ನಮ್ಮ ನಡೆ ಐತಿಹಾಸಿಕ ಸ್ಮಾರಕಗಳ ಕಡೆ ಎಂಬ ವಿಶೇಷ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಪ್ರಾಚಾರ್ಯ
ಐತಿಹಾಸಿಕ ಸ್ಮಾರಕಗಳು ಇತಿಹಾಸದ ಜೀವಂತ ಸಾಕ್ಷಿಗಳಾಗಿದ್ದು, ಅವುಗಳ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪ್ರಾಚಾರ್ಯ ಡಾ. ಆರ್.ಎಂ. ಕಲ್ಲನಗೌಡ್ರ ಹೇಳಿದರು.
ಪಟ್ಟಣದಲ್ಲಿ ಆರ್.ಎನ್. ದೇಶಪಾಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ವತಿಯಿಂದ ಪ್ರಥಮ ವರ್ಷದ ಬಿಎ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ನಮ್ಮ ನಡೆ ಐತಿಹಾಸಿಕ ಸ್ಮಾರಕಗಳ ಕಡೆ ಎಂಬ ವಿಶೇಷ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಪಠ್ಯಪುಸ್ತಕಗಳಲ್ಲಿನ ಇತಿಹಾಸದ ಜೊತೆಗೆ ಸ್ಥಳೀಯ ಐತಿಹಾಸಿಕ ಸ್ಮಾರಕಗಳನ್ನು ನೇರವಾಗಿ ವೀಕ್ಷಿಸುವುದರಿಂದ ಇತಿಹಾಸದ ಅರಿವು ಮತ್ತಷ್ಟು ಗಾಢವಾಗುತ್ತದೆ ಎಂದರು.
ಈ ವೇಳೆ ಇತಿಹಾಸ ವಿಭಾಗದ ಮುಖ್ಯಸ್ಥ ಮಾರುತಿ, ಮುಳಗುಂದದ ಐತಿಹಾಸಿಕ ಹಿನ್ನೆಲೆ, ಪ್ರಾಚೀನತೆ, ವಿವಿಧ ರಾಜಮನೆತನಗಳ ಆಳ್ವಿಕೆ ಹಾಗೂ ಸ್ಥಳೀಯ ಸ್ಮಾರಕಗಳ ಐತಿಹಾಸಿಕ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅಲ್ಲದೆ, ಮುಳಗುಂದದ ಇತಿಹಾಸವನ್ನು ಶಾಸನಗಳು, ವಾಸ್ತುಶಿಲ್ಪ ಮತ್ತು ಪುರಾತತ್ವ ಅವಶೇಷಗಳ ಮೂಲಕ ಅಧ್ಯಯನ ಮಾಡುವ ಮಹತ್ವವನ್ನು ವಿವರಿಸಿದರು.
ದೈಹಿಕ ಶಿಕ್ಷಣ ನಿರ್ದೇಶಕ ವಿನಾಯಕ ಸಿರಬಡಿಗಿ ಸೇರಿ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.