ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಮುಂಬರುವ ಡಿಜಿಟಲ್ ಜನಗಣತಿ ಅತ್ಯಂತ ನಿಖರವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕೆಸ್ವಾನ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಸಿದ್ಧತೆಗಳನ್ನು ಪರಿಶೀಲಿಸಿದರು. ಮುಂಬರುವ ಡಿಜಿಟಲ್ ಜನಗಣತಿ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಕೇವಲ ಅಂಕಿ-ಅಂಶಗಳನ್ನು ಸಂಗ್ರಹಿಸುವುದಷ್ಟೇ ಅಲ್ಲದೆ, ಗುಣಮಟ್ಟದ ದತ್ತಾಂಶ ಸಂಗ್ರಹಣೆಗೆ ಆದ್ಯತೆ ನೀಡಬೇಕು. ಇದಕ್ಕಾಗಿ ಎನ್ಯೂಮರೇಟರ್‌ಗಳಿಂದ ಹಿಡಿದು ಚಾರ್ಜ್ ಆಫೀಸರ್‌ಗಳವರೆಗೆ ಎಲ್ಲರಿಗೂ ವ್ಯವಸ್ಥಿತ ತರಬೇತಿ ನೀಡಲಾಗುವುದು.ಜನಗಣತಿ ಕಾರ್ಯಕ್ಕಾಗಿ ಕಚೇರಿಗಳಿಗೆ ಅಗತ್ಯವಿರುವ ಕಂಪ್ಯೂಟರ್, ಸ್ಕ್ಯಾನರ್, ಪ್ರಿಂಟರ್ ಮತ್ತು ನೆಟ್ ಸೌಲಭ್ಯಗಳನ್ನು ಒದಗಿಸಲು ಅನುದಾನ ನೀಡಲಾಗುವುದು. ಇವುಗಳು ಕಚೇರಿಯ ಶಾಶ್ವತ ಆಸ್ತಿಯಾಗಿ ಉಳಿಯಲಿವೆ. ಜನಗಣತಿ ಕಾರ್ಯವು ಸಮಯದ ಮಿತಿಯೊಳಗೆ ನಡೆಯಬೇಕಾದ ಪ್ರಕ್ರಿಯೆಯಾಗಿದ್ದು, 2027ರ ಫೆಬ್ರವರಿಯಿಂದ ಎನ್ಯೂಮರೇಷನ್ ಕಾರ್ಯ ಆರಂಭವಾಗಲಿದೆ. ಸದ್ಯಕ್ಕೆ ಮನೆಗಳ ಪಟ್ಟಿ ಮಾಡುವಿಕೆ ಮತ್ತು ಬ್ಲಾಕ್‌ಗಳ ಗುರುತಿಸುವಿಕೆ ಪ್ರಕ್ರಿಯೆ ನಡೆಯಲಿದೆ.
ಇದು ರಾಷ್ಟ್ರೀಯ ಮಟ್ಟದ ಪ್ರಮುಖ ಕಾರ್ಯವಾಗಿದ್ದು, ಚುನಾವಣಾ ಕೆಲಸ ಗಂಭೀರವಾದುದು. ಅಧಿಕಾರಿಗಳ ನಡುವೆ ಸಮರ್ಪಕ ಸಮನ್ವಯತೆ ಇರಬೇಕು. ಯಾವುದೇ ನಿರ್ಲಕ್ಷ್ಯ ತೋರಿದಲ್ಲಿ ನೇರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.ತಾಂತ್ರಿಕ ಬಳಕೆ ಮತ್ತು ನಿರ್ವಹಣೆ:ಈ ಬಾರಿಯ ಜನಗಣತಿಯು ಸಂಪೂರ್ಣ ಡಿಜಿಟಲ್ ಆಗಿರಲಿದ್ದು, ವೆಬ್ ಪೋರ್ಟಲ್ ಮೂಲಕ ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರಕ್ರಿಯೆ ಮೇಲ್ವಿಚಾರಣೆ ಮಾಡಲಿದ್ದಾರೆ. ಕ್ಷೇತ್ರ ಮಟ್ಟದ ಎನ್ಯುಮರೇಟರ್‌ಗಳು ಕ್ರಿಯೇಟರ್ ಆಪ್ ಬಳಸಿ ಪ್ರತಿ ಬ್ಲಾಕ್‌ನ ಮನೆಗಳ ಲೊಕೇಶನ್ ಮತ್ತು ವ್ಯಾಪ್ತಿ ಜಿಯೋ ಟ್ಯಾಗಿಂಗ್ ಮೂಲಕ ಗುರುತಿಸಲಿದ್ದಾರೆ. ಸಾರ್ವಜನಿಕರಿಗೆ ಸ್ವಯಂ ನೋಂದಣಿ ಮಾಡಿಕೊಳ್ಳಲು ಸೆಲ್ಫ್ ಎನ್ಯುಮರೇಶನ್ ಪೋರ್ಟಲ್ ಮತ್ತು ಮಾಹಿತಿ ಪಡೆಯಲು ಚಾಟ್‌ಬಾಟ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಈ ಅಪ್ಲಿಕೇಶನ್ ಅಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಲಭ್ಯವಿದ್ದು, 16 ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯನಿರ್ವಹಿಸಲಿದೆ.ಸಿಬ್ಬಂದಿ ನೇಮಕ ಮತ್ತು ತರಬೇತಿ:ಜನಗಣತಿ ಕಾರ್ಯಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಎಡಿಸಿ ಅವರನ್ನು ಜಿಲ್ಲಾ ಜನಗಣತಿ ಅಧಿಕಾರಿಯಾಗಿ ಹಾಗೂ ಸಿಪಿಒರನ್ನು ಹೆಚ್ಚುವರಿ ಜಿಲ್ಲಾ ಜನಗಣತಿ ಅಧಿಕಾರಿಯಾಗಿ ನೇಮಿಸಲಾಗಿದೆ. ತಾಲೂಕು ಮಟ್ಟದಲ್ಲಿ ತಹಸೀಲ್ದಾರರು ಚಾರ್ಜ್ ಆಫೀಸರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.ಶಿಕ್ಷಕರು ಮತ್ತು ಸಿಆರ್‌ಪಿಗಳನ್ನು ಎನ್ಯುಮರೇಟರ್‌ಗಳಾಗಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದ್ದು, ಸ್ಮಾರ್ಟ್‌ಫೋನ್ ಬಳಕೆ ಗೊತ್ತಿರುವ ಮತ್ತು ಲವಲವಿಕೆಯಿಂದ ಕೆಲಸ ಮಾಡುವವರನ್ನು ಆದ್ಯತೆಯ ಮೇಲೆ ಆಯ್ಕೆ ಮಾಡಲು ಸೂಚಿಸಿದರು.ಸಭೆಯಲ್ಲಿ ಜಿಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ, ಎಡಿಸಿ ಎಸ್.ಎಂ.ಮಂಗಳ, ಎಸಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್, ಜಿಲ್ಲಾ ಸಂಖ್ಯೆ ಸಂಗ್ರಹನಾಧಿಕಾರಿ ಗುರು ಮಹಾದೇವಯ್ಯ ಇದ್ದರು.