ಸಿಟೀಸ್‌- 2.0 ಸ್ಪರ್ಧೆಯಲ್ಲಿ ಭಾಗವಹಿಸಲು ಸಿದ್ಧತೆ

KannadaprabhaNewsNetwork |  
Published : Jan 05, 2024, 01:45 AM IST
ಸ್ಮಾರ್ಟ ಸಿಟಿ | Kannada Prabha

ಸಾರಾಂಶ

ಏನಿದು ಸಿಟೀಸ್‌:ಸಿಐಟಿಐಐಎಸ್‌- 2.0 (City Investments to Innovate, Integrate and Sustain 2.0) ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯು ಫ್ರೆಂಚ್‌ ಡೆವಲಪ್‌ಮೆಂಟ್‌ ಏಜೆನ್ಸಿ, ಯುರೋಪಿಯನ್‌ ಯೂನಿಯನ್‌ ಇವುಗಳ ಸಹಯೋಗದಲ್ಲಿ ಈ ಯೋಜನೆ ಜಾರಿಗೊಳಿಸಲಿದೆ.

ಶಿವಾನಂದ ಗೊಂಬಿ ಹುಬ್ಬಳ್ಳಿ

ಈ ಹಿಂದೆ ಕೇಂದ್ರ ಸರ್ಕಾರದ ಸಿಟೀಸ್‌-1.0 ಸ್ಪರ್ಧೆಯಲ್ಲಿ ಜಯ ಗಳಿಸಿ ದೇಶದ ಮೊದಲ ಗ್ರೀನ್‌ ಕಾರಿಡಾರ್‌ ನಿರ್ಮಿಸಲು ಅನುದಾನ ಪಡೆದಿದ್ದ, ಸ್ಮಾರ್ಟ್‌ಸಿಟಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ಇದೀಗ ಸಿಟೀಸ್‌- 2.0 ಸ್ಪರ್ಧೆಯಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿದೆ.

ಈ ಸಲ ಘನತ್ಯಾಜ್ಯ ನಿರ್ವಹಣೆ (ಸಾಲಿಡ್‌ ವೇಸ್ಟ್‌ ಮ್ಯಾನೇಜ್‌ಮೇಂಟ್‌) ವಿಷಯವಾಗಿ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಆಯ್ಕೆಯಾದರೆ ₹135 ಕೋಟಿ ಕೇಂದ್ರ ಸರ್ಕಾರದ ಅನುದಾನ ಸಿಗಲಿದೆ. ಯೋಜನೆ ಸಿದ್ಧಪಡಿಸುವ ಕೆಲಸ ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ಜಂಟಿಯಾಗಿ ಮಾಡುತ್ತಿವೆ.

ಏನಿದು ಸಿಟೀಸ್‌: ಸಿಐಟಿಐಐಎಸ್‌- 2.0 (City Investments to Innovate, Integrate and Sustain 2.0) ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯು ಫ್ರೆಂಚ್‌ ಡೆವಲಪ್‌ಮೆಂಟ್‌ ಏಜೆನ್ಸಿ, ಯುರೋಪಿಯನ್‌ ಯೂನಿಯನ್‌ ಇವುಗಳ ಸಹಯೋಗದಲ್ಲಿ ಈ ಯೋಜನೆ ಜಾರಿಗೊಳಿಸಲಿದೆ.

ದೇಶದ ಸ್ಮಾರ್ಟ್‌ ಸಿಟಿಗೆ ಆಯ್ಕೆಯಾಗಿರುವ ನಗರಗಳ ಪೈಕಿ 18 ನಗರಗಳಲ್ಲಿ ಮುಂದಿನ ನಾಲ್ಕು ವರ್ಷಗಳ ಕಾಲ ಈ ಯೋಜನೆ ನಡೆಯಲಿದೆ. ಈ ಸಲ ಘನತ್ಯಾಜ್ಯ ನಿರ್ವಹಣೆ ಕುರಿತು ಈ ಸ್ಪರ್ಧೆ ಆಯೋಜಿಸಿದೆ.

ಏನ್ಮಾಡಬೇಕಿದೆ?: ಈ ಯೋಜನೆಯಡಿ ಲಭಿಸುವ ₹135 ಕೋಟಿ ಅನುದಾನದಲ್ಲಿ ಶೇ.20ರಷ್ಟು ಮಹಾನಗರ ಪಾಲಿಕೆ ಭರಿಸಬೇಕಾಗುತ್ತದೆ. ಅದಕ್ಕೆ ಸಾಮಾನ್ಯಸಭೆಯೂ ಶೇ. 20ರಷ್ಟು ಅನುದಾನ ನೀಡಲು ಒಪ್ಪಿಗೆ ಕೂಡ ನೀಡಿದೆ. ಘನ ತ್ಯಾಜ್ಯ ನಿರ್ವಹಣೆ ಕುರಿತು ಸಮಗ್ರ ವರದಿ ತಯಾರಿಸಬೇಕು. ಯಾವ ರೀತಿ ನಿರ್ವಹಿಸಲಾಗುತ್ತಿದೆ. ಘನ ತ್ಯಾಜ್ಯ ನಿರ್ವಹಣೆಯಿಂದ ಪರಿಸರಕ್ಕೆ ಹಾನಿಯಾಗದಂತೆ, ಆದಾಯವೂ ಬರುವಂತೆ ಯಾವ ರೀತಿ ಮಾಡಬಹುದು. ಏನು ಮಾಡಿದರೆ ಜನಸ್ನೇಹಿ ಎನಿಸಿಕೊಳ್ಳುತ್ತದೆ ಎಂಬುದರ ಕುರಿತು ಯೋಜನಾ ವರದಿ ಸಿದ್ಧಪಡಿಸಬೇಕು. ಅದನ್ನು ಜ.15ರೊಳಗೆ ಕೇಂದ್ರ ಸರ್ಕಾರ ಸೂಚಿಸಿರುವ ಆನ್‌ಲೈನ್‌ ಪೋರ್ಟಲ್‌ನಲ್ಲಿ ವರದಿ ಸಲ್ಲಿಸಬೇಕು.

