10 ಸಾವಿರ ಮನೆ ಪಟ್ಟಾ ನೀಡಲು ಸಿದ್ಧತೆ ಪೂರ್ಣಗೊಳಿಸಿ: ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork |  
Published : Jun 04, 2025, 03:16 AM IST
ಸಭೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ಮಾತನಾಡಿದರು. ತಹಸೀಲ್ದಾರ್ ಎಸ್. ರೇಣುಕಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ಇದ್ದರು. | Kannada Prabha

ಸಾರಾಂಶ

ಜುಲೈ 15ರೊಳಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಹಸೀಲ್ದಾರರು ತಮ್ಮ ಸಿಬ್ಬಂದಿಯನ್ನು ತ್ವರಿತವಾಗಿ ಕಾರ್ಯನಿರ್ವಹಿಸುವಂತೆ ಜವಾಬ್ದಾರಿ ವಹಿಸಿ. 91 ಹೊಸ ಕಂದಾಯ ಗ್ರಾಮ ಹಾಗೂ ಉಪಗ್ರಾಮಗಳ ಘೋಷಣೆಗೆ ಯಾವುದೇ ಅಡೆತಡೆ ಸಲ್ಲದು.

ಹಾನಗಲ್ಲ: ಬರುವ ಜುಲೈ 15ರೊಳಗೆ 91 ಹೊಸ ಕಂದಾಯ ಗ್ರಾಮ ಘೋಷಣೆ ಹಾಗೂ 10 ಸಾವಿರ ಮನೆ ಮಾಲೀಕರಿಗೆ ಪಟ್ಟಾ ನೀಡುವ ಆಡಳಿತಾತ್ಮಕ ಪ್ರಕ್ರಿಯೆ ಪೂರ್ಣಗೊಳಿಸಿ, ಆಗಸ್ಟ್‌ 15ರೊಳಗೆ ಪಟ್ಟಾ ವಿತರಣೆ ಮಾಡಲು ಎಲ್ಲ ಸಿದ್ಧತೆ ಪೂರ್ಣಗೊಳಿಸಿ ಎಂದು ಶಾಸಕ ಶ್ರೀನಿವಾಸ ಮಾನೆ ಅಧಿಕಾರಿಗಳಿಗೆ ಸೂಚಿಸಿದರು.ಮಂಗಳವಾರ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ, ತಾಲೂಕಿನಲ್ಲಿ ಈಗಾಗಲೇ 10 ಸಾವಿರ ಜನರ ಮನೆಗಳ ಮಾಲೀಕರಿಗೆ ಪಟ್ಟಾ ನೀಡುವ ಕಾರ್ಯದಲ್ಲಿ ಯಾವುದೆ ವಿಳಂಬ ಸಲ್ಲದು. ಜುಲೈ 15ರೊಳಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಹಸೀಲ್ದಾರರು ತಮ್ಮ ಸಿಬ್ಬಂದಿಯನ್ನು ತ್ವರಿತವಾಗಿ ಕಾರ್ಯನಿರ್ವಹಿಸುವಂತೆ ಜವಾಬ್ದಾರಿ ವಹಿಸಿ. 91 ಹೊಸ ಕಂದಾಯ ಗ್ರಾಮ ಹಾಗೂ ಉಪಗ್ರಾಮಗಳ ಘೋಷಣೆಗೆ ಯಾವುದೇ ಅಡೆತಡೆ ಸಲ್ಲದು.

