ಗುಣಮಟ್ಟದ ಶುಶ್ರೂಷಕರ ತಯಾರಿ ನಮ್ಮ ಕರ್ತವ್ಯ: ಡಾ। ಶರಣಪ್ರಕಾಶ್‌

KannadaprabhaNewsNetwork | Published : Feb 25, 2024 1:53 AM

ಸಾರಾಂಶ

ದಿ ಟ್ರೈನ್ಡ್‌ ನರ್ಸಸ್‌ ಅಸೋಸಿಯೇಷನ್‌ನ ಕರ್ನಾಟಕ ಘಟಕದಿಂದ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಪ್ರಶಸ್ತಿಯಾದ ರಾಜಕುಮಾರಿ ಶ್ರೀನಗರೀಂದ್ರ ಪ್ರಶಸ್ತಿ ಪುರಸ್ಕೃತರಾದ ದಿ ಟ್ರೈನ್ಡ್‌ ನರ್ಸಸ್‌ ಅಸೋಸಿಯೇಷನ್‌ನ ಅಧ್ಯಕ್ಷ ಡಾ। ಟಿ.ದಿಲೀಪ್‌ ಕುಮಾರ್‌ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಶ್ವದಲ್ಲಿ ಶುಶ್ರೂಷಕರಿಗೆ ಹೆಚ್ಚಿನ ಬೇಡಿಕೆಯಿದ್ದು, ಗುಣಮಟ್ಟದ ಶುಶ್ರೂಷಕರನ್ನು ಸಿದ್ಧಪಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅದಕ್ಕಾಗಿ ಗುಣಮಟ್ಟದ ಶಿಕ್ಷಣ ಹಾಗೂ ತರಬೇತಿ ನೀಡುವ ಕಾರ್ಯ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ। ಶರಣ ಪ್ರಕಾಶ್ ಪಾಟೀಲ್‌ ತಿಳಿಸಿದರು.

ದಿ ಟ್ರೈನ್ಡ್‌ ನರ್ಸಸ್‌ ಅಸೋಸಿಯೇಷನ್‌ನ ಕರ್ನಾಟಕ ಘಟಕದಿಂದ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಪ್ರಶಸ್ತಿಯಾದ ರಾಜಕುಮಾರಿ ಶ್ರೀನಗರೀಂದ್ರ ಪ್ರಶಸ್ತಿ ಪುರಸ್ಕೃತರಾದ ದಿ ಟ್ರೈನ್ಡ್‌ ನರ್ಸಸ್‌ ಅಸೋಸಿಯೇಷನ್‌ನ ಅಧ್ಯಕ್ಷ ಡಾ। ಟಿ.ದಿಲೀಪ್‌ ಕುಮಾರ್‌ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಡಾ। ಟಿ.ದಿಲೀಪ್‌ ಕುಮಾರ್‌ ಅವರು 40 ವರ್ಷಕ್ಕಿಂತ ಹೆಚ್ಚಿನ ಕಾಲ ದಿ ಟ್ರೈನ್ಡ್‌ ನರ್ಸಸ್‌ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶುಶ್ರೂಷಕರಿಗೆ ಹೆಚ್ಚಿನ ಸೌಲಭ್ಯ ಸಿಗುವುದು ಸೇರಿದಂತೆ ಹಲವು ಉತ್ತಮ ಕಾರ್ಯಗಳನ್ನು ಅವರು ಮಾಡಿದ್ದಾರೆ. ಅವರು ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದಾಗ ನರ್ಸಿಂಗ್‌ ಕ್ಷೇತ್ರಕ್ಕೆ ಕೇವಲ ₹40 ಲಕ್ಷ ಮಾತ್ರ ಬಜೆಟ್‌ ಇತ್ತು. ಅದನ್ನು ಕೇಂದ್ರ ಸರ್ಕಾರ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಮಾತುಕತೆ ನಡೆಸಿ, ಶ್ರಮವಹಿಸಿ ಸದ್ಯ ₹3 ಸಾವಿರ ಕೋಟಿಗೂ ಹೆಚ್ಚಿನ ಹಣವನ್ನು ನರ್ಸಿಂಗ್ ಕ್ಷೇತ್ರಕ್ಕೆ ಮೀಸಲಿಡುವಂತೆ ಮಾಡಿದ್ದಾರೆ. ಇದು ನರ್ಸಿಂಗ್‌ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಯಾಗಿದೆ. ಅವರು ಕನ್ನಡಿಗರಾಗಿದ್ದು, ಅವರಿಗೆ ಪ್ರತಿಷ್ಠಿತ ಶ್ರೀನಗರೀಂದ್ರ ಪ್ರಶಸ್ತಿ ದೊರೆತಿರುವುದು ಸಂತಸದ ವಿಷಯ ಎಂದರು.

ರಾಜ್ಯದಲ್ಲಿ 1 ಸಾವಿರಕ್ಕೂ ಹೆಚ್ಚಿನ ನರ್ಸಿಂಗ್‌ ಶಿಕ್ಷಣ ಸಂಸ್ಥೆಗಳಿವೆ. ಅವುಗಳಿಂದ ಉತ್ತಮ ಶುಶ್ರೂಷಕರನ್ನು ಸಮಾಜಕ್ಕೆ ನೀಡುವ ಕೆಲಸ ಮಾಡಲಾಗುತ್ತಿದೆ. ಅಲ್ಲದೆ, ಶುಶ್ರೂಷಕ ವೃತ್ತಿಯು ಪ್ರತಿಷ್ಠಿತ ಮತ್ತು ಉದಾತ್ತ ವೃತ್ತಿಯಾಗಿದೆ. ತಮ್ಮ ವೃತ್ತಿಯಲ್ಲಿ ಸೇವೆಯನ್ನು ಮಾಡುತ್ತಾ, ಸಮಾಜಮುಖಿ ಕಾರ್ಯ ಮಾಡುತ್ತಾರೆ. ವಿಶ್ವದೆಲ್ಲೆಡೆ ಶುಶ್ರೂಷಕರಿಗೆ ಬೇಡಿಕೆಯಿದೆ. ನಮ್ಮ ಶಿಕ್ಷಣ ಸಂಸ್ಥೆಗಳ ಮೂಲಕ ಗುಣಮಟ್ಟದ ಶಿಕ್ಷಣ ಹಾಗೂ ತರಬೇತಿ ನೀಡಿ ಉತ್ತಮ ಶುಶ್ರೂಷಕರನ್ನು ಸಿದ್ಧಪಡಿಸಬೇಕಿದೆ ಎಂದು ಹೇಳಿದರು.

ನಾಗರಿಕ ಅಭಿನಂದನಾ ಸಮಿತಿ ಅಧ್ಯಕ್ಷ ಡಾ। ಬಿ.ಟಿ.ರುದ್ರೇಶ್‌, ಕಿದ್ವಾಯಿ ಆಸ್ಪತ್ರೆ ಮಾಜಿ ನಿರ್ದೇಶಕ ಡಾ। ಲಿಂಗೇಗೌಡ ಇದ್ದರು.

Share this article