ಅದ್ಧೂರಿ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಭರದ ಸಿದ್ಧತೆ

KannadaprabhaNewsNetwork |  
Published : Nov 01, 2025, 01:30 AM IST
31 ಬೀರೂರು 1ಬೀರೂರು ಪಟ್ಟಣ ಗಣಪತಿ ಪೆಂಡಾಲ್ ನಲ್ಲಿ ನಿರ್ಮಾಣವಾಗುತ್ತಿರುವ ಧರ್ಮ ಜಾಗೃತಿ ಸಭೆಯ ಪೆಂಡಾಲ್ | Kannada Prabha

ಸಾರಾಂಶ

ಬೀರೂರು, ನ. 3ರಂದು ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ, ಧಾರ್ಮಿಕ ಸಭೆ ಸೇರಿದಂತೆ ವಿವಿಧ ಕಾರ್ಯ ಕ್ರಮಕ್ಕೆ ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಬೃಹತ್ ಪೆಂಡಾಲ್ ನಿರ್ಮಾಣ ಮಾಡುವ ಮೂಲಕ ಸಕಲ ರೀತಿಯಲ್ಲೂ ಸಜ್ಜುಗೊಳ್ಳುತ್ತಿದೆ.

ಬೀರೂರಲ್ಲಿ ನ.3ಕ್ಕೆ ಲೋಕ ಕಲ್ಯಾಣಾರ್ಥ ಗಿರಿಜಾ ಕಲ್ಯಾಣೋತ್ಸವ । ಸಾಮೂಹಿಕ ವಿವಾಹ, ಶಿವದೀಕ್ಷಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ,ಬೀರೂರು

ನ. 3ರಂದು ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ, ಧಾರ್ಮಿಕ ಸಭೆ ಸೇರಿದಂತೆ ವಿವಿಧ ಕಾರ್ಯ ಕ್ರಮಕ್ಕೆ ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಬೃಹತ್ ಪೆಂಡಾಲ್ ನಿರ್ಮಾಣ ಮಾಡುವ ಮೂಲಕ ಸಕಲ ರೀತಿಯಲ್ಲೂ ಸಜ್ಜುಗೊಳ್ಳುತ್ತಿದೆ. ನ. 2ರಂದು ಪಟ್ಟಣದ ಡಿ.ವಿ.ಹಾಲಪ್ಪ ರಸ್ತೆಯಲ್ಲಿ ಶ್ರೀಗುರು ಮರುಳಸಿದ್ದೇಶ್ವರ ಗದ್ದುಗೆ ಬಳಿ ನಿರ್ಮಿಸಿರುವ ಶ್ರೀಚೌಡೇಶ್ವರಿ ದೇವಾಲಯದ ಪ್ರವೇಶ ಮತ್ತು ಅದರ ಅಂಗವಾಗಿ ಗುರು ಪ್ರಾರ್ಥನೆಯೊಂದಿಗೆ ಕಾರ್ಯ ಕ್ರಮ ಆರಂಭಗೊಳ್ಳಲಿವೆ.

