ಆತ್ಮವಿಶ್ವಾಸದಿಂದ ಎಸ್ಎಸ್ಎಲ್ ಸಿ ಪರೀಕ್ಷೆಗೆ ಸಿದ್ಧರಾಗಿ: ಬಿಇಒ ಶ್ರೀನಿವಾಸ್ ಮೂರ್ತಿ

KannadaprabhaNewsNetwork | Published : Jan 28, 2025 12:47 AM

ಸಾರಾಂಶ

ಮಾ.21 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭಗೊಳ್ಳುತ್ತಿವೆ. ನಿಮಗೆ ಉಳಿದಿರುವುದು ಕೇವಲ 95 ದಿನಗಳು ಮಾತ್ರ. ಇಂದಿನಿಂದ ಪ್ರತಿನಿಮಿಷವೂ ಅಮೂಲ್ಯವಾಗಿದ್ದು, ನೀವು ಕಲಿಕೆಯಲ್ಲಿ ಆಸಕ್ತಿ ವಹಿಸಿ ಶ್ರದ್ಧೆಯಿಂದ ಓದಿದ್ದೇ ಆದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ. ಏಕಾಗ್ರತೆಯಿಂದ ಕಲಿಕೆಗೆ ಮುಂದಾದಾಗ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಹಕಾರಿಯಾಗುತ್ತದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಎಸ್.ಎಸ್.ಎಲ್.ಸಿ. ಪರೀಕ್ಷೆ ಕುರಿತು ಉದಾಸೀನ ಬೇಡ, ಇಷ್ಟಪಟ್ಟು ಕಲಿಯುವರಿಗೆ ಪರೀಕ್ಷೆ ಎಂದೂ ಕಷ್ಟವಾಗದು, ನಿಮ್ಮ ಭವಿಷ್ಯದ ಬದುಕು ರೂಪಿಸಿಕೊಳ್ಳಲು ಇರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಶ್ರೀನಿವಾಸ ಮೂರ್ತಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಡಾ. ಎಚ್.ಎನ್.ಕಲಾಭವನದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಸಂಜೆ ಸಮಾರಂಭದಲ್ಲಿ ಪಾಲ್ಗೊಂಡು ನಗರದ ವಿವಿಧ ಶಾಲೆಗಳಿಂದ ನೃತ್ಯಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದ ಶುಭಾಷಯ ತಿಳಿಸಿ ಮಾತನಾಡಿದರು.

ಇಲ್ಲಿಯವರೆಗೆ ಈ ಶೈಕ್ಷಣಿಕ ವರ್ಷದ ಶಾಲಾ ವಾರ್ಷಿಕೋತ್ಸವಗಳು, ರಾಷ್ಟ್ರೀಯ ಹಬ್ಬಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗಿಯುತ್ತಾ ಬಂದಿವೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಪರೀಕ್ಷೆಗಳು ಬರುತ್ತಿದ್ದು, ತಾಲೂಕಿನ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗಿ. ಪ್ರತ್ಯೇಕವಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಯು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತದೆ. ಸಮಯ ವ್ಯರ್ಥಮಾಡದೆ ಆತ್ಮವಿಶ್ವಾಸದಿಂದ ಪರೀಕ್ಷೆಗೆ ಸಿದ್ಧರಾಗಬೇಕೆಂದು ಸಲಹೆ ನೀಡಿದರು.ಈ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಹೆಚ್ಚು ಭಾಗವಹಿಸಿರುವುದು ಹೆಣ್ಣು ಮಕ್ಕಳೇ, ಅದೇ ರೀತಿ ಪ್ರತಿ ಬಾರಿಯು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯ ಫಲಿತಾಂಶದಲ್ಲೂ ಸಹ ಹೆಣ್ಣುಮಕ್ಕಳದ್ದೇ ಮೆಲುಗೈಯಾಗಿದೆ,

ಉತ್ತಮ ಶಿಕ್ಷಣ ಮತ್ತು ಫಲಿತಾಂಶಕ್ಕೆ ಪೋಷಕರೂ ಸಹ ಶಿಕ್ಷಕರೊಂದಿಗೆ ಕೈಜೋಡಿಸಿದಲ್ಲಿ ಮಾತ್ರ ವಿದ್ಯಾರ್ಥಿಗಳು ಯಶಸ್ಸು ಕಾಣುತ್ತಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಆಲೋಚನೆ ಕಲಿಕೆ ಕಡೆಗಿರಲಿ:

ಮೆದುಳು ಅಕ್ಷಯಪಾತ್ರೆ ಇದ್ದಂತೆ, ಯಾರೂ ದಡ್ಡರಲ್ಲ. ಆದರೆ ಯಾರು ಏಕಾಗ್ರತೆಯಿಂದ ಕಲಿಕೆಗೆ ಮುಂದಾಗುತ್ತಾರೋ ಅವರು ಸಾಧಕರಾಗುತ್ತಾರೆ. ಪಠಣ, ಮನನ, ಗಹನ ವಿದ್ಯಾರ್ಥಿ ಜೀವನದಲ್ಲಿ ಅತ್ಯಗತ್ಯ, ನಿಮ್ಮ ಆಲೋಚನೆ ಕೇವಲ ಕಲಿಕೆಯ ಕಡೆಯೇ ಇರಬೇಕು. ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯಿಂದ ಸಾಧನೆ ಸಾಧ್ಯವಾದ್ದರಿಂದ ನಿಮ್ಮ ಶೈಕ್ಷ ಣಿಕ ಜೀವನದ ಅಡಿಪಾಯವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಎದುರಿಸಲು ಆತ್ಮವಿಶ್ವಾಸದಿಂದ ಸಿದ್ಧರಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮಾ.21 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭಗೊಳ್ಳುತ್ತಿವೆ. ನಿಮಗೆ ಉಳಿದಿರುವುದು ಕೇವಲ 95 ದಿನಗಳು ಮಾತ್ರ. ಇಂದಿನಿಂದ ಪ್ರತಿನಿಮಿಷವೂ ಅಮೂಲ್ಯವಾಗಿದ್ದು, ನೀವು ಕಲಿಕೆಯಲ್ಲಿ ಆಸಕ್ತಿ ವಹಿಸಿ ಶ್ರದ್ಧೆಯಿಂದ ಓದಿದ್ದೇ ಆದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ. ಏಕಾಗ್ರತೆಯಿಂದ ಕಲಿಕೆಗೆ ಮುಂದಾದಾಗ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಶ್ರೀನಿವಾಸಮೂರ್ತಿ, ಟಿ.ಪಿ.ಒ ಹನುಮಂತರಾಯಪ್ಪ, ಕೋಟೆ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಪದ್ಮಾವತಿ, ಶಬ್ರಿನ್ ತಾಜ್, ಲಕ್ಷ್ಮೀ, ರೇಷ್ಮಾ ಬಾನು, ಮತ್ತು ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Share this article