ಧಾರವಾಡದಲ್ಲಿ ಭಕ್ತಿಮಯ ಮಹಾ ಶಿವರಾತ್ರಿಗೆ ಸಿದ್ಧತೆ

KannadaprabhaNewsNetwork |  
Published : Feb 14, 2026, 02:30 AM IST
ಮಹಾಶಿವರಾತ್ರಿ ನಿಮಿತ್ತ ಧಾರವಾಡದ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಶುಕ್ರವಾರ ನಡೆದ ಶಿವಸ್ಫೂರ್ತಿ ಶಿವರಾತ್ರಿ ಸಂಗೀತೋತ್ಸವದಲ್ಲಿ ಖ್ಯಾತ ಗಾಯಕಿ ಆರತಿ ಅಂಕಲೀಕರ ಅವರು ಗಾಯನ ಪ್ರಸ್ತುತಪಡಿಸಿದರು. | Kannada Prabha

ಸಾರಾಂಶ

ಚಳಿಗಾಲದ ಅಂತ್ಯ ಮತ್ತು ಬೇಸಿಗೆಯ ಆರಂಭದ ಈ ಅವಧಿಯು ದೇಹದ ಸಿದ್ಧತೆಗೆ, ಉಪವಾಸ ಮತ್ತು ಧ್ಯಾನಕ್ಕೆ ಪೂರಕವಾಗಿದೆ ಎಂದು ವೈಜ್ಞಾನಿಕವಾಗಿಯೂ ಶಿವರಾತ್ರಿಯನ್ನು ಕರೆಯುತ್ತಾರೆ.

ಧಾರವಾಡ:

ಶಿವನು ಮೊದಲ ಬಾರಿಗೆ ಲಿಂಗ ಸ್ವರೂಪದಲ್ಲಿ ಪ್ರಕಟವಾದ ದಿನ, ಭಕ್ತಿ-ಉಪವಾಸ ಮತ್ತು ಜಾಗರಣೆಯ ಮೂಲಕ ಅಜ್ಞಾನ ಹೋಗಲಾಡಿಸಿ, ಆಧ್ಯಾತ್ಮಿಕ ಜಾಗೃತಿ ಹಾಗೂ ಆಂತರಿಕ ಶಾಂತಿಯನ್ನು ಸಾಧಿಸುವ ಮಹತ್ವದ ರಾತ್ರಿ ಎಂದೇ ಕರೆಯುವ ಮಹಾಶಿವರಾತ್ರಿಯು ನಮ್ಮ ಎದುರಿಗಿದೆ.

ಚಳಿಗಾಲದ ಅಂತ್ಯ ಮತ್ತು ಬೇಸಿಗೆಯ ಆರಂಭದ ಈ ಅವಧಿಯು ದೇಹದ ಸಿದ್ಧತೆಗೆ, ಉಪವಾಸ ಮತ್ತು ಧ್ಯಾನಕ್ಕೆ ಪೂರಕವಾಗಿದೆ ಎಂದು ವೈಜ್ಞಾನಿಕವಾಗಿಯೂ ಶಿವರಾತ್ರಿಯನ್ನು ಕರೆಯುತ್ತಾರೆ. ಅಂದು ಬಿಲ್ವಪತ್ರೆ ಅರ್ಪಿಸಿ, ಶಿವಲಿಂಗಕ್ಕೆ ಅಭಿಷೇಕ ಮಾಡುವುದು ಪವಿತ್ರವೆಂದು ಪರಿಗಣಿಸಲಾಗಿದೆ. ಹೀಗಾಗಿ ವಿಶೇಷವಾಗಿ ಶಿವನ ದೇವಾಲಯಗಳಲ್ಲಿ ಬೆಳಗಿನಿಂದ ರಾತ್ರಿ ವರೆಗೂ ಶಿವನ ಪೂಜೆ, ಆರಾಧನೆ ಇರುತ್ತದೆ.

ಈ ಬಾರಿ ಭಾನುವಾರ ಎಲ್ಲೆಡೆ ಮಹಾಶಿವರಾತ್ರಿ ಆಚರಿಸುತ್ತಿದ್ದು, ಧಾರವಾಡದಲ್ಲೂ ಶಿವನ ಆರಾಧನಗೆ ಭಕ್ತರು ಸಿದ್ಧರಾಗಿದ್ದಾರೆ. ಧಾರವಾಡದ ಶಾಲ್ಮಲಾ ನದಿ ಉಗಮ ಸ್ಥಾನದ ಬಳಿ ಇರುವ, ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಪುರಾತನಿ ಶಿವನ ದೇವಾಲಯ ಸೋಮೇಶ್ವರ ದೇವಸ್ಥಾನದಲ್ಲಿ ವಿಶೇಷವಾಗಿ ಶಿವರಾತ್ರಿ ನಡೆಯಲಿದೆ. ಅಂದು ಬೆಳಗ್ಗೆ 4ರಿಂದ ರಾತ್ರಿ ವರೆಗೂ ಶಿವನಿಗೆ ಪೂಜೆಗಳು ನೆರವೇರಲಿವೆ. ಸಾವಿರಾರು ಜನರು ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸುತ್ತಾರೆ. ಅದೇ ರೀತಿ ಕೆಲಗೇರಿಯ ಕಲ್ಮೇಶ್ವರ ದೇವಸ್ಥಾನ, ಗುಲಗಂಜಿಕೊಪ್ಪದ ಶಿವಾಲಯ, ಶ್ರೀನಗರದ ಶಿವಾಲಯ ಸೇರಿದಂತೆ ಧಾರವಾಡದ ಎಲ್ಲ ಶಿವನ ದೇವಾಲಯದಲ್ಲಿ ಶಿವರಾತ್ರಿ ನಿಮಿತ್ತ ವಿಶೇಷ ಪೂಜೆ-ಪುನಸ್ಕಾರ ನಡೆಯಲಿವೆ.