ನ. 3ರಂದು ಪಂಚ ಪೀಠಾಧೀಶರ ನೇತೃತ್ವದಲ್ಲಿ ಧರ್ಮ ಜಾಗೃತಿ ಸಭೆ, ಭಕ್ತರಿಗೆ ದಾಸೋಹ ಸೇವೆ ಪಟ್ಟಣದ ಪಿಎಂಶ್ರೀ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜರುಗಲಿದ್ದು, ಪರಸ್ಥಳದಿಂದ ಬರುವವರಿಗೆ ಬೀರೂರು ತರಳಬಾಳು ಕಲ್ಯಾಣ ಮಂದಿರ, ಕೆಎಲ್‌ಕೆ ಮೈದಾನ, ಮಹಾನವಮಿ ಬಯಲು, ಎಸ್‌ಜೆಎಂ ಶಾಲೆ ಆವರಣ, ವಾಸವಿ ವಿದ್ಯಾಪೀಠದ ಎದುರು ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಚೌಡೇಶ್ವರಿ ದೇವಿ ಪ್ರತಿಷ್ಠಾಪನೆ ಹಾಗೂ ಮಂಗಳ ಮಂದಿರ ಪ್ರಾರಂಭೋತ್ಸವಕ್ಕೆ ಮುನ್ನ (ಭಾನುವಾರ) ಮಹಾಗಣಪತಿ ಪೂಜೆ, ಗೋಪೂಜೆ ಮೂಲಕ ಆಲಯ ಪ್ರವೇಶ, ಬಳಿಕ ದೀಪಾರಾಧನೆ, ಸಂಕಲ್ಪ, ಮಹಾ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ, ಪಂಚಗವ್ಯ ಸಾಧನ, ದೇವನಾಂದಿ, ಆಚಾರ್ಯಾದಿ ಋತ್ವಿಗ್ವರಣ, ವಾಸ್ತು ಮಂಡಲಾರಾಧನೆ, ಅಸ್ತ್ರಾಜ, ರಾಕ್ಷೋಘ್ಞ, ದಿಕ್ಪಾಲಕ ಆರಾಧನೆ ಕಲಶಾರಾಧನೆ ನೆರವೇರಿಸಲಾಗುವುದು. ನಂತರ, ಮಹಾಗಣಪತಿ ಹೋಮ, ಲಘು ಪೂರ್ಣಾಹುತಿ, ಗೃಹ ಪ್ರತಿಷ್ಠಾಪನೆ, ಸಂಸ್ಕಾರಗಳೊಡನೆ ದೇವಿ ಮೂಲ ಮೂರ್ತಿಗೆ ಅಧಿವಾಸ ನಡೆಯುವುದು.ನ. 3ರಂದು ಬೆಳಿಗ್ಗೆ ಸುಪ್ರಭಾತ ಸೇವೆ, ಆಲಯದಲ್ಲಿ ಪೀಠ ಸಂಸ್ಕಾರ ನಂತರ ಚೌಡೇಶ್ವರಿ ದೇವಿ ನೂತನ ವಿಗ್ರಹಕ್ಕೆ ಅಷ್ಟಬಂಧನ, ಪ್ರಾಣ ಪ್ರತಿಷ್ಠೆ, ಕ್ಷೀರ ಸಮರ್ಪಣೆ, ಪ್ರತಿಷ್ಠಾಂಗ ದೇವಾಲಯ ಶಿಖರ ಕಲಶಾ ರೋಹಣ, ಕಳಾಹೋಮ, ದುರ್ಗಾಹೋಮ, ಪೂರ್ಣಾಹುತಿ, ಶ್ರೀ ಚೌಡೇಶ್ವರಿ ಅಮ್ಮನವರಿಗೆ ಹರಿದ್ರಾಲೇಪನ, ಪಂಚಾಮೃತ ಅಭಿಷೇಕ, ಕದಳಿ ಕೂಷ್ಮಾಂಡ ಬಲಿ, ದರ್ಪಣ ದರ್ಶನ, ಧೇನು ದರ್ಶನ, ಸಹಸ್ರ ಕುಂಕುಮಾರ್ಚನೆ, ಅಷ್ಟೋತ್ತರ, ಮಹಾನೈವೇದ್ಯ, ಅಷ್ಟಾವಧಾನ, ಮಹಾಮಂಗಲ ನೀರಾಜನ ನಡೆಯುವುದು.ಈ ಸಂದರ್ಭದಲ್ಲಿ ಪಂಚ ಪೀಠಾಧೀಶರನ್ನು ಬೀರೂರು ಪಟ್ಟಣದ ಕೆ.ಎಲ್.