ಕಟ್ಟಡ ನಿರ್ಮಾಣಕ್ಕೆ 50 ಎಕರೆ ಭೂಮಿ ಖರೀದಿ । ನೇಮಕಾತಿಗೂ ಅರ್ಜಿ ಆಹ್ವಾನ
ರಾಮಮೂರ್ತಿ ನವಲಿಕನ್ನಡಪ್ರಭ ವಾರ್ತೆ ಗಂಗಾವತಿ
ನಗರದಲ್ಲಿ ಖಾಸಗಿ ವೈದ್ಯಕೀಯ ಕಾಲೇಜು (ಎಂಬಿಬಿಎಸ್) ಪ್ರಾರಂಭಕ್ಕೆ ಸಿದ್ಧತೆ ನಡೆದಿದ್ದು, ಇದಕ್ಕಾಗಿ 50 ಎಕರೆ ಭೂಮಿ ಖರೀದಿಸಲಾಗಿದೆ. ವೈದರ ತಂಡ ವೈದ್ಯಕೀಯ ಕಾಲೇಜು ನಿರ್ಮಾಣದ ಸಿದ್ಧತೆಗೆ ಮುಂದಾಗಿದೆ."ಅಜ್ಜಯ್ಯ ಅಂಜನಾದ್ರಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ " ಎನ್ನುವ ಶಿರೋನಾಮೆಯಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭದ ಪ್ರಕ್ರಿಯೆ ನಡೆದಿದೆ. ಈಗಾಗಲೇ ಗಂಗಾವತಿ ನಗರದಲ್ಲಿ ಬಿಎಎಂಎಸ್, ಪ್ಯಾರಾ ಮೆಡಿಕಲ್, ಬಿಎಸ್ ಸಿ ನರ್ಸರಿ ಸೈನ್ಸ್ ಸೇರಿದಂತೆ ವಿವಿಧ ಕೋರ್ಸಗಳು ನಗರದಲ್ಲಿ ನಡೆಯುತ್ತಿವೆ.
ಈಗ ಅಜ್ಜಯ್ಯ ಅಂಜನಾದ್ರಿ ಹೆಸರಿನಲ್ಲಿ ಪ್ರಾರಂಭಕ್ಕೆ ಮುಂದಾಗಿರುವ ವೈದ್ಯರ ತಂಡ ಕಳೆದ ಎರಡು ವರ್ಷಗಳ ಹಿಂದೆ ತಾಲೂಕಿನ ಹೇಮಗುಡ್ಡದ ಬಳಿ ಕಾಲೇಜು ನಿರ್ಮಾಣಕ್ಕಾಗಿ 50 ಎಕರೆ ಭೂಮಿ ಖರೀದಿಸಿದೆ.ನೇಮಕಾತಿಗೂ ಆಹ್ವಾನ:
ಅಜ್ಜಯ್ಯ ಅಂಜನಾದ್ರಿ ಹೆಸರಿನಲ್ಲಿ ವೈದ್ಯಕೀಯ ಶಿಕ್ಷಣ ಪ್ರಾರಂಭಿಸುವುದರ ಜೊತೆಗೆ ಪ್ರೋಫೆಸರ್, ಅಸಿಸ್ಟೆಂಟ್ ಫ್ರೋಫೆಸರ್, ಮೆಡಿಕಲ್ ಸೂಪರಿಡೆಂಟ್, ನರ್ಸಿಂಗ್ ಸೂಪರಿಂಟೆಂಡೆಂಟ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.ನೀಟ್ ಪರೀಕ್ಷೆಯಲ್ಲಿ ಅತಿ ಕಡಿಮೆ ಅಂಕ ಪಡೆದ ಅತೀ ಹೆಚ್ಚು ವಿದ್ಯಾರ್ಥಿಗಳು ಗಂಗಾವತಿ ನಗರ ಸೇರಿದಂತೆ ಕೊಪ್ಪಳ ಜಿಲ್ಲೆಯಿಂದ ವೈದ್ಯಕೀಯ ಶಿಕ್ಷಣಕ್ಕೆ ಹೊರ ರಾಷ್ಟ್ರಗಳಿಗೆ ತೆರಳಿದ್ದಾರೆ. ಕಡಿಮೆ ಡೋನೇಷನ್ ಇದ್ದಿದ್ದರಿಂದ ಹೊರ ರಾಷ್ಟ್ರಗಳಿಗೆ ಶಿಕ್ಷಣಕ್ಕೆ ತೆರಳಿದ್ದಾರೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಅತಿ ಹೆಚ್ಚು ಡೋನೇಷನ್ ಇದ್ದಿದ್ದರಿಂದ ಅವಕಾಶದಿಂದ ವಂಚಿತರಾಗಿ ಹೊರ ರಾಷ್ಟ್ರಗಳತ್ತ ಸಾಗಿದ್ದಾರೆ.
ಪ್ರಸ್ತುತ ಗಂಗಾವತಿ ನಗರದಲ್ಲಿ ವೈದ್ಯಕೀಯ ಶಿಕ್ಷಣ ಪ್ರಾರಂಭದ ಮೂನ್ಸೂಚನೆ ನಡೆದಿದ್ದು, ನೇಮಕಾತಿ, ಕಟ್ಟಡ, ಅನುದಾನ ಸೇರಿದಂತೆ ನಿರ್ಮಾಣದ ಪ್ರಕ್ರಿಯೆ ನಡೆದಿರುವುದಕ್ಕೆ ಈ ಭಾಗದ ವಿದ್ಯಾರ್ಥಿಗಳಿಗೆ ಆಶಾದಾಯಕವಾಗಿದೆ.ಗಂಗಾವತಿ ನಗರದಲ್ಲಿ ಅಜ್ಜಯ್ಯ ಅಂಜನಾದ್ರಿ ಹೆಸರಿನಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಸಮಾನ ಮನಸ್ಕರ ವೈದ್ಯರು ಮುಂದಾಗಿದ್ದಾರೆ. ಇದಕ್ಕಾಗಿ 50 ಎಕರೆ ಭೂಮಿಯು ಖರೀದಿಯಾಗಿದ್ದು, ನೇಮಕಾತಿ ಪ್ರಕ್ರಿಯೆಯೂ ಪ್ರಾರಂಭವಾಗಿದೆ ಎನ್ನುತ್ತಾರೆ ವೈದ್ಯಕೀಯ ಕಾಲೇಜು ನಿರ್ಮಾಣ ತಂಡದ ಸದಸ್ಯ ಡಾ. ಅಮರ್ ಪಾಟೀಲ್.