ಕನ್ನಡಪ್ರಭ ವಾರ್ತೆ ಅಮೀನಗಡ
ಸಾರ್ವಜನಿಕ ಸಂಪನ್ಮೂಲಗಳಾದ ಸಾರಿಗೆ, ಅಂಚೆ ಕಚೇರಿ, ಗ್ರಂಥಾಲಯ, ಆಸ್ಪತ್ರೆ, ಪೊಲೀಸ್ ಠಾಣೆ, ಕುಡಿವ ನೀರು ಸೇರಿ ಇತರೆ ಸಾರ್ವಜನಿಕ ಆಸ್ತಿಯನ್ನು ಪ್ರತಿಯೊಬ್ಬರು ರಕ್ಷಣೆ ಮಾಡಬೇಕು ಎಂದು ಶ್ರೀ ರಾಮಯ್ಯಸ್ವಾಮಿ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು.ಸಮೀಪದ ಸೂಳೆಬಾವಿ ಗ್ರಾಮದಲ್ಲಿ ರಾಮಯ್ಯಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಸಾರ್ವಜನಿಕ ಸಂಪನ್ಮೂಲಗಳ ಸಂರಕ್ಷಣೆಯ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ಮಕ್ಕಳಲ್ಲಿ ದೇಶಾಭಿಮಾನ ಭೂಮಿ ಹಾಗೂ ನೀರಿನ ಸಂಪತ್ತು ಸದ್ಬಳಕೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕು. ನಮ್ಮ ಸಂಸ್ಥೆ ಹಣಕ್ಕಾಗಿ ಶಿಕ್ಷಣ ನೀಡುವುದಿಲ್ಲ ಮಕ್ಕಳಲ್ಲಿ ಸಂಸ್ಕೃತಿ, ಕಾರ್ಯಾಂಗ, ನ್ಯಾಯಾಂಗ ತಿಳಿಸುವುದರ ಜೊತೆಗೆ ಉತ್ತಮ ಗುಣಮಟ್ಟ ಶಿಕ್ಷಣ ನೀಡುತ್ತೇವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕ್ಲಿಲ್ಲೇದಾರ ಮಾತನಾಡಿ, ರಾಮಯ್ಯಸ್ವಾಮಿ ಶಿಕ್ಷಣ ಸಂಸ್ಥೆ ಪ್ರತಿ ವರ್ಷವೂ ವಿಶೇಷವಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಹೆಮ್ಮೆಯ ವಿಷಯ. ಶಿಕ್ಷಣ ಜೊತೆಗೆ ಸಾರ್ವಜನಿಕ ಸಂಪನ್ಮೂಲಗಳ ತಿಳುವಳಿಕೆ ಹಾಗೂ ಅವುಗಳ ಸಂರಕ್ಷಣೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಿದೆ. ಬದಲಾದ ಕಾಲಮಾನದಲ್ಲಿ ವಿಶೇಷವಾದ ವಸ್ತುಗಳ ಪ್ರದರ್ಶನ ಮಾಡುವುದರಿಂದ ತುಂಬಾ ಸಹಾಯವಾಗುತ್ತದೆ ಎಂದು ಹೇಳಿದರು. ಸಂಸ್ಥೆ ಗೌರವ ಅಧ್ಯಕ್ಷ ಕೃಷ್ಣಾ ರಾಮದುರ್ಗ ಹಾಗೂ ಮುಖ್ಯ ಅತಿಥಿ ಪಿಎಸ್‌ಐ ಜ್ಯೋತಿ ವಾಲಿಕಾರ ಮಾತನಾಡಿದರು.ಗ್ರಾಪಂ ಅಧ್ಯಕ್ಷ ಪಿಡ್ಡಪ್ಪ ಕುರಿ, ಉಪಾಧ್ಯಕ್ಷ ಯಮನಪ್ಪ ಶಿಲ್ಪಿ, ಗಾಯತ್ರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಹೇಮಂತ ದುತ್ತರಗಿ, ನ್ಯಾಯವಾದಿ ರಂಜಾನ್ ನದಾಫ, ಬಸವರಾಜ ರಾಮದುರ್ಗ, ಹೆಸ್ಕಾಂ ಅಧಿಕಾರಿ ಗೋಪಾಲ ಪೂಜಾರಿ, ಎಸ್.ಎಸ್.ಗೌಡರ, ಎಸ್.ಎಸ್.ಹೊಸಮನಿ, ಪ್ರಾಚಾರ್ಯ ಎ.ಸಿ.ಅತ್ತಾರ ಸೇರಿದಂತೆ ಶಾಲೆಯ ಶಿಕ್ಷಕರು ಮಕ್ಕಳು ಪಾಲಕರು ಇದ್ದರು.