ಕೆ ಮೈದಾನದಿಂದ ಅಡ್ಡಪಲ್ಲಕ್ಕಿ ಮೆರವಣಿಗೆಯಲ್ಲಿ ಪಟ್ಟಣದ ಮುಖ್ಯ ರಸ್ತೆಯ ರಂಭಾಪುರಿ ಖಾಸಾ ಶಾಖಾ ಮಠದವರೆಗೆ ವಿವಿಧ ಕಲಾ ತಂಡಗಳು, ಮಂಗಳವಾದ್ಯ, ಸಾಂಸ್ಕೃತಿಕ ಕಲಾ ಪ್ರದರ್ಶನ ಹಾಗೂ ಪೂರ್ಣಕುಂಭದೊಂದಿಗೆ ಕರೆ ತರಲಾಗುವುದು. ಮಂಗಲ ಮಂದಿರದಲ್ಲಿ ಲೋಕ ಕಲ್ಯಾಣಾರ್ಥ ಗಿರಿಜಾ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ ಮತ್ತು ಶಿವದೀಕ್ಷಾ ನಡೆಯುವುದು. ಮಧ್ಯಾಹ್ನ 12ಕ್ಕೆ ಜಗದ್ಗುರು ಪಂಚ ಪೀಠಾಧೀಶರಿಂದ ಶ್ರೀ ಚೌಡೇಶ್ವರಿ ದೇವಾಲಯ ಮತ್ತು ಶ್ರೀಜಗದ್ಗುರು ರೇಣುಕಾಚಾರ್ಯ ಮಂಗಲ ಮಂದಿರ ಉದ್ಘಾಟನೆ, ಪಂಚ ಪೀಠಾಧೀಶರ ಪಾದಪೂಜೆ ನಡೆಯುವುದು.ಧರ್ಮ ಜಾಗೃತಿ ಸಮಾರಂಭ;ಗಣಪತಿ ಪೆಂಡಾಲ್ ಆವರಣದಲ್ಲಿ ರಂಭಾಪುರಿ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮಿ, ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮಿ, ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ರಾಜದೇಶಿಕೇಂದ್ರ ಸ್ವಾಮಿ, ಕಾಶೀ ಪೀಠದ ಶ್ರೀ ಡಾ.ಚಂದ್ರಶೇಖರ ಸ್ವಾಮೀಜಿ ಹಾಗೂ ಡಾ.ಮಲ್ಲಿ ಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಸಮಾರಂಭ ನಡೆಯುವುದು.ಈ ಕಾರ್ಯಕ್ರಮದ ನೇತೃತ್ವವನ್ನು ರಂಭಾಪುರಿ ಖಾಸಾ ಶಾಖಾ ಮಠದ ಬೀರೂರು ಶ್ರೀ ರುದ್ರಮುನಿ ಸ್ವಾಮೀಜಿ ವಹಿಸುವರು. ಶಾಸಕ ಕೆ.ಎಸ್.ಆನಂದ್ ಅಧ್ಯಕ್ಷತೆ, ವೈ.ಎಸ್.ವಿ.ದತ್ತ ಪ್ರಾಸ್ತಾವಿಕ ಭಾಷಣ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸುವರು ಎಂದು ಶ್ರೀ ರುದ್ರಮುನಿ ಸ್ವಾಮೀಜಿ, ಶಿವಾನಂದಾಶ್ರಮ ಟ್ರಸ್ಟ್ ಕಾರ್ಯದರ್ಶಿ ಕೆ.ಬಿ.ಮಲ್ಲಿಕಾರ್ಜುನ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ.ಲೋಕೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.31 ಬೀರೂರು 1ಬೀರೂರು ಪಟ್ಟಣ ಗಣಪತಿ ಪೆಂಡಾಲ್ ನಲ್ಲಿ ನಿರ್ಮಾಣವಾಗುತ್ತಿರುವ ಧರ್ಮ ಜಾಗೃತಿ ಸಭೆಯ ಪೆಂಡಾಲ್31 ಬೀರೂರು 2ಬೀರೂರಿನ ಮಹಾತ್ಮ ಗಾಂಧಿ ವೃತ್ತದಲ್ಲಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಜಗದ್ಗುರು ಪಂಚಾಚಾರ್ಯರ ಚಿತ್ರ

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!