ಈದ್‌ಗೆ ಸಿದ್ಧತೆ: ಮಾರುಕಟ್ಟೆ ರಷ್‌!

KannadaprabhaNewsNetwork | Published : Apr 8, 2024 1:01 AM

ಸಾರಾಂಶ

ಕಳೆದ ವರ್ಷಕ್ಕಿಂತ ಈ ಬಾರಿ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ಒಂದೆಡೆ ರಣ ಬಿಸಿಲು, ಮತ್ತೊಂದೆಡೆ ಕಾಲಿಡಲು ಆಗದಷ್ಟು ಜನದಟ್ಟಣೆ. ಇಂತಹ ವಾತಾವರಣದಲ್ಲಿ ಹಬ್ಬಕ್ಕೆ ಬೇಕಾದ ಬಟ್ಟೆ, ವಸ್ತುಗಳ ಖರೀದಿ ಪ್ರಕ್ರಿಯೆ ಜೋರಾಗಿತ್ತು.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಇನ್ನೇನು 4-5 ದಿನಗಳಲ್ಲಿ ಮುಸಲ್ಮಾನರ ಪವಿತ್ರ ಹಬ್ಬ ಈದುಲ್ ಫಿತ್ರ್‌ (ರಂಜಾನ್) ಹಬ್ಬ ಬರುತ್ತಿದ್ದು, ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರಲ್ಲಿ ಜನಜಂಗುಳಿ ಕೂಡಿದೆ. ನಗರದ ಪ್ರಮುಖ ಮಾರುಕಟ್ಟೆಗಳಾದ ಶಾ ಬಜಾರ್‌, ಎಂ.ಜಿ. ಮಾರ್ಕೆಟ್‌ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಕಳೆದ 15-20 ದಿನಗಳಿಂದ ಭರ್ಜರಿ ವ್ಯಾಪಾರ ನಡೆಯುತ್ತಿದೆ.

ಮುಸಲ್ಮಾನ್‌ ಬಾಂಧವರು ಒಂದು ತಿಂಗಳು ಕಾಲ ಉಪವಾಸ ವ್ರತ (ರೋಜಾ) ಪೂರ್ಣಗೊಳಿಸಿ ಈದ್ ಸಂಭ್ರಮಾಚರಣೆಗೆ ಅಣಿಯಾಗುತ್ತಿದ್ದಾರೆ. ಹಬ್ಬವೆಂದ ಮೇಲೆ ಹೊಸ ಬಟ್ಟೆ ಖರೀದಿ ಸಾಮಾನ್ಯ. ಅದರಲ್ಲೂ ರಂಜಾನ್ ತಿಂಗಳಲ್ಲಿ ಎಲ್ಲರೂ ಹೊಸ ಬಟ್ಟೆ ಧರಿಸುವುದು ವಿಶೇಷ.

ಬಿಸಿಲಲ್ಲೂ ತಗ್ಗದ ದಟ್ಟಣೆ:

ಕಳೆದ ವರ್ಷಕ್ಕಿಂತ ಈ ಬಾರಿ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ಒಂದೆಡೆ ರಣ ಬಿಸಿಲು, ಮತ್ತೊಂದೆಡೆ ಕಾಲಿಡಲು ಆಗದಷ್ಟು ಜನದಟ್ಟಣೆ. ಇಂತಹ ವಾತಾವರಣದಲ್ಲಿ ಹಬ್ಬಕ್ಕೆ ಬೇಕಾದ ಬಟ್ಟೆ, ವಸ್ತುಗಳ ಖರೀದಿ ಪ್ರಕ್ರಿಯೆ ಜೋರಾಗಿತ್ತು. ಮುಸಲ್ಮಾನ್‌ ಬಾಂಧವರು ರಂಜಾನ್‌ ಹಬ್ಬಕ್ಕೆ ಬೇಕಾದ ಸಿದ್ಧತೆಯಲ್ಲಿ ತೊಡಗಿರುವುದು ನಗರದಲ್ಲಿ ಕಂಡುಬಂದಿತು. ಇಲ್ಲಿನ ಶಾ ಬಜಾರ್, ಎಂ.ಜಿ. ಮಾರ್ಕೆಟ್‌ ರಾತ್ರಿ 2 ಗಂಟೆಯ ವರೆಗೂ ಜನರಿಂದ ತುಂಬಿ ತುಳುಕುತ್ತಿವೆ. ಎಲ್ಲಿ ನೋಡಿದರಲ್ಲಿ ಖರೀದಿಯ ಭರಾಟೆಯೇ ಇದೆ.