ಇನ್ನೂ 31 ಕಂದಾಯ ಗ್ರಾಮ ಹಾಗೂ ಉಪಗ್ರಾಮಗಳ ಘೋಷಣೆಗೆ ಪ್ರಸ್ತಾವನೆ ಇದ್ದು, ಅದನ್ನೂ ಕೂಡಲೇ ಪೂರ್ಣಗೊಳಿಸಬೇಕು. ಕಂದಾಯ ಸಚಿವರ ಅನುಮೋದನೆಯೂ ಒಳಗೊಂಡು ಈ ಎಲ್ಲ ಕಾರ್ಯಗಳು ನಡೆಯಬೇಕಾಗಿದೆ ಎಂದು ತಿಳಿಸಿ, ಇದರಿಂದ ತಾಲೂಕಿನ 50 ಸಾವಿರ ಜನರಿಗೆ ವಸತಿಯನ್ನು ಕಾನೂನುಬದ್ಧವಾಗಿ ನೀಡಿದಂತಾಗುತ್ತದೆ ಎಂದರು.ಈಗಾಗಲೇ ವಿವಿಧ ಸ್ಥಳಗಳಲ್ಲಿ ಮನೆ ನಿರ್ಮಿಸಿಕೊಂಡು ಕಾನೂನಾತ್ಮಕ ಅಧಿಕೃತತೆ ಇಲ್ಲದ ಮನೆಗಳಿಗೆ ಕಾನೂನಾತ್ಮಕ ಇ- ಸ್ವತ್ತು ಸಹಿತ ಪಟ್ಟಾ ನೀಡಲಾಗುತ್ತಿದೆ. ಸರ್ವೇ ಹಾಗೂ ಪಟ್ಟಾ ನೀಡಲು ಮನೆಗಳನ್ನು ಗುರುತಿಸುವ ಸಂದರ್ಭದಲ್ಲಿ ಏನೇ ಸಮಸ್ಯೆ ಬಂದರೂ ಮೇಲಧಿಕಾರಿಗಳನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು. ಆಗಸ್ಟ್ 15ರೊಳಗೆ ಇಡೀ ತಾಲೂಕಿನಲ್ಲಿ ಅಧಿಕೃತ ಪಟ್ಟಾ ನೀಡುವ ಕಾರ್ಯ ಆಯಾ ಗ್ರಾಮಗಳಿಗೆ ತೆರಳಿ ನೀಡುವ ಕೆಲಸ ಮಾಡಬೇಕಾಗಿದೆ. ಈ ಕಾರ್ಯಕ್ಕೆ ಸಿಬ್ಬಂದಿ ಕೊರತೆ ಇರುವಲ್ಲಿ ಅಧಿಕಾರಿಗಳು ಸಿಬ್ಬಂದಿ ಒದಗಿಸಿ ಕಾರ್ಯ ಪೂರ್ಣಗೊಳಿಸಬೇಕು ಎಂದರು.ಹಲವು ಗ್ರಾಮಗಳಲ್ಲಿ ಈ ಹಿಂದೆ ಪಟ್ಟಾ ನೀಡಿದ್ದಾರೆ. ಆದರೆ ಅವರ ಬಳಿ ಅವು ಇಲ್ಲ. ಇನ್ನು ಕೆಲವೆಡೆ ಸ್ಥಳ ಗುರುತಿಸಿ ಸಮ್ಮತಿ ನೀಡಿದ್ದಾರೆ. ಆದರೆ ಪಟ್ಟಾ ಇಲ್ಲ. ಕೆಲವರು ಪಟ್ಟಾ ಕಳೆದುಕೊಂಡಿದ್ದಾರೆ. ಕೆಲವೆಡೆ 50 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಆದರೆ ಅವರಿಗೆ ಅಧಿಕೃತ ಪಟ್ಟಾ ಇಲ್ಲ. ಕೆಲವೆಡೆ ಕೆರೆ ಅಂಗಳದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಆಸ್ತಿ ಹಾಗೂ ಪಟ್ಟಾ ಹೊಂದಾಣಿಕೆ ಆಗುತ್ತಿಲ್ಲ. ದಾಖಲೆಗಳ ಸಮಸ್ಯೆ ಇದೆ.

ಹೀಗೆ ಪಟ್ಟಾ ನೀಡಲು ಹಲವು ಸಮಸ್ಯೆಗಳಿರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ಚರ್ಚೆ ನಡೆಸಿದರು. ಅರಳೇಶ್ವರ, ಹಾವಣಗಿ, ಮಲಗುಂದ, ನರೇಗಲ್ಲ, ಹುಣಸೆಟ್ಟಿಕೊಪ್ಪ, ಕೆಲವರಕೊಪ್ಪ, ಸೀಗಿಹಳ್ಳಿ, ಗೊಂದಿ ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಹಸೀಲ್ದಾರರು ಖುದ್ದಾಗಿ ಜಂಟಿ ಪರಿಶೀಲನೆ ನಡೆಸಿ ಪರಿಹಾರ ನೀಡಲು ಮುಂದಾಗಿ. ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ತಹಸೀಲ್ದಾರ್ ಎಸ್. ರೇಣುಕಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ವೇದಿಕೆಯಲ್ಲಿದ್ದರು. ತಾಲೂಕಿನ ಎಲ್ಲ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