ ಉಳಿಸುವುದಕ್ಕಾಗಿ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು, ಇನ್ನಷ್ಟು ಗಿಡಗಳನ್ನು ನೆಡುವುದಕ್ಕೆ ಅರಣ್ಯ ಇಲಾಖೆ ಮುಂದಾಗಬೇಕು ಎಂದು ಪರಿಸರಪ್ರೇಮಿ ಮಹಾಂತೇಶ ಎಸ್‌. ಕಣವಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಸತಿ ಶಾಲೆಯ ಸಹಪಾಠಿಗಳ ಮೇಲೆ ದಾಳಿ ಪ್ರಕರಣ: ಬಾಲಕ ಮಾನಸಿಕ ಖಿನ್ನತೆಯೇ ಕಾರಣ?
ಕೆರೆ ತುಂಬಿಸಲು ಅನುದಾನ ನೀಡಿದ್ದು ಕೇಂದ್ರ ಸರ್ಕಾರ