ಕನ್ನಡಪ್ರಭ ವಾರ್ತೆ ಮಂಗಳೂರು
ಪಡೀಲಿನಲ್ಲಿ ಸುಮಾರು 5.89 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗಿರುವ ಜಿಲ್ಲಾಡಳಿತದ ನೂತನ ಕಚೇರಿ ಸಂಕೀರ್ಣ ಉದ್ಘಾಟನೆಗೆ ಸಿದ್ಧವಾಗುತ್ತಿದೆ. ಎಲ್ಲವೂ ನಿರೀಕ್ಷೆಯಂತೆ ಸಾಗಿದರೆ ಜ.17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯ ನೂತನ ಸಂಕೀರ್ಣಕ್ಕೆ ಶುಕ್ರವಾರ ಭೇಟಿ ನೀಡಿದ ಸ್ಪೀಕರ್ ಯು.ಟಿ.ಖಾದರ್ ಅವರು ಅಂತಿಮ ಹಂತದ ಕಾಮಗಾರಿಯ ಪರಿಶೀಲನೆ ನಡೆಸಿದರು. ಅಲ್ಲದೆ ಉದ್ಘಾಟನೆ ಬಳಿಕ ಕಚೇರಿಗಳ ಕಾರ್ಯಾರಂಭ ಕುರಿತಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ಗೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು.
ಸಾರ್ವಜನಿಕರಿಗೆ ಮುಕ್ತ ಅವಕಾಶ: ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳು ಇಲ್ಲಿ ಒಂದೇ ಸೂರಿನಲ್ಲಿ ಇರುವುದರಿಂದ ಸಾರ್ವಜನಿಕರು ಕಚೇರಿ ಕೆಲಸಕ್ಕೆ ಆಗಮಿಸುತ್ತಿರುತ್ತಾರೆ. ಅವರಿಗೆ ಕುಳಿತುಕೊಳ್ಳಲು ಸೂಕ್ತ ಆಸನ ಸೌಲಭ್ಯ ಕಲ್ಪಿಸಬೇಕು. ಎರಡು ಕಡೆ ಪ್ರವೇಶ ದ್ವಾರ ಇರುವುದರಿಂದ ಕೆಳ ಅಂತಸ್ತಿನಲ್ಲಿ ವಿಶ್ರಾಂತಿಗೆ ಸೌಲಭ್ಯ ಹಾಗೂ ಡಿಸಿ ಕಚೇರಿಯ ಸುತ್ತ ಕಂಪೌಂಡ್ ಬಳಿ ಸಾರ್ವಜನಿಕ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ವಿಕಲಚೇತನರಿಗೆ ಕಚೇರಿಗಳಿಗೆ ಭೇಟಿ ನೀಡಲು ಬೇಕಾದ ಅಗತ್ಯ ವ್ಯವಸ್ಥೆ ಮಾಡಬೇಕು. ಅಹವಾಲು ಸಲ್ಲಿಕೆಗೆ ಹೆಲ್ಫ್ ಡೆಸ್ಕ್ ತೆರೆಯಬೇಕು. ಅಲ್ಲಿಂದಲೇ ಆಯಾ ಇಲಾಖೆಗಳ ಅಧಿಕಾರಿಗಳ ಭೇಟಿಗೆ ಸಾರ್ವಜನಿಕರಿಗೆ ಸುಲಭ ಸೌಕರ್ಯ ಮಾಡಿಕೊಡಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.ಬೃಹತ್ ಒಳಾಂಗಣ ಸಭಾಂಗಣ: ಜಿಲ್ಲಾಧಿಕಾರಿಗಳ ಈ ಹೊಸ ಕಟ್ಟಡದ ಒಳಗೆ ಬೃಹತ್ ಒಳಾಂಗಣ ಆಡಿಟೋರಿಯಂ ನಿರ್ಮಿಸಲಾಗಿದೆ. ಮಲ್ಟಿಪ್ಲೆಕ್ಸ್‌ನಂತೆ ಕಂಡುಬರುವ ಇದರಲ್ಲಿ ಮುಂದಿನ ದಿನಗಳಲ್ಲಿ ಕೆಡಿಪಿ ತ್ರೈಮಾಸಿಕದಂತಹ ಸಭೆಗಳನ್ನು ನಡೆಸಲು ಅನುಕೂಲವಾಗಲಿದೆ. ಅಲ್ಲದೆ ಇಲಾಖೆಗಳ ಸಭೆಗಳನ್ನು ಕೂಡ ಇಲ್ಲೇ ನಡೆಸಬಹುದಾಗಿದೆ. ಈ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳುವಂತೆ ಸ್ಪೀಕರ್ ಯು.ಟಿ.ಖಾದರ್ ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.
