ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಲು ಮುಂದಾಗಿ: ಡಿಸಿಎಂ ಡಿ.ಕೆ. ಶಿವಕುಮಾರ್

KannadaprabhaNewsNetwork |  
Published : Sep 29, 2024, 01:30 AM IST
ಕೆ ಕೆ ಪಿ ಸುದ್ದಿ 01: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡಗಳನ್ನು ಉಪಮುಖ್ಯಮಂತ್ರಿ ಡಿಕೆಶಿ ಉದ್ಘಾಟಿಸಿದರು.  | Kannada Prabha

ಸಾರಾಂಶ

ಸದ್ಯ ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನ ಯುಗದಲ್ಲಿದ್ದು, ನಿಮ್ಮ ಕೈ ಬೆರಳ ತುದಿಯಲ್ಲಿ ಎಲ್ಲಾ ಮಾಹಿತಿ ಸಿಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೂಡ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕನಕಪುರದಲ್ಲಿ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ನಾನು ರಾಜ್ಯಕ್ಕೆ ಸೇವೆ ಮಾಡಬೇಕೆಂಬ ಪ್ರಯತ್ನ ನಡೆಯುತ್ತಿದೆ । ಕಟ್ಟಡ ಉದ್ಘಾಟನೆಕನ್ನಡಪ್ರಭ ವಾರ್ತೆ ಕನಕಪುರ

ಸದ್ಯ ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನ ಯುಗದಲ್ಲಿದ್ದು, ನಿಮ್ಮ ಕೈ ಬೆರಳ ತುದಿಯಲ್ಲಿ ಎಲ್ಲಾ ಮಾಹಿತಿ ಸಿಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೂಡ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ನೀವು ಕನಕಪುರದ ವರಲ್ಲ ಬೆಂಗಳೂರು ಜಿಲ್ಲೆಗೆ ಸೇರಿದವರಾಗಿದ್ದು, ಇಲ್ಲಿ 15-20 ವರ್ಷದ ಮಕ್ಕಳಿದ್ದೀರಿ ನೀವು ವಿದ್ಯಾವಂತರು, ಪ್ರಜ್ಞಾವಂತರಿದ್ದು ನೀವು ಕೇವಲ ಕನಕಪುರಕ್ಕೆ ಸೇರಿಲ್ಲ ಬೆಂಗಳೂರು ಜಿಲ್ಲೆಗೆ ಸೇರಿದ ವಿದ್ಯಾರ್ಥಿಗಳಾಗಿದ್ದು, ಕಾರಣಾಂತರದಿಂದ ಬೇರೆ ಹೆಸರು ಬಂದಿದೆ ಅಷ್ಟೇ. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರೂ ಜಾಗತಿಕ ಮಟ್ಟದ ಮಕ್ಕಳ ಜತೆ ಸ್ಪರ್ಧಿಸಲು ಪರಿಶ್ರಮ ಹಾಕಬೇಕು. ಕನಕಪುರ ಯಾವ ಮಟ್ಟಕ್ಕೆ ಬೆಳೆಯುತ್ತದೆ ಎಂಬುದನ್ನು ಮುಂದೆ ನೀವೇ ನೋಡುತ್ತೀರಿ ಎಂದರು.

ಪ್ರತಿಭೆ ಗುರುತಿಸಿ ಜೇವನ ರೂಪಿಸಿಕೊಳ್ಳಿ:

ಕನಕಪುರದಲ್ಲಿರುವ ಡೈರಿ, ಇಡೀ ದೇಶದಲ್ಲಿ ಇಲ್ಲ. ನೀವು ಅಲ್ಲಿಗೆ ಭೇಟಿ ನೀಡಿ ವೀಕ್ಷಣೆ ಮಾಡಬೇಕು. ಒಂದು ಲೀ. ಹಾಲಿಗಿಂತ, ಒಂದು ಲೀ. ನೀರಿಗೆ ಹೆಚ್ಚಿನ ಹಣ ನೀಡಬೇಕಾದ ಪರಿಸ್ಥಿತಿ ಇದೆ. ನೋಬಲ್ ಪ್ರಶಸ್ತಿ ವಿಜೇತ ಮೊಹಮದ್ ಯೂನಿಸ್ ಎಂಬುವವರು ಒಂದು ಮಾತು ಹೇಳಿದ್ದಾರೆ. ನೀವು ಒಬ್ಬ ವ್ಯಕ್ತಿಗೆ ಮೀನನ್ನು ಊಟವಾಗಿ ನೀಡಿದರೆ ಅದು ಒಂದು ದಿನಕ್ಕೆ ಸೀಮಿತವಾಗುತ್ತದೆ. ಆದರೆ ಮೀನುಗಾರಿಕೆಯನ್ನು ಕಲಿಸಿಕೊಟ್ಟರೆ ಅದು ಅವನ ಜೀವನ ಪೂರ್ತಿ ಆತನಿಗೆ ಊಟ ತಯಾರಿಸುವ ಸಾಮರ್ಥ್ಯ ನೀಡುತ್ತದೆ ಎಂದು ಹೇಳಿದ್ದಾರೆ. ಅದೇ ರೀತಿ ನೀವು ನಿಮ್ಮಲ್ಲಿರುವ ಪ್ರತಿಭೆ ಗುರುತಿಸಿ ಅದರ ಮೇಲೆ ನಿಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದರು ತಿಳಿಸಿದರು.

