ಡಂಬಳ: ಉತ್ತರ ಕರ್ನಾಟಕ ಸಹ್ಯಾದ್ರಿ ಎಂದು ಪ್ರಖ್ಯಾತಿ ಪಡೆದಿರುವ ಕಪ್ಪತ್ತಗುಡ್ಡದ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ ಜಗದೀಶ ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನವನ್ನು ಕಪ್ಪತ್ತಗುಡ್ಡದ ಸಂರಕ್ಷಣೆಗೆ ವಿನಿಯೋಗಿಸುವುದು ಅವಶ್ಯಕತೆ ಇದೆ. ಕಪ್ಪತ್ತಗುಡ್ಡ ಉಳಿಸಿ ಬೆಳೆಸುವುದರೊಂದಿಗೆ ಈ ಭಾಗದ ಜನರಿಗೆ ಸಮೃದ್ಧ ಮಳೆ, ಬೆಳೆ ಹಾಗೂ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಿದೆ ಎಂದರು.
ಸಂವಾದ: ಕಳ್ಳಬೇಟೆ ತಡೆ, ಶಿಬಿರಗಳು, ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಅರಣ್ಯ ವೀಕ್ಷಕರೊಂದಿಗೆ ಸಂವಾದ ನಡೆಸಿದರು. ಕಾಡಿನೊಳಗೆ ನೀರಿನ ತೊಟ್ಟಿ, ಬೋರ್‌ವೆಲ್‌ಗಳ ಅಳವಡಿಕೆ ಉಪಯೋಗ ಹಾಗೂ ಹುಲ್ಲುಗಾವಲು ಪ್ರದೇಶಗಳಿಗೆ ಮಾನವ- ಪ್ರಾಣಿ ಸಂಘರ್ಷ ತಡೆಗೆ ನಿರ್ಮಾಣ ಮಾಡಿರುವ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ವೀಕ್ಷಿಸಿದರು.ಜೀವವೈವಿಧ್ಯ ಅರಣ್ಯ ಅಧಿಕಾರಿ ಗೋವರ್ಧನ್ ಸಿಂಗ್ ಮಾತನಾಡಿ, ಕಪ್ಪತ್ತಗುಡ್ಡದಲ್ಲಿ 23 ಪ್ರಭೇದದ ಸಸ್ತನಿಗಳು, 222 ಬಗೆಯ ಹಕ್ಕಿಗಳು, 10 ಜಾತಿಯ ಸರೀಸೃಪಗಳು, 20 ಬಗೆಯ ಚಿಟ್ಟೆಗಳು, 500 ಔಷಧೀಯ ಗಿಡಮೂಲಿಕೆಗಳು ಪ್ರಾಣಿ- ಪಕ್ಷಿಗಳು ಇಲ್ಲಿ ಬದುಕು ಕಟ್ಟಿಕೊಂಡಿದ್ದು, ಇವುಗಳನ್ನು ಉಳಿಸುವುದು ಅರಣ್ಯ ಇಲಾಖೆಗೆ ಅಷ್ಟೇ ಅಲ್ಲದೆ ಪ್ರತಿಯೊಬ್ಬ ನಾಗರಿಕರ ಗುರುತರ ಜವಾಬ್ದಾರಿ ಎಂದರು.
ಗದಗ ಡಿಎಫ್‌ಒ ಸಂತೋಷ ಕೆಂಚಪ್ಪನವರ, ಗದಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್) ಮಾಂತೇಶ ಪೊಲೀಸಪಾಟೀಲ ಮಾತನಾಡಿ, ಕಳ್ಳಬೇಟೆ ತಡೆ, ಅರಣ್ಯ ನಾಶ ತಡೆಯುವ ಕ್ರಮಗಳು ಹಾಗೂ ಮಾನವ- ಪ್ರಾಣಿ ಸಂಘರ್ಷ ತಡೆಗೆ ಇಲಾಖೆ ಗಂಭೀರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ಈ ಸಂದರ್ಭದಲ್ಲಿ ಆರ್‌ಎಫ್‌ಒ ಮಂಜುನಾಥ ಮೇಗಲಮನಿ, ರಾಜ್ಯ ಡಿಎಸ್‌ಎಸ್ ಅಲ್ಪಸಂಖ್ಯಾತರ ರಾಜ್ಯಾಧ್ಯಕ್ಷ ಜಬಿವುಲ್ಲಾ ಎ.ಆರ್., ಮಾರುತಿ ಕಾಳಪ್ಪನವರ, ಮಹಾಂತಪ್ಪ ಮುಷೆಪ್ಪನವರ, ಹಾಲಪ್ಪ ಭಂಡಾರಿ, ಗ್ರಾಪಂ ಮಾಜಿ ಸದಸ್ಯ ಮಾರ್ತಾಂಡಪ್ಪ ಎಚ್. ಸೇರಿದಂತೆ ಕಪ್ಪತ್ತಗುಡ್ಡದ ಸಿಬ್ಬಂದಿ ಇದ್ದರು.