ಬಂಟ್ವಾಳ ತಾಲೂಕು ಬರಿಮಾರ್ ಸಮೀಪ ಕಲ್ಲೆಟ್ಟಿ ದೈವಸ್ಥಾನದ ಬಳಿ ಬುಧವಾರ ಶಾಲಾ ವಾಹನದ ಮೇಲೆ ಮರ ಬಿದ್ದು ಪುಟ್ಟ ಬಾಲಕಿ ಮೃತಪಟ್ಟ ದುರ್ಘಟನೆಯ ಬೆನ್ನಲ್ಲೇ, ಮತ್ತೊಂದು ಅನಾಹುತವನ್ನು ತನ್ನ ಸಮಯಪ್ರಜ್ಞೆಯಿಂದ ತಪ್ಪಿಸಿದ ವಿದ್ಯಾರ್ಥಿನಿಯ ಸಾಹಸ ಇದೀಗ ಬೆಳಕಿಗೆ ಬಂದಿದೆ.
ಬಂಟ್ವಾಳ: ಬಂಟ್ವಾಳ ತಾಲೂಕು ಬರಿಮಾರ್ ಸಮೀಪ ಕಲ್ಲೆಟ್ಟಿ ದೈವಸ್ಥಾನದ ಬಳಿ ಬುಧವಾರ ಶಾಲಾ ವಾಹನದ ಮೇಲೆ ಮರ ಬಿದ್ದು ಪುಟ್ಟ ಬಾಲಕಿ ಮೃತಪಟ್ಟ ದುರ್ಘಟನೆಯ ಬೆನ್ನಲ್ಲೇ, ಮತ್ತೊಂದು ಅನಾಹುತವನ್ನು ತನ್ನ ಸಮಯಪ್ರಜ್ಞೆಯಿಂದ ತಪ್ಪಿಸಿದ ವಿದ್ಯಾರ್ಥಿನಿಯ ಸಾಹಸ ಇದೀಗ ಬೆಳಕಿಗೆ ಬಂದಿದೆ.
ಸ್ಥಳೀಯ ನಿವಾಸಿ ಮಂಜುಳಾ ಅವರ ಪುತ್ರಿ ಶ್ರೇಯಾ ಈ ಸಾಹಸ ಮೆರೆದ ವಿದ್ಯಾರ್ಥಿನಿ. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ 9ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ತನ್ನ ಅಕ್ಕಪಕ್ಕದ ಮಕ್ಕಳೊಂದಿಗೆ ಮರ ಬಿದ್ದ ಅದೇ ಶಾಲಾ ಬಸ್‌ನಿಂದ ಇಳಿದಿದ್ದಳು. ಮಕ್ಕಳನ್ನು ಅಲ್ಲಿ ಬಿಟ್ಟು ಬಸ್ ಮುಂದೆ ಸಾಗಿದ ಬಳಿಕ ಶ್ರೇಯಾ ಜೊತೆಗೆ ಸ್ಥಳೀಯ ಕರುಣಾಕರ ಅವರ ಪುತ್ರರಾದ ಲಿಖಿತ್ ಎಂ.ಕೆ. ಹಾಗೂ ಆತನ ಅಣ್ಣ ಕೂಡ ಇದ್ದರು.ಈ ವೇಳೆ ಲಿಖಿತ್ ತನ್ನ ಶಾಲಾ ಬ್ಯಾಗನ್ನು ಅಣ್ಣನಿಗೆ ನೀಡಿ ಮನೆಯತ್ತ ಓಡಲು ಮುಂದಾಗಿದ್ದ. ಅಷ್ಟರಲ್ಲಿ ಭಾರೀ ಶಬ್ದ ಕೇಳಿಬಂದಿದ್ದು, ಸಮೀಪದ ವಿದ್ಯುತ್ ಕಂಬ ಅಪಾಯಕಾರಿಯಾಗಿ ಅಲುಗಾಡುತ್ತಿರುವುದನ್ನು ಗಮನಿಸಿದ ಶ್ರೇಯಾ ಕ್ಷಣಾರ್ಧದಲ್ಲಿ ಓಡಿ ಹೋಗಿ ಲಿಖಿತ್‌ನ ಕೈ ಹಿಡಿದು ಹಿಂದೆ ಎಳೆದಿದ್ದಾಳೆ. ಕೆಲವೇ ಕ್ಷಣಗಳಲ್ಲಿ ಲಿಖಿತ್ ನಿಂತಿದ್ದ ಅದೇ ಸ್ಥಳಕ್ಕೆ ವಿದ್ಯುತ್ ಕಂಬ ಧರೆಗುರುಳಿದೆ.