ಆ ಬಳಿಕ ಕೇಂದ್ರ ಸರ್ಕಾರದ ಪರಿಶೀಲನಾ ತಂಡವೂ ಎಲ್ಲ ಯೋಜನೆಗಳನ್ನು ಪರಿಶೀಲಿಸಿ ದೇಶದ 18 ನಗರಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಆ ಬಳಿಕ ಅನುದಾನ ಬಿಡುಗಡೆ ಮಾಡುತ್ತದೆ. ಯೋಜನೆ ಸಾಕಾರಗೊಳಿಸಲು ಸಮಯ ನಿಗದಿಪಡಿಸುತ್ತದೆ. ಆ ಸಮಯದಲ್ಲಿ ಯೋಜನೆ ಪೂರ್ಣಗೊಳಿಸಬೇಕು. ಜತೆಗೆ ಕೇಂದ್ರ ತಂಡವೂ ಆಗಾಗ ಆಗಮಿಸಿ ಯೋಜನೆಯ ಪ್ರಗತಿ ಪರಿಶೀಲನೆ ಮಾಡುತ್ತದೆ.

ನಾಲ್ಕು ವರ್ಷದ ಹಿಂದೆ ಗ್ರೀನ್‌ ಕಾರಿಡಾರ್‌ಗೆ ಇದೇ ಯೋಜನೆಯಲ್ಲಿ ಸ್ಮಾರ್ಟ್‌ಸಿಟಿ ಅರ್ಜಿ ಸಲ್ಲಿಸಿತ್ತು. ಅದರಲ್ಲಿ ಆಯ್ಕೆಯಾಗಿತ್ತು. ಹೀಗಾಗಿಯೇ ದೇಶದ ಮೊದಲ ಗ್ರೀನ್‌ ಕಾರಿಡಾರ್‌ ಯೋಜನೆ ಹುಬ್ಬಳ್ಳಿಯಲ್ಲಿ ಆಗಲು ಸಾಧ್ಯವಾಯಿತು. ಅದರಂತೆ ಇದೀಗ ಸಾಲಿಡ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ನಲ್ಲೂ ಕರೆದಿರುವ ಸ್ಪರ್ಧೆಗೆ ತಕ್ಕಂತೆ ಯೋಜನೆ ಸಿದ್ಧಪಡಿಸಿ ಸಲ್ಲಿಸಿದರೆ ಆಯ್ಕೆಯಾದರೆ ತ್ಯಾಜ್ಯ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದುಕೊಂಡು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದರಲ್ಲೂ ಯಶಸ್ವಿಯಾಗಿ ಕೇಂದ್ರದ ಅನುದಾನ ಸಿಗಲೆಂಬುದು ನಾಗರಿಕರ ಆಶಯ.

ಘನತ್ಯಾಜ್ಯ ನಿರ್ವಹಣೆಗೆ ₹135 ಕೋಟಿ ಅನುದಾನದ ಯೋಜನೆ ಸಿದ್ಧಪಡಿಸಿದೆ. ಅದಕ್ಕೆ ನಾವು ಶೇ. 20ರಷ್ಟು ಅನುದಾನ ಭರಿಸಲು ಒಪ್ಪಿಕೊಂಡು ನಮ್ಮ ಯೋಜನೆಯನ್ನು ಅಲ್ಲಿಗೆ ಸಬ್ಮಿಟ್‌ ಮಾಡಬೇಕು. ಅದರಲ್ಲಿ ಸೆಲೆಕ್ಟ್‌ ಆದರೆ ಅನುದಾನ ದೊರೆಯಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.

ಸಿಟೀಸ್‌- 2.0 ಯೋಜನೆಗೆ ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಿಂದೆ ಇದೇ ಮಾದರಿಯ ಸ್ಪರ್ಧೆಯಲ್ಲಿ ಭಾಗವಹಿಸಿ ಗ್ರೀನ್‌ ಕಾರಿಡಾರ್‌ಗೆ ಅನುದಾನ ಲಭಿಸಿತು. ಇದೀಗ ಘನತ್ಯಾಜ್ಯ ನಿರ್ವಹಣೆಗೆ ನಮ್ಮ ಪ್ರೊಜೆಕ್ಟ್‌ ಸಿದ್ಧಪಡಿಸಿ ಕಳುಹಿಸಬೇಕಿದೆ. ಆ ಕೆಲಸ ನಡೆದಿದೆ. ಸ್ಮಾರ್ಟ್‌ಸಿಟಿ ಡಿಜಿಎಂ ಚನ್ನಬಸವರಾಜು ತಿಳಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