ಇನ್ಮು, ಪ್ರತಿ ಶಿವರಾತ್ರಿಯಂದು ಧಾರವಾಡದಲ್ಲಿ ಅಹೋರಾತ್ರಿ ಸಂಗೀತೋತ್ಸವ ಜರುಗಲಿದೆ. ಈ ಸಂಗೀತೋತ್ಸವಕ್ಕೆ ಈ ಬಾರಿ 50ನೇ ವರ್ಷ ತುಂಬಿದ್ದು, ನಾಡಿನ ಖ್ಯಾತನಾಮ ಸಂಗೀತಗಾರರಿಂದ ಸಂಗೀತೋತ್ಸವ ಹಾಗೂ ಶಿವಸ್ಫೂರ್ತಿ ಹೆಸರಿನ ಪ್ರಶಸ್ತಿಗಳ ಪ್ರದಾನ ಸಮಾರಂಭ ಆಲೂರು ವೆಂಕಟರಾವ್‌ ಭವನ ಹಾಗೂ ಮಂಗಳವಾರ ಪೇಟ್ ಮುದಿಮಾರುತಿ ದೇವಸ್ಥಾನದಲ್ಲಿ ನಡೆಯಲಿದೆ.

ಉಪವಾಸ, ಆರಾಧನೆ:

ಶಿವನ ಪೂಜೆ-ಪುನಸ್ಕಾರದ ಜತೆಗೆ ಇಡೀ ರಾತ್ರಿ ಶಿವನ ಆರಾಧನೆ, ಭಜನೆ ಮಾಡುವುದು ಸಹ ರೂಢಿ. ಅಂತೆಯೇ, ದೇವಸ್ಥಾನಗಳಲ್ಲಿ ಆರಾಧನೆ ಇರಲಿದೆ. ಇನ್ನು, ಉಪವಾಸ ಕಾಲದಲ್ಲಿ ಹಣ್ಣು-ಹಂಪಲು, ಉತ್ತತ್ತಿ, ಖರ್ಜೂರ ಸೇವನೆ ಇರಲಿದೆ. ಕೆಲವರು ಉಪವಾಸದಲ್ಲಿ ಬರೀ ನೀರು ಮಾತ್ರ ಸೇವಿಸುತ್ತಾರೆ. ಇನ್ನು, ಕೆಲವರು ಸಂಜೆ ಪೂಜೆ ಸಲ್ಲಿಸಿ ಉಪವಾಸ ಬಿಡುವ ಹಾಗೂ ರಾತ್ರಿ ಪೂರ್ತಿ ಉಪವಾಸ ಸಹ ಮಾಡುತ್ತಾರೆ. ಶಿವರಾತ್ರಿ ನಿಮಿತ್ತ ಧಾರವಾಡದ ಮಾರುಕಟ್ಟೆಯಲ್ಲಿ ಕಲ್ಲಂಗಡಿ, ಖರ್ಜೂರ, ದ್ರಾಕ್ಷಿ ಸೇರಿದಂತೆ ತರಹೇವಾರಿ ಹಣ್ಣುಗಳು ಲಗ್ಗೆ ಇಟ್ಟಿವೆ. ಅದರಲ್ಲೂ ಈ ಬಾರಿ 2ನೇ ಶನಿವಾರ ರಜೆ, ಭಾನುವಾರ ಶಿವರಾತ್ರಿ ಬಂದಿದ್ದು, ಜನರಿಗೆ ತುಸು ಅನುಕೂಲ ಸಹ ಆಗಿದೆ. ಅಪೂರ್ವ ಯೋಗಗಳ ಸಂಗಮ...

ಶಿವರಾತ್ರಿ ಪ್ರತಿ ಬಾರಿ ಮಾಘಕೃಷ್ಣ ಚತುರ್ದಶಿಯಂದು ಆಚರಿಸುತ್ತೇವೆ. ಈ ಆಚರಣೆಯಿಂದ ಶಿವನ ಅನುಗ್ರಹ ಪಡೆಯುತ್ತೇವೆ. ಈ ಬಾರಿ ಶಿವರಾತ್ರಿ ವಿಶೇಷವಾಗಿದ್ದು, ಫೆ. 15ರಂದು ಪಾತಾರ್ಕಯೋಗ, ಪದ್ಮಕಯೋಗಗಳು ಕೂಡಿ ಬಂದಿದ್ದು ಅಪೂರ್ವ ಯೋಗಗಳ ಸಂಗಮ. ಶಿವನ ಆರಾಧನೆಯೊಂದಿಗೆ ಸಮುದ್ರ ಸ್ನಾನ, ದಾನ ಮತ್ತು ಜಪಕ್ಕೆ ಪರ್ವ ಕಾಲವಿದು. ಸಾವಿರ ಗ್ರಹಣದ ಫಲ ದೊರೆಯಲಿದೆ ಎಂದು ವಿಶ್ವನಾಥಶಾಸ್ತ್ರಿ ಜೋಶಿ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