ಅತ್ತಿ ಮರ ಹಾಗೂ ಅರಳಿ ಮರಗಳನ್ನು ತೆರವುಗೊಳಿಸಿ ಮರು ಜೋಡಣೆ ಕಾರ್ಯಕ್ಕೆ ತಾಲೂಕು ಆಡಳಿತ ಮುಂದಾಗಿದ್ದು ಈ ಸಂಬಂಧ ಶಾಸಕರ ಉಪಸ್ಥಿತಿಯಲ್ಲಿ ಟ್ರೀಸ್ ಜಾಯಿಂಟ್ ಫೌಂಡೇಶನ್ ಸಹಯೋಗ
ಕನ್ನಡಪ್ರಭ ವಾರ್ತೆ ತಿಪಟೂರು
ಸುಮಾರು 700 ವರ್ಷಗಳ ಇತಿಹಾಸ ಹೊಂದಿರುವ ನಗರದ ಶ್ರೀ ಕಲ್ಲೇಶ್ವರಸ್ವಾಮಿ (ಪಂಚಲಿಂಗೇಶ್ವರ) ದೇವಾಲಯದ ಜೀರ್ಣೋದ್ದಾರದ ಪೌಳಿ ನಿರ್ಮಾಣಕ್ಕಾಗಿ ದೇವಾಲಯದ ಮುಂಭಾಗವಿರುವ ಅಶ್ವತ್ಥ ಕಟ್ಟೆಯಲ್ಲಿರುವ ಅತ್ತಿ ಮರ ಹಾಗೂ ಅರಳಿ ಮರಗಳನ್ನು ತೆರವುಗೊಳಿಸಿ ಮರು ಜೋಡಣೆ ಕಾರ್ಯಕ್ಕೆ ತಾಲೂಕು ಆಡಳಿತ ಮುಂದಾಗಿದ್ದು ಈ ಸಂಬಂಧ ಶಾಸಕರ ಉಪಸ್ಥಿತಿಯಲ್ಲಿ ಟ್ರೀಸ್ ಜಾಯಿಂಟ್ ಫೌಂಡೇಶನ್ ಸಹಯೋಗದಲ್ಲಿ ಕಾರ್ಯರಾಂಭ ಮಾಡಲು ಸಮೀಕ್ಷೆ ನಡೆಸಲಾಯಿತು. ಈ ವೇಳೆ ಶಾಸಕ ಕೆ.ಷಡಕ್ಷರಿ ಮಾತನಾಡಿ ಕಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಇತಿಹಾಸವಿದ್ದು ಹಲವು ವರ್ಷಗಳಿಂದಲೂ ಇಲ್ಲಿ ಭಕ್ತರು ಅರಳಿ ಮರಕ್ಕೆ ಪೂಜೆ ಸಲ್ಲಿಸುತ್ತಾ ಬಂದಿದ್ದು ಅವರ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಮರಗಳನ್ನು ತಾಯಿ ಬೇರು ಸಹಿತಿ ಇಲ್ಲಿರುವ ಬಸವಣ್ಣ ಮಂಟಪದ ಹತ್ತಿರ ಸ್ಥಳಾಂತರ ಮಾಡಿ ಮರು ಜೋಡಣೆಯ ಕಾರ್ಯ ಮಾಡಲಿದ್ದೇವೆ. ಅದಕ್ಕಾಗಿಯೇ ಟ್ರೀಸ್ ಜಾಯಿಂಟ್ ಫೌಂಡೇಶನ್ ಸಹಯೋಗ ಪಡೆದುಕೊಂಡಿದ್ದೇವೆ ಎಂದರು. ಟ್ರೀಸ್ ಜಾಯಿಂಟ್ ಫೌಂಡೇಶನ್ ಮುಖ್ಯಸ್ಥ ಪಿ.ಎಸ್.ವಿನೋದ್ ಭಟ್ ಮಾತನಾಡಿ, ತಾಲೂಕು ಆಡಳಿತ ಒಪ್ಪಿಗೆ ಪತ್ರ ನೀಡಿದರೆ ಒಳ್ಳೆಯ ದಿನ ನೋಡಿ ವಾರದೊಳಗೆ ಮರ ಸ್ಥಳಾಂತರಿಸುವ ಕಾಮಗಾರಿ ಕೈಗೊಳ್ಳಲಾಗುವುದು. ಮರದಲ್ಲಿ ತಾಯಿ ಬೇರು ಹರಡಿರುವ ಪ್ರದೇಶ ಗುರುತಿಸಿ ಯಂತ್ರಗಳನ್ನು ಬಳಸಿ ಬೇರಿಗೆ ಹಾನಿಯಾಗದಂತೆ ಬೇರು ಸಹಿತ ಮರಗಳನ್ನು ಸ್ಥಳಾಂತರಿಸಿ ಮರು ಜೋಡಣೆ ಮಾಡಲಾಗುವುದು ಇದರಿಂದ ಕೇವಲ ಆರೇಳು ತಿಂಗಳಲ್ಲಿ ಮರವು ಮೊದಲಿನಂತೆ ಚಿಗರೊಡೆಯಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಮೋಹನ್‌ಕುಮಾರ್, ಗ್ರೇಡ್-2 ತಹಸೀಲ್ದಾರ್ ಜಗನ್ನಾಥ್, ಬೆಂಗಳೂರಿನ ಟ್ರೀಸ್‌ಜಾಯಿಂಟ್ ಫೌಂಡೇಶನ್ ಮುಖ್ಯಸ್ಥ ಪಿ.ಎಸ್.ವಿನೋದ್ ಭಟ್, ಅರಣ್ಯ ಇಲಾಖೆ ಅಧಿಕಾರಿ ಮಧು, ಸಣ್ಣ ನೀರಾವರಿ ಇಲಾಖೆಯ ಎನ್.ದೊಡ್ಡಯ್ಯ, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರೀಶೀಲನೆ ಮಾಡಿ ಸ್ಥಳಾಂತರಕ್ಕೆ ಸೂಚನೆ ನೀಡಿದರು.
ಕೋಟ್..
ಪಂಚವೃಕ್ಷಗಳ ಸ್ಥಳಾಂತರ ಪಾಪದ ಕೆಲಸ ತಿಪಟೂರಿನ ಇತಿಹಾಸ ಪ್ರಸಿದ್ದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಅಶ್ವತ್ಥಕಟ್ಟೆಯಲ್ಲಿರುವ ಪಂಚ ವೃಕ್ಷಗಳಿಗೆ ಸುಮಾರು 35ವರ್ಷಗಳಿಂದಲೂ ಭಕ್ತರು ಪೂಜೆ ಸಲ್ಲಿಸುತ್ತಾ ಬಂದಿದ್ದು ಈಗ ಪೌಳಿ ನಿರ್ಮಾಣ ನೆಪದಲ್ಲಿ ಮರಗಳನ್ನು ಸ್ಥಳಾಂತರ ಮಾಡಲು ಹೊರಟಿರುವ ತಾಲೂಕು ಆಡಳಿತ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆತರಲು ಹೊರಟಿದೆ. ಮರವನ್ನು ಸ್ಥಳಾಂತರ ಮಾಡಿ ಅದಕ್ಕೆ ಪುನಃ ಜೀವ ಕೊಡಲು ಇದು ಮನುಷ್ಯನ ದೇಹ ಅಲ್ಲ. ಈ ಬಗ್ಗೆ ಶಾಸಕರು ಮತ್ತೊಮ್ಮೆ ಆಲೋಚನೆ ಮಾಡಬೇಕು. ಭಕ್ತರು ಪುಣ್ಯ ಕಟ್ಟಿಕೊಳ್ಳಲು ಪೂಜೆ ಮಾಡಿದರೆ ಶಾಸಕರು ಮರಗಳನ್ನು ಸ್ಥಳಾಂತರಿಸಿ ಪಾಪ ಕಟ್ಟಿಕೊಳ್ಳಲು ಹೊರಟಿದ್ದಾರೆ.
- ಲೋಕೇಶ್ವರ, ಬಿಜೆಪಿ ಮುಖಂಡರು, ತಿಪಟೂರು.
ಕೋಟ್ 2
ನಾವುಗಳು ಪೂಜಿಸುವ ವೃಕ್ಷಗಳನ್ನು ಸ್ಥಳಾಂತರ ಮಾಡಬಾರದು. ತಲತಲಾಂತರದಿಂದ ಈ ವೃಕ್ಷಗಳನ್ನು ಪೂಜಿಸಿಕೊಂಡು ಮನಸ್ಸಿಗೆ ನೆಮ್ಮದಿ ಪಡೆದಿಕೊಂಡು ಬಂದಿದ್ದೇವೆ. ಈ ಕುರಿತು ಭಕ್ತರ ಅಭಿಪ್ರಾಯಪಡೆದು ಮುಂದುವರೆಯಬೇಕು. - ತಿಮ್ಮಣ್ಣ, ಭಕ್ತರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.