ಕನ್ನಡಪ್ರಭ ವಾರ್ತೆ ಮಂಗಳೂರು/ಉಡುಪಿ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ಗಣೇಶನ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಗಣೇಶನ ಹಬ್ಬ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಲಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟು ೩೮೬ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ನಡೆಯಲಿದೆ. ಇದಕ್ಕಾಗಿ ಪೆಂಡಾಲ್ ನಿರ್ಮಾಣ, ಸ್ವಾಗತ ಕಮಾನು, ದೀಪಾಲಂಕಾರ ಸಹಿತ ಉತ್ಸವ ಆಚರಣೆಗೆ ಸಂಬಂಧಿಸಿದ ಎಲ್ಲ ರೀತಿಯ ಸಿದ್ಧತೆಗಳು ನಡೆದಿದೆ. ಶುಕ್ರವಾರ ಸಂಜೆಯಿಂದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆಗಾಗಿ ಕೊಂಡೊಯ್ಯವ ಸಂಭ್ರಮ ನಡೆಯುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 481 ಪೆಂಡಾಲ್‌ಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಕಳೆದ ವರ್ಷ 474 ಪೆಂಡಾಲ್‌ಗಳಿಗೆ ಅನುಮತಿ ನೀಡಲಾಗಿತ್ತು.ಖರೀದಿ ಭರಾಟೆ: ಗಣೇಶೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಕಬ್ಬು, ಹೂವು, ಹಣ್ಣುಗಳ ಖರೀದಿ ಜೋರಾಗಿ ನಡೆಯುತ್ತಿದೆ. ದ.ಕ.ದಲ್ಲಿ ಮಳೆಯ ಆತಂಕದ ನಡುವೆಯೂ ಖರೀದಿ ನಡೆಯುತ್ತಿದೆ. ಗಣೇಶನಿಗೆ ಪ್ರಿಯವಾದ ವಸ್ತುಗಳ ಜತೆಗೆ ಪೂಜಾ ಸಾಮಾಗ್ರಿಗಳ ಖರೀದಿ, ಹಣ್ಣು ಹಂಪಲು, ಹೂವು, ತರಕಾರಿಗಳು ದುಬಾರಿ ದರದ ನಡುವೆಯೂ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಕಬ್ಬಿಗೆ (೧೨) ೩೮೦ರಿಂದ ೪೦೦ ರು. ದರವಿದೆ. ಮೂಡೆ ೧೦೦ ರು. ೫ ರಿಂದ ೬ ಕಟ್ಟು ಸಿಗುತ್ತಿದೆ. ಶುಕ್ರವಾರ ಗೌರಿ ಹಬ್ಬವಾಗಿರುವುದರಿಂದ ಕಪ್ಪು ಬಳೆಗಳ ಖರೀದಿಯೂ ನಡೆದಿದೆ. ಖರೀದಿ ಭರಾಟೆ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಂಚಾರ ದಟ್ಟಣೆ ಕಾಣಿಸಿದೆ. ಮಂಗಳೂರಿನ ಶರವು ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಗೌರಿ ಹಬ್ಬದ ಸಡಗರದಂದು ಕದಿರು ವಿನಿಯೋಗ ಕೂಡ ನಡೆದಿದೆ. ಕಳೆದ ಎರಡು ದಿನಗಳಿಂದ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಕಳೆದ ರಾತ್ರಿ ನಿರಂತರ ಮಳೆ ಸುರಿದಿದೆ. ಶುಕ್ರವಾರ ಹಗಲಿನ ವೇಳೆ ಬಿಸಿಲಿನ ವಾತಾವರಣವಿದ್ದರೂ ಮಳೆ ಆತಂಕ ಮರೆಯಾಗಿಲ್ಲ.