ಐದು ಸಾವಿರ ಕಣಕದ ದೀಪ ಬೆಳಗಿಸಲು ಸಿದ್ಧತೆ

KannadaprabhaNewsNetwork | Published : Jan 22, 2024 2:16 AM

ಸಾರಾಂಶ

ರಾಮೋತ್ಸವ ಹಿನ್ನೆಲೆಯಲ್ಲಿ ಒಂದೊಂದು ಓಣಿ, ಏರಿಯಾದಲ್ಲಿ ಒಂದೊಂದು ರೀತಿಯ ವಿಶಿಷ್ಠ, ವಿಭಿನ್ನ ರೀತಿಯಲ್ಲಿ ರಾಮಲಲ್ಲಾನನ್ನು ಭಕ್ತಿಯಿಂದ ಬರಮಾಡಿಕೊಳ್ಳುವ ಸಿದ್ಧತೆ ಭರದಿಂದ ಸಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಶ್ರೀರಾಮೋತ್ಸವ ಹಿನ್ನೆಲೆಯಲ್ಲಿ ಇಲ್ಲಿನ ಮೂರುಸಾವಿರ ಮಠದ ಹತ್ತಿರದ ಹರಪನಹಳ್ಳಿ ಓಣಿಯ ಜನರು ಕಣಕ (ಹಿಟ್ಟು)ದಿಂದ ತಯಾರಿಸಿದ 5 ಸಾವಿರ ಹಣತೆಯಲ್ಲಿ ತುಪ್ಪದ ದೀಪ ಬೆಳಗಲಿದ್ದಾರೆ. ಇದಕ್ಕಾಗಿ ಕಣಕದ ದೀಪ ತಯಾರಿಕೆ ಬಲುಜೋರಿನಿಂದ ನಡೆಯಿತು.

ರಾಮೋತ್ಸವ ಹಿನ್ನೆಲೆಯಲ್ಲಿ ಒಂದೊಂದು ಓಣಿ, ಏರಿಯಾದಲ್ಲಿ ಒಂದೊಂದು ರೀತಿಯ ವಿಶಿಷ್ಠ, ವಿಭಿನ್ನ ರೀತಿಯಲ್ಲಿ ರಾಮಲಲ್ಲಾನನ್ನು ಭಕ್ತಿಯಿಂದ ಬರಮಾಡಿಕೊಳ್ಳುವ ಸಿದ್ಧತೆ ಭರದಿಂದ ಸಾಗಿದೆ.

ಇಲ್ಲಿನ ಹರಪನಹಳ್ಳಿ ಓಣಿಯ ನಿವಾಸಿಗಳು ಕಳೆದ ಒಂದು ವಾರದಿಂದ ಕಣಕದ(ಗೋದಿ ಹಿಟ್ಟು) ದೀಪಗಳಲ್ಲಿ ತುಪ್ಪ ಹಾಕಿ ದೀಪ ಬೆಳಗಿಸುವ ಸಿದ್ಧತೆ ನಡೆಸಿದ್ದು, ಭಾನುವಾರ ಸಂಜೆ ಇದಕ್ಕೆ ಬೇಕಾದ ಎಲ್ಲ ತಯಾರಿ ಕೈಗೊಂಡರು.

75ಕೆಜಿ ಹಿಟ್ಟು ಬಳಕೆ: ಗೋದಿಯ ಹಿಟ್ಟಿನಲ್ಲಿ ಚಿಕ್ಕದಾದ ಹಣತೆ ತಯಾರಿಸಿ ಅದನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ನಂತರ ಒಂದು ದಿನ ಪೂರ್ತಿ ಒಣಗಲು ಹಾಕಲಾಗುತ್ತದೆ. ಇದರಲ್ಲಿ ಇದರಲ್ಲಿ ತುಪ್ಪವನ್ನು ಹಾಕಿ ದೀಪ ಬೆಳಗಿಸಲಾಗುತ್ತದೆ. ಭಾನುವಾರ ಸಂಜೆ ನೂರಕ್ಕೂ ಹೆಚ್ಚು ಮಹಿಳೆಯರು ಸೇರಿ ಸುಮಾರು 5 ಸಾವಿರಕ್ಕೂ ಅಧಿಕ ಕಣಕದ ಹಣತೆ ತಯಾರಿಸಿ ಎಣ್ಣೆಯಲ್ಲಿ ಕರಿದಿದ್ದು, ಇದಕ್ಕಾಗಿ 20 ಕೆಜಿ ಎಣ್ಣೆ, 75 ಕೆಜಿ ಗೋದಿ ಹಿಟ್ಟು ಬಳಕೆ ಮಾಡಿದ್ದಾರೆ.

