ಕೃಷಿ ಮೇಳ, ಜಾನುವಾರು ಜಾತ್ರೆಗೆ ಭರದ ಸಿದ್ಧತೆ

KannadaprabhaNewsNetwork | Published : Nov 18, 2024 12:02 AM

ಸಾರಾಂಶ

ಬೈಲಹೊಂಗಲ ಪಟ್ಟಣದ ಐತಿಹಾಸಿಕ ಶ್ರೀ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಎಪಿಎಂಸಿ ಆವರಣದಲ್ಲಿ ನ.19, 20 ಹಾಗೂ 21ರಂದು ಮೂರು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಬೃಹತ್ ಕೃಷಿ ಮೇಳ ಮತ್ತು ಜಾನುವಾರು ಜಾತ್ರೆಗೆ ಭರ್ಜರಿ ಸಿದ್ಧತೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಪಟ್ಟಣದ ಐತಿಹಾಸಿಕ ಶ್ರೀ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಎಪಿಎಂಸಿ ಆವರಣದಲ್ಲಿ ನ.19, 20 ಹಾಗೂ 21ರಂದು ಮೂರು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಬೃಹತ್ ಕೃಷಿ ಮೇಳ ಮತ್ತು ಜಾನುವಾರು ಜಾತ್ರೆಗೆ ಭರ್ಜರಿ ಸಿದ್ಧತೆ ನಡೆದಿದೆ.

ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಭಾಗದ ಅವರಣದ ವಿಶಾಲವಾದ ಪ್ರಾಂಗಣದಲ್ಲಿ 300ಕ್ಕೂ ಹೆಚ್ಚು ಮಳಿಗೆಗಳು ನಿರ್ಮಾಣಗೊಂಡಿವೆ. ಕೃಷಿ ಮೇಳ ಹಾಗೂ ಜಾನುವಾರು ಜಾತ್ರೆಗೆ ಆಗಮಿಸುವ ಪ್ರತಿಯೊಬ್ಬರಿಗೂ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಮಿಟಿ ಮುಖಂಡರು ಹಗಲಿರುಳು ಶ್ರಮಿಸುತ್ತಿದ್ದಾರೆ.

ಶಾಸಕ ಮಹಾಂತೇಶ ಕೌಜಲಗಿ ಕೃಷಿ ಮೇಳದ ಸಿದ್ಧತೆ ಪರಿಶೀಲಿಸಿ ಮಾತನಾಡಿ, ಕಳೆದ ಬಾರಿ ಕೃಷಿ ಮೇಳ, ಜಾನುವಾರ ಜಾತ್ರೆ ಅತ್ಯಂತ ಯಶಸ್ವಿಯಾಗಿ ಜರುಗಿದ್ದು, ಈ ಬಾರಿ ಕೃಷಿಮೇಳ ಮತ್ತು ಜಾನುವಾರು ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರಿಂದ ರೈತರಿಗೆ ಸಹಕಾರಿಯಾಗಲಿದೆ. ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ನಾಡಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೆರುಗು ತರಬೇಕೆಂದರು.

ಸಮಿತಿ ಮುಖಂಡರಾದ ಶಿವರಂಜನ ಬೋಳನ್ನವರ, ಮಹೇಶ ಬೆಲ್ಲದ, ಮಹಾಂತೇಶ ತುರಮರಿ, ಮಡಿವಾಳಪ್ಪ ಹೋಟಿ ಮಾತನಾಡಿ, ರೈತರ ಅನುಕೂಲಕ್ಕಾಗಿ ಈ ಬೃಹತ ಕೃಷಿ ಮೇಳ, ಜಾನುವಾರು ಜಾತ್ರೆ ಆಯೋಜಿಸಲಾಗಿದ್ದು, ಮತ್ತಿಕೊಪ್ಪ ಕೆವಿಕೆ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಕೃಷಿಯಲ್ಲಿನ ಹೊಸ ಅವಿಷ್ಕಾರ ತಿಳಿಸಲಿದ್ದು, ಸುತ್ತಮುತ್ತಲಿನ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ನಾಡಿನ ಸಮಸ್ತ ರೈತರು, ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆ, ಕೃಷಿಕ ಪರಿಕರ ಮಾರಾಟಗಾರರ ಸಂಘ, ರೋಟರಿ ಕ್ಲಬ್ ಬೈಲಹೊಂಗಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್., ಗ್ರಾಮೀಣ ಜಾಗೃತಾ ನಾಗರಿಕ ವೇದಿಕೆ ಇವರು ಆಯೋಜಿಸಿರುವ ಕೃಷಿ ಮೇಳವನ್ನು ಶಾಸಕ ಮಹಾಂತೇಶ ಕೌಜಲಗಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಬಾಬಾಸಾಹೇಬ ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಮಾಜಿ ಶಾಸಕರು, ವಿವಿಧ ಮಠಾಧೀಶರು, ಗಣ್ಯರು ಆಗಮಿಸಲಿದ್ದಾರೆ.

ಈ ವೇಳೆ ಬಸವರಾಜ ಜನ್ಮಟ್ಟಿ, ವಿರುಪಾಕ್ಷ ಕೋರಿಮಠ, ಅಶೋಕ ಮತ್ತಿಕೊಪ್ಪ, ಸುನೀಲ ಗೊಡಬೋಲೆ ಅನೇಕರು ಇದ್ದರು.

Share this article