ತುಳುನಾಡಿನ ಸಾಂಪ್ರದಾಯಿಕ ಶೈಲಿಯ ಕಟ್ಟಡದ ಮುಖ, ಪ್ರವೇಶ ದ್ವಾರವೂ ಅದೇ ರೀತಿಯ ಭಿನ್ನವಾಗಿರುತ್ತದೆ.. ಆರ್‌ಡಿಪಿಆರ್ ಹೊರತುಪಡಿಸಿ, ಒಂದೇ ಸೂರಿನಡಿ ಎಲ್ಲ ಇಲಾಖೆಗಳು ಕಾರ್ಯನಿರ್ವಹಿಸಿದರೆ ಜನತೆಗೆ ಕಚೇರಿಗಳಿಗೆ ಅಲೆಯುವ ಪ್ರಮೇಯ ತಪ್ಪುತ್ತದೆ, ಸಮಯ ಉಳಿತಾಯವಾಗುತ್ತದೆ ಮಾತ್ರಲ್ಲ ಅಧಿಕಾರಿಗಳೂ ಸಭೆಗಳಿಗೆ ಹೊರಗೆ ಕಚೇರಿಗಳಿಗೆ ತೆರಳುವ ಅವಶ್ಯಕತೆ ಇರುವುದಿಲ್ಲ ಎಂದರು ಸ್ಪೀಕರ್ ಯು.ಟಿ.ಖಾದರ್.ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್, ಮಂಗಳೂರು ಸಹಾಯಕ ಕಮಿಷನರ್ ಹರ್ಷ ಕುಮಾರ್ ಮತ್ತಿತರರಿದ್ದರು.
ಒಂದೇ ಸೂರಿನಡಿ 32 ಇಲಾಖೆ!ಒಟ್ಟು 75 ಕೋಟಿ ರು. ವೆಚ್ಚವಾಗಿದ್ದು, ಹೌಸಿಂಗ್ ಬೋರ್ಡ್ ಕಾರ್ಪೊರೇಷನ್ 55 ಕೋಟಿ ರು. ಹಾಗೂ ಈಗ ಸ್ಮಾರ್ಟ್‌ಸಿಟಿ ಲಿಮಿಟೆಡ್ 20 ಕೋಟಿ ರು.ಗಳಲ್ಲಿ ಕಾಮಗಾರಿ ನಡೆಸಿದೆ.
ನೆಲ ಮಹಡಿಯಲ್ಲಿ ಕಚೇರಿ ಸಿಬ್ಬಂದಿಗೆ ಪಾರ್ಕಿಂಗ್, ತಳ ಮಹಡಿಯಲ್ಲಿ ಪ್ರವೇಶ ದ್ವಾರ ಹಾಗೂ ಮೂರು ಮಹಡಿಗಳಿವೆ. ನೆಲ ಮಹಡಿಯಲ್ಲಿ ಕಂದಾಯ ಕಚೇರಿಯ ವಿವಿಧ ಕಚೇರಿಗಳು ಸುಮಾರು 32 ಕಚೇರಿಗಳು ಇಲ್ಲಿಗೆ ಸ್ಥಳಾಂತರಗೊಳ್ಳಲಿದ್ದು, ಕೆಳ ಮಹಡಿಯಲ್ಲಿ ಡಿಸಿ ಹಾಗೂ ಉಸ್ತುವಾರಿ ಸಚಿವರ ಕಚೇರಿ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.