ಬೆಂಗಳೂರು : ಬೆಂಗಳೂರಿನ ಬೆಳವಣಿಗೆ ವೇಗವಾಗಿ ಆಗುತ್ತಿದ್ದು, ಕಾವೇರಿ 5ನೇ ಹಂತದ ನಂತರ ಇದೀಗ 6ನೇ ಹಂತದ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಜಲಮಂಡಳಿಯ ರಜತ ಭವನದಲ್ಲಿ ಆಯೋಜಿಸಲಾಗಿದ್ದ ಜಲಮಂಡಳಿ ಅನ್ನಪೂರ್ಣ ಯೋಜನೆ ಅಡಿಯಲ್ಲಿ ನಿರ್ಮಲೀಕರಣ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್ ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಡಿ.ಕೆ. ಶಿವಕುಮಾರ್ ಮಾತನಾಡಿದರು.
ನಾವು ಅಧಿಕಾರಕ್ಕೆ ಬರುವುದಕ್ಕೆ ಮುಂಚಿತವಾಗಿ ಕುಂಟುತ್ತಾ ಸಾಗುತ್ತಿದ್ದ ಕಾವೇರಿ 5ನೇ ಹಂತದ ಯೋಜನೆಗಿದ್ದ ಸಮಸ್ಯೆಗಳನ್ನು ನಿವಾರಿಸಿ ಬೆಂಗಳೂರಿನ ಜನರಿಗೆ ಕಾವೇರಿ ನೀಡುವ ಕಾರ್ಯ ಮಾಡಲಾಗಿದೆ. ಬೆಂಗಳೂರು ನಿರೀಕ್ಷೆಗೂ ಮೀರಿ ಬೆಳೆಯುತ್ತಿದ್ದು, ಅದರಿಂದ ಜನರಿಗೆ ಸಮರ್ಪಕವಾಗಿ ನೀರು ಪೂರೈಸಲು ಕಾವೇರಿ 6ನೇ ಹಂತದ ಯೋಜನೆ ಕುರಿತು ಚಿಂತನೆ ಮಾಡಲಾಗುತ್ತಿದೆ ಎಂದರು.
ಸಚಿವ ಸಂಪುಟಕ್ಕೆ ತಂದಿದ್ದರೆ ವಿರೋಧ ವ್ಯಕ್ತವಾಗುತ್ತಿತ್ತು:
ಹಲವು ವರ್ಷಗಳಿಂದ ನೀರಿನ ಬೆಲೆ ಹೆಚ್ಚಿಸದ ಕಾರಣದಿಂದಾಗಿ ಜಲಮಂಡಳಿ ಆದಾಯದಲ್ಲಿ ಕುಸಿತವುಂಟಾಗಿ, ಮಂಡಳಿಯು ನಷ್ಟಕ್ಕೊಳಗಾಗುವಂತಾಗಿತ್ತು. ಅದನ್ನು ತಪ್ಪಿಸಲು ಎಷ್ಟೇ ವಿರೋಧ ವ್ಯಕ್ತವಾದರೂ ನೀರಿನ ಬೆಲೆ ಹೆಚ್ಚಿಸಲಾಯಿತು. ಮುಖ್ಯಮಂತ್ರಿ ಅವರ ಒಪ್ಪಿಗೆ ಪಡೆದು, ಸಚಿವ ಸಂಪುಟಕ್ಕೂ ವಿಷಯ ತರದೇ ನೀರಿನ ಬೆಲೆ ಹೆಚ್ಚಳ ಮಾಡಿದೆ. ಸಚಿವ ಸಂಪುಟಕ್ಕೆ ತಂದಿದ್ದರೆ, ಪಾಲಿಕೆ ಚುನಾವಣೆ ಸೇರಿದಂತೆ ಮತ್ತಿತರ ಕಾರಣ ನೀಡಿ ಬೆಲೆ ಹೆಚ್ಚಳ ತಡೆಯುವ ಸಾಧ್ಯತೆಗಳಿದ್ದವು. ಅದಕ್ಕಾಗಿ ನೇರವಾಗಿ ನೀರಿನ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ನೀರಿನ ಬೆಲೆ ಹೆಚ್ಚಳಕ್ಕೂ ಮುಂಚೆ ಜಲಮಂಡಳಿಗೆ ನೀರಿನ ಶುಲ್ಕ ವಸೂಲಿಯಿಂದ ವಾರ್ಷಿಕ 120ರಿಂದ 130 ಕೋಟಿ ರು. ಆದಾಯ ಬರುತ್ತಿತ್ತು. ಆದರೀಗ ಆ ಆದಾಯ 600 ಕೋಟಿ ರು. ಬರುವಂತಾಗಿದೆ. ನಷ್ಟದಲ್ಲಿರುವ ಜಲಮಂಡಳಿಗೆ ಆರ್ಥಿಕ ಬಲ ನೀಡಲಾಗಿದೆ. ಹೀಗೆ ಬರುವ ಹೆಚ್ಚುವರಿ ಆದಾಯದಲ್ಲಿ ಶೇ.30ರಷ್ಟು ನೌಕರರ ಕ್ಷೇಮಾಭಿವೃದ್ಧಿಗೆ ಬಳಸಲಾಗುವುದು. ಇನ್ನು, ಹೊಸ ನೀರಿನ ಸಂಪರ್ಕ ಪಡೆಯುವುದಕ್ಕಾಗಿ ಆಂದೋಲನ ರೀತಿಯಲ್ಲಿ ಜಲಮಂಡಳಿ ಸಿಬ್ಬಂದಿ ಕೆಲಸ ಮಾಡುತ್ತಿದ್ದು ಶ್ಲಾಘನೀಯ ಎಂದರು.
ನಗರದ ಸ್ವಚ್ಛತೆ ಕಾಪಾಡುವಲ್ಲಿ ಜಲಮಂಡಳಿ ನೈರ್ಮಲ್ಯೀಕರಣ ಕಾರ್ಮಿಕರ ಪಾತ್ರ ಹಿರಿದಾಗಿದ್ದು, ಅವರ ಸೇವೆಗೆ ಗೌರವ ನೀಡುವುದು ನಮ್ಮ ಕರ್ತವ್ಯ. ಅದಕ್ಕಾಗಿ ಜಲಮಂಡಳಿಯು ಅನ್ನಪೂರ್ಣ ಯೋಜನೆ ಅನುಷ್ಠಾನಗೊಳಿಸಿದೆ. ಅದರಂತೆ 700ಕ್ಕೂ ಹೆಚ್ಚಿನ ನೈರ್ಮಲ್ಯೀಕರಣ ಕಾರ್ಮಿಕರಿಗೆ ಪ್ರತಿ ತಿಂಗಳು 1,500 ರು.ಗಳನ್ನು ನೀಡಲಾಗುವುದು. ಅದು ಅವರ ಖಾತೆಗೆ ವರ್ಗಾವಣೆಯಾಗಲಿದ್ದು, ಆ ಹಣವನ್ನು ಅವರು ಆಹಾರ ಸೇವಿಸಲು ಬಳಸಬಹುದಾಗಿದೆ. ಅಲ್ಲದೆ ಆ ಹಣ ಬಳಕೆಗಾಗಿ ಬ್ಯಾಂಕ್‌ನ ಸ್ಮಾರ್ಟ್ ಕಾರ್ಡ್‌ನ್ನು ನೀಡಲಾಗುತ್ತಿದೆ ಎಂದು ವಿವರಿಸಿದರು.ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್ ಮನೋಹರ್, ಮುಖ್ಯ ಆಡಳಿತಾಧಿಕಾರಿ ಮದನ್ ಮೋಹನ್, ಪ್ರಧಾನ ಮುಖ್ಯ ಎಂಜಿನಿಯರ್ ಬಿ.ಎಸ್. ದಲಾಯತ್ ಇತರರಿದ್ದರು.