ಮುರ್ಡೇಶ್ವರದಲ್ಲಿ ಅದ್ಧೂರಿ ಶಿವರಾತ್ರಿಗೆ ಸಿದ್ಧತೆ

KannadaprabhaNewsNetwork | Published : Mar 2, 2024 1:47 AM

ಸಾರಾಂಶ

ಮಾ. 8ರಂದು ಮುರ್ಡೇಶ್ವರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಸಿದ್ಧತೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ.

ಭಟ್ಕಳ: ಮಾ. 8ರಂದು ಮುರ್ಡೇಶ್ವರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ನಡೆಸಲಾಗುವ ಕಾರ್ಯಕ್ರಮದ ಬಗ್ಗೆ ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಸಿದ್ಧತೆ ಬಗ್ಗೆ ಚರ್ಚಿಸಲಾಯಿತು.ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಈ ಸಲ ಮಹಾಶಿವರಾತ್ರಿಯಂದು ಸಂಜೆ 6ರಿಂದ ಬೆಳಗ್ಗೆ ವರೆಗೆ ಮುರ್ಡೇಶ್ವರದಲ್ಲಿ ಮಹಾಶಿವರಾತ್ರಿ ಆಚರಣೆ ನಿಮಿತ್ತ ಕಲಾವಿದರಿಂದ ಭಜನೆ, ನೃತ್ಯ, ಭರತ ನಾಟ್ಯ ಸೇರಿದಂತೆ ಗುಣಮಟ್ಟದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಸಂಪೂರ್ಣ ಪ್ರಾಯೋಜಕರು ಹಾಗೂ ದಾನಿಗಳ ಸಹಾಯದಿಂದ ಮಾಡಲು ತೀರ್ಮಾನಿಸಿದ್ದು ಅತ್ಯುತ್ತಮವಾಗಿ ಆಯೋಜಿಸಿ ಜನರಿಂದ ಪ್ರತಿ ವರ್ಷ ನಡೆಯಲಿ ಎನ್ನುವ ಮೆಚ್ಚುಗೆ ಬರಬೇಕು ಎನ್ನುವ ಕಲ್ಪನೆ ಆಯೋಜಕರಿಗೆ ಇರಲಿ ಎಂದು ಹೇಳಿದರು.ಆಯಾ ಇಲಾಖೆ ಅಧಿಕಾರಿಗಳು ತಮಗೆ ನೀಡಿದ ಜವಾಬ್ದಾರಿಯನ್ನು ಚಾಚೂ ತಪ್ಪದೇ ನಿಭಾಯಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕಾರ ನೀಡಬೇಕು. ಕಾರ್ಯಕ್ರಮದ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡು ಪ್ರವಾಸಿಗರು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮಾಡಬೇಕು. ಪ್ರವಾಸೋದ್ಯಮ ಇಲಾಖೆ ಸ್ಥಳೀಯ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಸಿದ್ಧತಾ ಕಾರ್ಯ ಆರಂಭಿಸಬೇಕು. ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಲೋಪದೋಷ ಉಂಟಾಗದಂತೆ ಗಮನ ಹರಿಸಬೇಕು ಎಂದರು.ಕುಡಿಯುವ ನೀರು, ಸ್ವಚ್ಛತೆ, ಭದ್ರತೆ ಸಮರ್ಪಕವಾಗಬೇಕು. ಎಸಿ, ತಾಪಂ ಇಒ, ತಹಸೀಲ್ದಾರ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಮಾಡಬೇಕಾದ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು. ಕಾರ್ಯಕ್ರಮ ನಡೆಸಲು ಯಾವುದು ಸೂಕ್ತ ಸ್ಥಳ ಎನ್ನುವುದರ ಬಗ್ಗೆ ಮೊದಲು ನಿರ್ಧರಿಸಬೇಕು. ಎಲ್ಲರ ಸಹಕಾರದಿಂದ ಶಿವರಾತ್ರಿ ಪ್ರಯುಕ್ತ ಶಿವತಾಣದಲ್ಲಿ ವಿಜೃಂಭಣೆ ಕಾರ್ಯಕ್ರಮ ಆಗಬೇಕು ಎಂದು ಕರೆ ನೀಡಿದರು.ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಡಿವೈಎಸ್‌ಪಿ ಮಹೇಶ, ಡಿಎಫ್‌ಒ ಯೋಗೀಶ, ಸಹಾಯಕ ಆಯುಕ್ತೆ ಡಾ. ನಯನಾ, ತಹಸೀಲ್ದಾರ್‌ ತಿಪ್ಪೇಸ್ವಾಮಿ, ತಾಪಂ ಇಒ ವಿಡಿ ಮೊಗೇರ, ಮುರ್ಡೇಶ್ವರ ದೇವಸ್ಥಾನ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

Share this article