ಹಾವೇರಿಯಲ್ಲಿ ಮಹಾಶಿವರಾತ್ರಿ ಆಚರಣೆಗೆ ಸಿದ್ಧತೆ, ದೇಗುಲಗಳಲ್ಲಿ ವಿಶೇಷ ಪೂಜೆ

KannadaprabhaNewsNetwork |  
Published : Feb 26, 2025, 01:02 AM IST
25ಎಚ್‌ವಿಆರ್3 | Kannada Prabha

ಸಾರಾಂಶ

ಶಿವರಾತ್ರಿ ಹಬ್ಬದ ನಿಮಿತ್ತ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಫೆ. 26ರಂದು ವಿಶೇಷ ಪೂಜೆಗಳು ನಡೆಯಲಿವೆ.

ಹಾವೇರಿ: ಮಹಾಶಿವರಾತ್ರಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲು ಜನರು ಸಿದ್ಧತೆ ನಡೆಸಿದ್ದು, ನಗರದ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಹಣ್ಣುಗಳ ವ್ಯಾಪಾರ ಜೋರಾಗಿದೆ. ಬಿಸಿಲು, ಸೆಕೆ ಕೂಡ ಹೆಚ್ಚಾಗುತ್ತಿದ್ದು, ಹಣ್ಣುಗಳ ದರವೂ ದುಬಾರಿಯಾಗಿದೆ.

ನಗರದ ಎಂ.ಜಿ. ರಸ್ತೆ, ನಗರಸಭೆ ಎದುರು, ಜಿಲ್ಲಾಸ್ಪತ್ರೆ ರಸ್ತೆ, ಜಿ.ಎಚ್. ಕಾಲೇಜು ರಸ್ತೆ, ಹಾನಗಲ್ಲ ರಸ್ತೆ, ಬಸ್‌ ನಿಲ್ದಾಣ ರಸ್ತೆಗಳಲ್ಲಿ ನೂರಾರು ಹಣ್ಣು ಮಾರಾಟ ಅಂಗಡಿಗಳನ್ನು ತೆರೆಯಲಾಗಿದೆ. ಕಲ್ಲಂಗಡಿ, ಸೇಬು, ದ್ರಾಕ್ಷಿ, ಕರಬೂಜ, ಖರ್ಜೂರ, ಕಿತ್ತಳೆ, ಮುಸಂಬಿ, ಬಾಳೆಹಣ್ಣು ಸೇರಿದಂತೆ ವಿವಿಧ ಹಣ್ಣುಗಳ ಅಂಗಡಿಗಳು ವ್ಯಾಪಾಕವಾಗಿ ತಲೆಎತ್ತಿದ್ದು, ಎಲ್ಲ ಅಂಗಡಿಗಳಲ್ಲಿ ವ್ಯಾಪಾರ ಭರ್ಜರಿಯಾಗಿತ್ತು.ಶಿವರಾತ್ರಿ ಹಬ್ಬದ ಹಿನ್ನೆಲೆ ಜನರು ಬೆಳಗ್ಗೆಯಿಂದಲೇ ಮಾರುಕಟ್ಟೆಯಲ್ಲಿ ವಿವಿಧ ಹಣ್ಣು, ಹೂವುಗಳನ್ನು ಖರೀದಿಸುತ್ತಿರುವುದು ಕಂಡುಬಂತು. ಹಬ್ಬದ ನಿಮಿತ್ತ ಮಾರುಕಟ್ಟೆಗೆ ಕಲ್ಲಂಗಡಿ, ಕರಬೂಜದ ಹಣ್ಣುಗಳ ರಾಶಿಯೇ ಕಾಣುತ್ತಿದೆ.

ನಗರಕ್ಕೆ ತಮಿಳುನಾಡಿನಿಂದ ಕಲ್ಲಂಗಡಿ ಹಣ್ಣುಗಳನ್ನು ತರಿಸಲಾಗಿದ್ದು, ಒಂದು ಕೆಜಿಗೆ ₹20- ₹25ರ ವರೆಗೂ ಮಾರಾಟ ಮಾಡಲಾಗುತ್ತಿದೆ. ಇನ್ನು ಆಂಧ್ರಪ್ರದೇಶದಿಂದ ತಂದ ಸಣ್ಣ ಗಾತ್ರದ ಕರಬೂಜ ಹಣ್ಣುಗಳನ್ನು ಕೆಜಿಗೆ ₹60- 70ರ ವರೆಗೆ, ಸೇಬು ಕೆಜಿಗೆ ₹200, ದ್ರಾಕ್ಷಿ ಕೆಜಿಗೆ ₹100, ಕಿತ್ತಳೆ ₹120, ಬಾಳೆಹಣ್ಣು ಒಂದು ಡಜನ್‌ಗೆ ₹50- 60, ದಾಳಿಂಬೆ ಕೆಜಿಗೆ ₹250 ಹೀಗೆ ತರಹೇವಾರಿ ಹಣ್ಣುಗಳ ದರ ಮಾಮೂಲಿಗಿಂತ ತುಸು ದುಬಾರಿಗೆ ಮಾರಾಟವಾಗುತ್ತಿದೆ. ಹಣ್ಣುಗಳ ಖರೀದಿಸುತ್ತಿರುವ ಗ್ರಾಹಕರಿಗೆ ಬಿಸಿಲಿನ ಬೇಗೆಯ ಜತೆಗೆ ಬೆಲೆ ಏರಿಕೆ ಬಿಸಿ ತಾಗಿದ್ದು, ಗ್ರಾಹಕರು ಚೌಕಾಸಿ ಮಾಡಿ ಹಣ್ಣುಗಳನ್ನು ಖರೀದಿಸುತ್ತಿರುವುದು ಕಂಡುಬಂತು.

ಇಂದು ಎಲ್ಲೆಡೆ ಶಿವನಿಗೆ ಪೂಜೆ...ಶಿವರಾತ್ರಿ ಹಬ್ಬದ ನಿಮಿತ್ತ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಫೆ. 26ರಂದು ವಿಶೇಷ ಪೂಜೆಗಳು ನಡೆಯಲಿವೆ. ನಗರದ ಪುರಸಿದ್ದೇಶ್ವರ ದೇವಸ್ಥಾನ, ಹುಕ್ಕೇರಿಮಠ, ಬಸವೇಶ್ವರ ನಗರದ ಸಿ ಬ್ಲಾಕ್‌ನ ಗಣೇಶ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಈಶ್ವರಿ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಬೆಳಗ್ಗೆಯಿಂದಲೇ ಭಕ್ತಾದಿಗಳು ಕುಟುಂಬ ಸಮೇತ ತೆರಳಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇಲ್ಲಿಯ ಮುನ್ಸಿಪಲ್‌ ಮೈದಾನದಲ್ಲಿ ಶಿವರಾತ್ರಿ ಪ್ರಯುಕ್ತ ಸಂಗೀತ ಕಾರ್ಯಕ್ರಮ ಮಂಗಳವಾರ ರಾತ್ರಿ ನಡೆಯಿತು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