ವೈರಮುಡಿ ಬ್ರಹ್ಮೋತ್ಸವ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ಮಾಡಿ: ಜಿಲ್ಲಾಧಿಕಾರಿ ಡಾ.ಕುಮಾರ

KannadaprabhaNewsNetwork |  
Published : Mar 27, 2025, 01:01 AM IST
26ಕೆಎಂಎನ್ ಡಿ28 | Kannada Prabha

ಸಾರಾಂಶ

ವೈರಮುಡಿ ಉತ್ಸವ ನಿಗದಿತ ಸಮಯದ ವೇಳೆಗೆ ಆರಂಭವಾಗುವಂತೆ ದೇವಾಲಯದ ಪಾರುಪತ್ತೆಗಾರರು ಸಿದ್ಧತೆ ಮಾಡಿಕೊಳ್ಳ ಬೇಕು. ಭಕ್ತರು ಯಾವುದೇ ಪ್ರಯಾಸವಿಲ್ಲದೆ ನೂಕು ನುಗ್ಗಲಿಲ್ಲದೇ ವೈರಮುಡಿ ಉತ್ಸವದ ದರ್ಶನ ಮಾಡುವಂತೆ ಪೊಲೀಸ್ ಭದ್ರತೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಚೆಲುವನಾರಾಯಣಸ್ವಾಮಿರ ವೈರಮುಡಿ ಬ್ರಹ್ಮೋತ್ಸವವನ್ನು ಅದ್ಧೂರಿಯಾಗಿ ನಡೆಸಲು ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಸೂಚಿಸಿದರು.

ಬುಧವಾರ ಮೇಲುಕೋಟೆಯಲ್ಲಿ ಉತ್ಸವದ ಬೀದಿಗಳು, ಪಾರ್ಕಿಂಗ್ ಸ್ಥಳಗಳು, ವೈರಮುಡಿ ಉತ್ಸವ ಆರಂಭ, ಮುಕ್ತಾಯವಾಗುವ ಸ್ಥಳ ಪರಿಶೀಲಿಸಿ ಮಾತನಾಡಿ, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಬೇಕು. ರಾಜಮುಡಿ ಕಿರೀಟದ ಪರಿಶೀಲನೆ ವೇಳೆ ಹೆಚ್ಚಿನ ಜನರು ಅನಗತ್ಯವಾಗಿ ಸೇರುವುದನ್ನು ನಿಯಂತ್ರಿಸಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲಹೆ ನೀಡಿದರು.

ವೈರಮುಡಿ ಉತ್ಸವ ನಿಗದಿತ ಸಮಯದ ವೇಳೆಗೆ ಆರಂಭವಾಗುವಂತೆ ದೇವಾಲಯದ ಪಾರುಪತ್ತೆಗಾರರು ಸಿದ್ಧತೆ ಮಾಡಿಕೊಳ್ಳ ಬೇಕು. ಭಕ್ತರು ಯಾವುದೇ ಪ್ರಯಾಸವಿಲ್ಲದೆ ನೂಕು ನುಗ್ಗಲಿಲ್ಲದೇ ವೈರಮುಡಿ ಉತ್ಸವದ ದರ್ಶನ ಮಾಡುವಂತೆ ಪೊಲೀಸ್ ಭದ್ರತೆ ಮಾಡಬೇಕು ಎಂದರು.

ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ ಕುಡಿಯುವ ನೀರು ಭಕ್ತರಿಗೆ ಸಮರ್ಪಕವಾಗಿ ದೊರೆಯುವಂತೆ ಮಾಡಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶಾಸಕರ ಸೂಚನೆಯಂತೆ ಉತ್ಸವ ಬೀದಿಗಳಲ್ಲಿ ಆಕರ್ಷಕ ದೀಪಲಂಕಾರ ಮಾಡಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ಚೆಲುವನಾರಾಯಣಸ್ವಾಮಿಗೆ ನೂತನ ಬೆಳ್ಳಿ ರಥ ಅರ್ಪಿಸಬೇಕೆನ್ನುವ ಧಾರ್ಮಿಕ ದತ್ತಿ ಆಯುಕ್ತರ ಸಲಹೆ ಬಗ್ಗೆ ಸ್ಥಾನಿಕರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಧಾರ್ಮಿಕ ದತ್ತಿ ಇಲಾಖೆಗೆ ತಕ್ಷಣವೇ ಪ್ರಸ್ತಾವನೆ ಕಳಿಸಿ ವೈರಮುಡಿ ಉತ್ಸವದಿಂದಲೇ ಬೆಳ್ಳಿ ರಥದ ಕಾರ್ಯ ಚಟುವಟಿಕೆಗಳನ್ನು ಆರಂಭಿಸಬೇಕು ಎಂದರು.

ಅನ್ನದಾನದ ಬಗ್ಗೆ ಮಾಹಿತಿ ಪಡೆದ ಡಿಸಿ ಅನ್ನಪ್ರಸಾದ ಭವನ ನಿರ್ವಹಣೆಗೆ ಪ್ರತ್ಯೇಕ ಸಮಿತಿ ರಚಿಸಬೇಕು. ತಕ್ಷಣ ನನಗೆ ಪ್ರೊಪೋಸಲ್ ಕಳುಹಿಸಿಕೊಡಬೇಕು. ಭಕ್ತರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಕಳೆದ ವರ್ಷಕ್ಕಿಂತ ವಿಭಿನ್ನವಾಗಿ ಆಕರ್ಷಕವಾಗಿ ಪುಷ್ಪಾಲಂಕಾರ, ಭಕ್ತರ ವಾಹನಗಳಿಗೆ ಹೆಚ್ಚುಕಟ್ಟಾದ ಪಾರ್ಕಿಂಗ್ ವ್ಯವಸ್ಥೆ ಆಗಬೇಕು. ವೈದ್ಯಕೀಯ ತಂಡ ಸಜ್ಜುಗೊಳಿಸಬೇಕು ಎಂದರು.

ಈ ವೇಳೆ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ, ದೇವಾಲಯದ ಅಧಿಕಾರಿ ಶೀಲಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಉತ್ಸವ ಬೀದಿಗಳ ಪರಿಶೀಲನೆಗೂ ಮುನ್ನ ಜಿಲ್ಲಾಧಿಕಾರಿ ಡಾ.ಕುಮಾರ್ ಚೆಲುವನಾರಾಯಣನ ದರ್ಶನ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು
ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