ನಾನು ಇಲ್ಲಿನ ಶಾಸಕನಾದಾಗ ಕನಕಪುರ, ಇಲ್ಲಿನ ರಸ್ತೆಗಳು ಹೇಗಿತ್ತು, ಈಗ ಹೇಗೆ ಆಗಿದೆ ಎಂಬುದರ ಬಗ್ಗೆ ಒಂದು ಚಿತ್ರ ರಚಿಸಲಾಗಿದೆ. ಕನಕಪುರ ತಾಲೂಕು ದಿ.ಕರಿಯಪ್ಪನವರ ಕಾಲದಿಂದಲೂ ವಿದ್ಯಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದೆ. ಮಾಜಿ ಸಂಸದ ಡಿ. ಕೆ. ಸುರೇಶ್ ಪರಿಶ್ರಮ ಪಟ್ಟು ಈ ಭಾಗದ ಅಭಿವೃದ್ಧಿಗೆ ಕಾರಣರಾಗಿದ್ದು, ನಮ್ಮ ಸಂಸ್ಥೆಯಿಂದ ಪ್ರತಿ ವರ್ಷ 300 ವಿದ್ಯಾರ್ಥಿಗಳಿಂದ ಆರಂಭವಾಗಿ ಈಗ 4 ಸಾವಿರ ವಿದ್ಯಾರ್ಥಿಗಳಿಗೆ ನೆರವು ನೀಡಲಾಗುತ್ತಿದೆ ಎಂದರು.

ಎಂಎಲ್ ಸಿ ಎಸ್ ರವಿ, ಕರಿಯಪ್ಪ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀಕಂಠು, ರಾಮನಗರ ಜಿಲ್ಲಾಧಿಕಾರಿ ಯಶವಂತ ವಿ. ಗುರೀಕಾರ್, ಕಾಲೇಜಿನ ಪ್ರಾಂಶುಪಾಲೆ ಶ್ಯಾಮಲಾ ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಆಸೆ ಬಿಚ್ಚಿಟ್ಟ ಡಿಕೆಶಿಕನಕಪುರದ ಜನತೆ ನನಗೆ ಆಶೀರ್ವಾದ ಮಾಡಿದ್ದು, ನಾನು ರಾಜ್ಯಕ್ಕೆ ಸೇವೆ ಮಾಡಬೇಕು ಅಂತ ದೊಡ್ಡ ಪ್ರಯತ್ನ, ಹೋರಾಟ ನಡೆಯುತ್ತಿದೆ. ಸದ್ಯ ನಾನು ಇಲ್ಲಿ ಡಿಸಿಎಂ ಆಗಿ ಬಂದಿಲ್ಲ, ನಿಮ್ಮ ಶಾಸಕನಾಗಿ ಬಂದಿದ್ದೇನೆ. ಡಿಸಿಎಂ ಏನಿದ್ರು ವಿಧಾನಸೌಧದಲ್ಲಿ ಇಲ್ಲಿ ನೀವೆಲ್ಲ ನಮ್ಮ ಮನೆ ಮಕ್ಕಳು, ನಿಮ್ಮೆಲ್ಲರ ಆಸೆ, ಆರೈಕೆ ಹಾಗೂ ತಾಲೂಕಿನ ಜನರ ಆಶೀರ್ವಾದಿಂದ ಮುಂದಿನ ದಿನಗಳಲ್ಲಿ ಶುಭಗಳಿಗೆ ಬರಲಿದೆ ಎಂದು ಪರೋಕ್ಷವಾಗಿ ಸಿಎಂ ಆಸೆ ವ್ಯಕ್ತಪಡಿಸಿದರು. ಸಿಎಂ ಸಿದ್ದರಾಮಯ್ಯ ಮೇಲೆ ಎಫ್ಐಆರ್ ಆಗಿ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಡಿಕೆಶಿ ಹೇಳಿಕೆಯು ಕುತೂಹಲ ಮೂಡಿಸಿದೆ.

ಕೆಲಸ ಕೊಡುವ ಮನಸ್ಥಿತಿ ಬೆಳೆಸಿಕೊಳ್ಳಿ ನೀವು ಯಾವುದೇ ಕ್ಷೇತ್ರ ಆಯ್ಕೆಮಾಡಿಕೊಂಡರೂ ನಿಮ್ಮ ಗುರಿ ಆ ಕ್ಷೇತ್ರದಲ್ಲಿ ನಾಯಕತ್ವ ವಹಿಸುವಂತಿರಬೇಕು. ನಿಮ್ಮ ಶಿಕ್ಷಕರು, ಪೋಷಕರು ನಿಮ್ಮ ಮೇಲೆ ಇಟ್ಟಿರುವ ವಿಶ್ವಾಸ ಗಮನದಲ್ಲಿಟ್ಟುಕೊಂಡು ಪ್ರಯತ್ನ ಪಟ್ಟರೇ ಯಾವುದೇ ಸಾಧನೆ ಅಸಾಧ್ಯವಲ್ಲ. ಬಾಗಲಕೋಟೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ 10ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿರುವುದೇ ಇದಕ್ಕೆ ಸಾಕ್ಷಿ. ಕೇವಲ ಕೆಲಸಕ್ಕೆ ಸೇರಬೇಕು ಎಂದು ಗುರಿ ಇಟ್ಟುಕೊಳ್ಳದೇ ನೀವು ಬೇರೆಯವರಿಗೆ ಕೆಲಸ ಕೊಡುವಂತ ಮನಸ್ಥಿತಿ ಬೆಳೆಸಿಕೊಳ್ಳುವಂತೆ ಡಿಕೆಶಿ ಸಲಹೆ ನೀಡಿದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