ಶ್ರೇಯಾಳ ಸಮಯೋಚಿತ ನಿರ್ಧಾರದಿಂದ ಮತ್ತೊಂದು ಜೀವಹಾನಿ ತಪ್ಪಿದೆಯೆಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ತನ್ನ ಮಗನ ಪ್ರಾಣ ಉಳಿಸಿದ ಶ್ರೇಯಾಳ ಧೈರ್ಯ ಮತ್ತು ಸಮಯಪ್ರಜ್ಞೆಗೆ ಲಿಖಿತ್‌ನ ತಂದೆ ಕರುಣಾಕರ ಕೃತಜ್ಞತೆ ಸಲ್ಲಿಸಿದ್ದು, ಸಾರ್ವಜನಿಕರಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅಪಾಯದ ಕ್ಷಣದಲ್ಲಿ ಧೈರ್ಯದಿಂದ ಯೋಚಿಸಿ ತಕ್ಷಣ ಕ್ರಮ ಕೈಗೊಂಡ ಶ್ರೇಯಾಳ ಸಮಯಪ್ರಜ್ಞೆ ಎಲ್ಲರಿಗೂ ಮಾದರಿಯಾಗಿದೆ.
ಕಂಬ ಅಲುಗಾಡುವುದನ್ನು ನೋಡಿದೆ. ತಕ್ಷಣ ಆ ಕಡೆ ಓಡಿ ಹೋಗುತ್ತಿದ್ದ ಲಿಖಿತ್‌ನ ಕೈ ಹಿಡಿದು ಎಳೆದೆ. ಕ್ಷಣಮಾತ್ರದಲ್ಲೇ ಅವನು ನಿಂತಿದ್ದ ಸ್ಥಳಕ್ಕೆ ವಿದ್ಯುತ್ ಕಂಬ ಬಿತ್ತು. -ಶ್ರೇಯಾ, ಸಮಯಪ್ರಜ್ಞೆ ಮೆರೆದ ಬಾಲಕಿ.
ವಿದ್ಯಾರ್ಥಿನಿಯರು ಚೇತರಿಕೆ: ತಾಲೂಕಿನ ಬರಿಮಾರಿನಲ್ಲಿ ಬುಧವಾರ ಶಾಲಾ ಬಸ್ ಮೇಲೆ ಬೃಹತ್ ಗಾತ್ರದ ಮರ ಬುಡ ಸಮೇತ ಉರುಳಿ ಬಿದ್ದು, ಬಾಲಕಿ ಮೃತಪಟ್ಟ ಘಟನೆಯಲ್ಲಿ ಗಾಯಗೊಂಡಿದ್ದ ಉಳಿದ ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ. ಹಲವುಮಕ್ಕಳಿಗೆ ಗಾಯಗಳಾಗಿದ್ದು ಇಬ್ಬರ ವಿದ್ಯಾರ್ಥಿನಿಯರಿಗೆ ತೀವ್ರತರದ ಗಾಯಗಳಾಗಿತ್ತು. ಈ ಪೈಕಿ ಪೆರಾಜೆ ಸಾದಿಕುಕ್ಕು ನಿವಾಸಿ ಗಣೇಶ್ ಗೌಡ ಅವರ ಪುತ್ರಿ ಅನ್ವಿ ಅವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನೋರ್ವ ಗಾಯಾಳು ಪೆರ್ನೆ ನಿವಾಸಿ ಕ್ಷಿತಿ ರೈ ಅವರನ್ನು ಕಲ್ಲಡ್ಕದ ಪುಷ್ಪರಾಜ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುಣಮುಖಹೊಂದಿದ್ದಾಳೆ ಎಂದು ತಿಳಿದುಬಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.