2 ಮಂಡಲ ನಿರ್ಮಾಣ: ಇಲ್ಲಿನ ಮೂರುಸಾವಿರ ಮಠದ ಮುಖ್ಯರಸ್ತೆಯಲ್ಲಿ 2 ಮಂಡಲ ನಿರ್ಮಾಣ ಮಾಡಿ ಒಂದೊಂದು ಮಂಡಲದಲ್ಲಿ 1008 ಹಣತೆಗಳನ್ನಿಟ್ಟು ತುಪ್ಪದಿಂದ ಬೆಳಗಿಸಲಾಗುತ್ತದೆ. ಇದಕ್ಕಾಗಿ 50ಕೆಜಿ ತುಪ್ಪ ಬಳಕೆ ಮಾಡಲಾಗುತ್ತಿದೆ. ನಂತರ ಉಳಿದ ಕಣಕದ ದೀಪಗಳನ್ನು ಓಣಿಯಲ್ಲಿರುವ ಪ್ರತಿಯೊಂದು ಮನೆಯ ಮುಂದೆ ತುಪ್ಪದಿಂದಲೇ ಬೆಳಗಿಸಲು ಸಿದ್ಧತೆ ಕೈಗೊಳ್ಳಲಾಗಿದೆ.

ಒಂದು ವಾರದಿಂದ ಸಿದ್ಧತೆ: ಕಣಕದಿಂದ ಹಣತೆ ತಯಾರಿಸಿ ತುಪ್ಪ ಹಾಕಿ ಬೆಳಗಿಸುವ ಸಂಕಲ್ಪ ಮಾಡಿದೆವು. ಈ ಕಾರ್ಯಕ್ಕೆ ಕಳೆದ ಒಂದು ವಾರದಿಂದ ಸಿದ್ಧತೆ ಮಾಡಿಕೊಂಡಿದ್ದೇವೆ. ಅದರಂತೆ ಓಣಿಯ ಹಿರಿಯರಾದಿಯಾಗಿ ಎಲ್ಲರೂ ತೀರ್ಮಾನಿಸಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಮುಖಂಡ ಮಂಜುನಾಥ ನೂಲ್ವಿ ಹೇಳಿದರು.

ಸಂಜೆ 6ಕ್ಕೆ ದೀಪಬೆಳಗಿಸಲು ಸಿದ್ಧತೆ: ಜ. 22ರ ಬೆಳಗ್ಗೆ ಇಡೀ ಓಣಿಯನ್ನು ಕಸಗುಡಿಸಿ ನೀರು ಹಾಕಿ ಶುಚಿಗೊಳಿಸಲಾಗುವುದು. ಮನೆ ಮುಂದೆ ಶ್ರೀರಾಮ, ಲಕ್ಷ್ಮಣ, ಸೀತೆ, ಆಂಜನೇಯ ಹೀಗೆ ಬಗೆಬಗೆಯ ಬಣ್ಣಬಣ್ಣದ ರಂಗೋಲಿ ಹಾಕಲು ಓಣಿಯ ಎಲ್ಲ ಮಹಿಳೆಯರಿಗೆ ಸೂಚನೆ ನೀಡಲಾಗಿದೆ. ಸಂಜೆ 6ಗಂಟೆಗೆ 2 ಮಂಡಲಗಳನ್ನು ಮಾಡಿ ತುಪ್ಪದ ದೀಪ ಹಚ್ಚುವ ಸಂಕಲ್ಪ ಮಾಡಿದ್ದೇವೆ. ಅಲ್ಲದೇ ಮನೆಯ ಮುಂದೆಯೂ ತುಪ್ಪದ ದೀಪ ಬೆಳಗಿಸಲು ಸೂಚನೆ ನೀಡಿದ್ದೇವೆ. ಈ ಶ್ರೀರಾಮೋತ್ಸವವನ್ನು ಹಬ್ಬದಂತೆ ಆಚರಿಸಲು ಸಿದ್ಧತೆ ನಡೆಸಿರುವುದಾಗಿ ಓಣಿಯ ಹಿರಿಯರು ಕನ್ನಡಪ್ರಭಕ್ಕೆ ತಿಳಿಸಿದರು.

Share this article