ಬೆಲೆಯೂ ಏರಿಕೆ:

ಬಿಸಿಲಿನ ಆರ್ಭಟ ಹೇಗಿದೆಯೋ ಹಾಗೆ ಬೆಲೆಗಳ ಏರಿಕೆಯೂ ಗ್ರಾಹಕರ ಜೇಬು ಸುಡುತ್ತಿದೆ. ರಂಜಾನ್ ತಿಂಗಳಲ್ಲಿ ಮುಸ್ಲಿಮರು ಕಡ್ಡಾಯವಾಗಿ ಬಟ್ಟೆ, ಹಣ್ಣು, ಮಸಾಲೆ ಪದಾರ್ಥ ಖರೀದಿ, ಇದರೊಂದಿಗೆ ಮನೆಯಲ್ಲಿ ವಿಶೇಷ ಅಡುಗೆ ತಯಾರಿಸುತ್ತಾರೆ. ಅಡುಗೆಗೆ ಬೇಕಾದ ಪದಾರ್ಥಗಳನ್ನು ಖರೀದಿಸುವವರ ಸಂಖ್ಯೆಯೂ ಅಧಿಕ. ನಿತ್ಯ ಮಾರುಕಟ್ಟೆಯ ವ್ಯಾಪಾರಕ್ಕಿಂತಲೂ ಈ ರಂಜಾನ್‌ ತಿಂಗಳಲ್ಲಿ ವಸ್ತುಗಳ ಬೆಲೆ ಕೊಂಚ ಏರಿಕೆಯಾಗಿರುವುದು ಕಂಡುಬಂದಿತು.

ತಿಂಗಳು ಕಾಲ ಮಾರ್ಗ ಬಂದ್‌:

ಜನದಟ್ಟಣೆಯ ಹಿನ್ನೆಲೆಯಲ್ಲಿ ರಂಜಾನ್‌ ಹಬ್ಬ ಮುಗಿಯುವ ವರೆಗೆ ನಗರದ ಸಿಬಿಟಿ ಹಿಂಭಾಗದಿಂದ ಹಿಡಿದು ಶಾ ಬಜಾರ್‌ ವರೆಗೆ ವಾಹನ ಸಂಚಾರ್‌ ಸಂಪೂರ್ಣ ಬಂದ್‌ ಮಾಡಲಾಗಿದೆ. ಅಲ್ಲದೇ ಶಾ ಬಜಾರ್‌ ಸಂಪೂರ್ಣವಾಗಿ ವಿದ್ಯುತ್‌ ದೀಪಗಳಿಂದ ಅಲಂಕರಿಸಿರುವುದು ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಮಾಡಿದೆ. ಕಳೆದ ಬಾರಿ ರಾತ್ರಿ 10.30ರ ವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈ ಬಾರಿ ರಾತ್ರಿ 2 ಗಂಟೆ ವರೆಗೂ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿರುವುದು ವಿಶೇಷ. ಯುಗಾದಿ-ರಂಜಾನ್‌ ರಂಗು

ಈ ಬಾರಿ ರಂಜಾನ್‌ ಹಾಗೂ ಯುಗಾದಿ ಎರಡೂ ಹಬ್ಬಗಳು ಕೂಡಿ ಬಂದಿರುವುದು ಮಾರುಕಟ್ಟೆಯಲ್ಲಿ ಜನಜಂಗುಳಿ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಿದೆ. ನಗರದ ಶಾ ಬಜಾರ್‌ನಲ್ಲಿ ಬಟ್ಟೆಯಿಂದ ಹಿಡಿದು ಹಬ್ಬ, ದಿನಬಳಕೆಗೆ ಬೇಕಾದ ಬಗೆಬಗೆಯ ವಸ್ತುಗಳು ಮಾರಾಟಕ್ಕೆ ಲಭ್ಯವಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಜನಜಂಗುಳಿ ಕಂಡುಬಂದಿತು.ಕಳೆದ ಬಾರಿಗಿಂತಲೂ ಈ ಬಾರಿ ವ್ಯಾಪಾರ ಉತ್ತಮವಾಗಿದೆ. ಮಧ್ಯಾಹ್ನ ಬಿಸಿಲಿನ ಪ್ರಖರತೆ ಹೆಚ್ಚಾಗಿರುತ್ತದೆ. ಈ ವೇಳೆ ವ್ಯಾಪಾರ ಕೊಂಚ ಕಡಿಮೆಯಾಗಿರುತ್ತದೆ. ಸಂಜೆಯಿಂದ ಮಧ್ಯರಾತ್ರಿ ವರೆಗೂ ವ್ಯಾಪಾರ ನಡೆಯುತ್ತದೆ ಎಂದು ವ್ಯಾಪಾರಸ್ಥ ಮಹ್ಮದ್‌ ಆರೀಫ್‌ ಟೋಪಿವಾಲೆ ಎಂದರು.

ನಾನು ಪ್ರತಿವರ್ಷ ರಂಜಾನ್‌ ಹಬ್ಬಕ್ಕೆ ಬಟ್ಟೆ ಖರೀದಿಗಾಗಿ ಹುಬ್ಬಳ್ಳಿಗೆ ಬರುತ್ತೇನೆ. ಬೇರೆ ಕಡೆ ಹೋಲಿಸಿದರೆ ಇಲ್ಲಿ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಬಟ್ಟೆಗಳು ಸಿಗುತ್ತವೆ. ಈ ಬಾರಿ ಸುಡು ಬಿಸಿಲಿನ ಮಧ್ಯೆಯೇ ಬಟ್ಟೆ ಖರೀದಿಸುತ್ತಿದ್ದೇವೆ ಎಂದು ಬಟ್ಟೆ ಖರೀದಿಗೆ ಗದಗನಿಂದ ಆಗಮಿಸಿದ ಅಶಫಾಕ್‌ ಇರಕಲ್ಲ ಹೇಳಿದರು.

Share this article