ಬುದ್ಧ, ಬಸವ, ಅಂಬೇಡ್ಕರ್ ಮೂರ್ತಿಗಳ ಪ್ರತಿಷ್ಠಾಪನೆಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ

KannadaprabhaNewsNetwork | Published : Apr 30, 2025 12:36 AM

ಸಾರಾಂಶ

ಪಟ್ಟಣದ ಪುರಸಭೆಯಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಮೂರ್ತಿಗಳ ಪ್ರತಿಷ್ಠಾಪನೆಯ ಕ್ರಿಯಾಯೋಜನೆ ಸಿದ್ಧಪಡಿಸಿ ಎಂದು ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ್ ಆಗ್ರಹಿಸಿದರು.

ಗಜೇಂದ್ರಗಡ: ಪಟ್ಟಣದ ಪುರಸಭೆಯಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಮೂರ್ತಿಗಳ ಪ್ರತಿಷ್ಠಾಪನೆಯ ಕ್ರಿಯಾಯೋಜನೆ ಸಿದ್ಧಪಡಿಸಿ ಎಂದು ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ್ ಆಗ್ರಹಿಸಿದರು.

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತುರ್ತು ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಪಟ್ಟಣದ ಪುರಸಭೆ ಆವರಣದಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಮೂರ್ತಿಗಳ ಜತಗೆ ಪಟ್ಟಣದ ಪ್ರಮುಖ ರಸ್ತೆಗಳಿಗೆ ಸ್ವಾಗತ ಬಾಗಿಲು ನಿರ್ಮಾಣ ಕುರಿತು ಹಿಂದಿನ ಸಭೆಯಲ್ಲಿ ಠರಾವು ಮಾಡಲಾಗಿದೆ. ಆದರೆ ಈಗ ಮತ್ತೆ ಚರ್ಚಿಸುತ್ತಿದ್ದೀರಿ. ವಿವಿಧ ಯೋಜನೆಗಳಲ್ಲಿ ವಾರ್ಡಿನ ಅಭಿವೃದ್ಧಿಯ ಅನುದಾನದಲ್ಲಿ ೧ ಲಕ್ಷದಂತೆ ಬಳಸಿಕೊಳ್ಳಿ ಎಂದು ಒತ್ತಾಯಿಸಿದರು.

ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಮಾತನಾಡಿ, ಪಟ್ಟಣದಲ್ಲಿ ತೆರಿಗೆ ಸಂಗ್ರಹದಲ್ಲಿ ಶೇ.೯೪ರಷ್ಟು ಗುರಿ ತಲುಪಿದ್ದೇವೆ. ಆದರೆ ನೀರಿನ ಕರ ಸಂಗ್ರಹದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ ಎಂದಾಗ ಅಸಮಾಧಾನ ವ್ಯಕ್ತಪಡಿಸಿದ ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ಪಟ್ಟಣದಲ್ಲಿ ತೆರಿಗೆ ಸಂಗ್ರಹದಲ್ಲಿ ಭಾಗಶಃ ಗುರಿ ತಲುಪಿದ್ದೀರಿ. ಆದರೆ ನೀರಿನ ಕರ ಸಂಗ್ರಹದಲ್ಲಿ ಹಿಂದಿರುವುದು ಸರಿಯಲ್ಲ. ನೀರಿನ ಕರ ಬಾಕಿ ತುಂಬುವವರೆಗೆ ಉತಾರಗಳನ್ನು ಕೊಡದಂತೆ ಅಧಿಕಾರಿಗಳಿಗೆ ಸೂಚಿಸಿ. ಉತಾರ ಎಲ್ಲರಿಗೂ ಪ್ರತಿ ವರ್ಷ ಬೇಕು. ಹೀಗಾಗಿ ನೀರಿನ ಕರ ತುಂಬಿದ ಬಳಿಕವೇ ಉತಾರವನ್ನು ನೀಡಿ, ಆಗ ನಿರೀಕ್ಷಿತ ಗುರಿ ತಲಪಲು ಸಾಧ್ಯ ಎಂದಾಗ ಇತರ ಸದಸ್ಯರಿಂದ ಸಹಮತದ ಅಭಿಪ್ರಾಯ ವ್ಯಕ್ತವಾಯಿತು.ಪಟ್ಟಣದ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಲ್ಲಿ ಬಂದಿದ್ದ ಅನುದಾನದಲ್ಲಿ ಉಳಿತಾಯದ ಹಣದಲ್ಲಿ ಆಯಾ ವಾರ್ಡಗಳಲ್ಲಿ ರಸ್ತೆ, ಚರಂಡಿ ಹಾಗೂ ಬೀದಿ ದೀಪ ನಿರ್ವಹಣೆಗೆ ಬಳಸುವಂತೆ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ ಸೂಚಿಸಿದರೆ, ವಿವಿಧ ವಾರ್ಡಗಳಲ್ಲಿರುವ ಸುಲಭ ಶೌಚಾಲಯ ಹಾಗೂ ಮಹಿಳಾ ಶೌಚಾಲಯಗಳ ಸೂಕ್ತ ನಿರ್ವಹಣೆಗೆ ಸದಸ್ಯರ ಆಗ್ರಹಕ್ಕೆ ಪೂರಕವಾಗಿ ಪುರಸಭೆ ಸ್ಥಾಯಿ ಸಮಿತಿ ಚೇರ್ಮನ್ ಮುದಿಯಪ್ಪ ಮುಧೋಳ ಅಧಿಕಾರಿಗಳು ಶೌಚಾಲಯಗಳ ಸೂಕ್ತ ನಿರ್ವಹಣೆಗೆ ಕ್ರಮ ಕೈಗೊಳ್ಳಿ ಎಂದರು.ಇದಕ್ಕೂ ಮುನ್ನ ಪಹಲ್ಗಾಮ್‌ನಲ್ಲಿ ಭಯೋತ್ಪಾಧಕರ ದಾಳಿಗೆ ಜೀವ ಕಳೆದುಕೊಂಡ ಕನ್ನಡಿಗರು ಹಾಗೂ ಇತರ ಜನರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಭೆ ನಡೆಸಿದರು.ಈ ವೇಳೆ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸ್ಥಾಯಿ ಸಮಿತಿ ಚೇರ್ಮನ್ ಮುದಿಯಪ್ಪ ಮುಧೋಳ, ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ವಿಪಕ್ಷ ನಾಯಕ ಮೂಕಪ್ಪ ನಿಡಗುಂದಿ, ಸದಸ್ಯರಾದ ಶಿವರಾಜ ಘೋರ್ಪಡೆ, ವೆಂಕಟೇಶ ಮುದಗಲ್, ರಾಜು ಸಾಂಗ್ಲೀಕರ, ಮುರ್ತುಜಾ ಡಾಲಾಯತ್, ಶರಣಪ್ಪ ಉಪ್ಪಿನಬೆಟಗೇರಿ, ಲಕ್ಷ್ಮೀ ಮುಧೋಳ, ಕೌಸರಬಾನು ಹುನಗುಂದ, ವಾಯ್.ಬಿ. ತಿಕರೋಜಿ, ರಫೀಕ್ ತೋರಗಲ್, ಸುಮಂಗಲಾ ಇಟಗಿ ಸೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

Share this article