ದೇಶದ ಸ್ವಾತಂತ್ರ್ಯ ಉಳಿಸಿಕೊಳ್ಳುವುದು ಆದ್ಯ ಕರ್ತವ್ಯ: ಕಿರಣ್ ಜಿ ಗೌರಯ್ಯ

KannadaprabhaNewsNetwork |  
Published : Aug 16, 2025, 12:03 AM IST
ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಅವರು ಮಾತನಾಡುತ್ತಿರುವುದು | Kannada Prabha

ಸಾರಾಂಶ

ದೇಶದ ಸ್ವಾತಂತ್ರ್ಯವನ್ನು ದುರುಪಯೋಗಗೊಳಿಸದೆ ಉಳಿಸಿಕೊಳ್ಳುವುದು ಆದ್ಯ ಕರ್ತವ್ಯವಾಗಿದೆ ಎಂದು ಗಣ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ ಹೋರಾಟದ ಮೂಲಕ ಗಳಿಸಿದ ದೇಶದ ಸ್ವಾತಂತ್ರ್ಯವನ್ನು ದುರುಪಯೋಗಗೊಳಿಸದೆ ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ತಾಲೂಕು ತಹಸೀಲ್ದಾರರು ಹಾಗೂ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು ಆಗಿರುವ ಕಿರಣ್ ಜಿ ಗೌರಯ್ಯ ಕರೆ ನೀಡಿದ್ದಾರೆ. ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಶ್ರಯದಲ್ಲಿ ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿ ಮಾತನಾಡಿದ ಅವರು, ಯುವ ಪೀಳಿಗೆಯಲ್ಲಿ ರಾಷ್ಟ್ರೀಯತೆ ದೇಶಭಕ್ತಿ ಭಾವನೆ ಮೂಡಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಹತ್ವದ ಕಾರ್ಯಕ್ರಮವಾಗಿದೆ ಎಂದರು.ಹಲವು ದಶಕಗಳ ಕಾಲ ದಿಟ್ಟತನದ ಹೋರಾಟ, ಬಲಿದಾನ ಮೂಲಕ ಲಭಿಸಿದ ಸ್ವಾತಂತ್ರ್ಯ ನಂತರ ದೇಶದ ಅಭಿವೃದ್ಧಿ ಬೆಳವಣಿಗೆ ಮತ್ತು ಸಾಧನೆಗಳು ವಿಶ್ವದ ಎಲ್ಲೆಡೆ ಗುರುತಿಸಿಕೊಂಡಿದೆ ಎಂದ ಅವರು ಪ್ರಸಕ್ತ ಸ್ವಾತಂತ್ರ್ಯ ದಿನ ನಾಗರಿಕರಿಗೆ ಮಹತ್ವವಾದ ಸಂಭ್ರಮದ ದಿನವಾಗಿದೆ ಎಂದು ಹೇಳಿದರು. ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ನಿವೃತ್ತ ಪ್ರಾಂಶುಪಾಲ ಡಾ.ಡಿ ದೇವರಾಜ್, ಕ್ರಿಯಾಶೀಲತೆ ಮೂಲಕ ಎಲ್ಲವನ್ನು ಸೃಷ್ಟಿಸಲು ಸಾಧ್ಯವೇ ಹೊರತು ಮಾಯೆಯಿಂದ ಅಸಾಧ್ಯ ಎಂದ ಅವರು, ಸಾಮೂಹಿಕ ಪ್ರಯತ್ನದ ಮೂಲಕ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಸ್ವಾತಂತ್ರ್ಯದ ಸ್ವೇಚ್ಛಾಚಾರ ನಡುವೆ ಯುವ ಪೀಳಿಗೆ ಮೈ ಮರೆತು ಹೋಗದಂತೆ ಎಚ್ಚರ ಅಗತ್ಯವಾಗಿದೆ, ಹಲವು ರಂಗಗಳ ನಡುವೆ ಮುನ್ನುಗ್ಗುವ ಸಂದರ್ಭ ಏಳುಬೀಳು, ವ್ಯತ್ಯಾಸ ನಿರಂತರವಾಗಿರುತ್ತದೆ. ಸಾಮಾಜಿಕ ಆರ್ಥಿಕ ಸವಾಲುಗಳನ್ನು ಎದುರಿಸುವ ಮೂಲಕ ರಾಷ್ಟ್ರೀಯ ಭದ್ರತೆ ಬಗ್ಗೆ ಚಿಂತನೆ ಅಗತ್ಯ ಎಂದರು. ದೇಶ ಸುಭಿಕ್ಷವಾಗಿ ಇರಬೇಕಾದಲ್ಲಿ ಗಡಿ ಭಾಗದ ಸೈನಿಕರ ಬಗ್ಗೆ ಮತ್ತು ಅವರ ಕುಟುಂಬದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.ಹಲವು ಸವಾಲುಗಳ ನಡುವೆ ದೇಶದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದ್ದು ಈ ಮೂಲಕ ಅಭಿವೃದ್ಧಿ ಪಥ ಕುಂಠಿತಗೊಳ್ಳುವ ಆತಂಕ ವ್ಯಕ್ತಪಡಿಸಿದರು.ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆ ಸಮಿತಿ ಅಧ್ಯಕ್ಷರಾದ ವಿ ಪಿ ಶಶಿಧರ್ ಮಾತನಾಡಿ ಸ್ವಾತಂತ್ರ್ಯ ಸಂದರ್ಭದ ತ್ಯಾಗ ಬಲಿದಾನದ ಬಗ್ಗೆ ಸ್ಮರಿಸಿ ಸ್ವಾತಂತ್ರ್ಯ ಉತ್ಸವದ ಬಗ್ಗೆ ಶುಭ ಕೋರಿದರು. ಇದೇ ಸಂದರ್ಭ ಕುಶಾಲನಗರದ ಹಿರಿಯ ಸಾಹಿತಿಗಳು ಬಾಚರಣಿಯಂಡ ಪಿ ಅಪ್ಪಣ್ಣ, ಮಾಜಿ ಸೈನಿಕರಾದ ಬಿ ಆರ್ ಪ್ರಕಾಶ್, ಕ್ರೀಡಾ ರತ್ನ ಪ್ರಶಸ್ತಿ ವಿಜೇತೆ ಬಿ ಡಿ ಲಾವಣ್ಯ, ಪೌರಕಾರ್ಮಿಕರಾದ ನಂಜುಂಡಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕುಶಾಲನಗರ ಪೊಲೀಸ್ ಇಲಾಖೆ, ಎನ್ ಸಿ ಸಿ ಶಾಲಾ ಕಾಲೇಜು ವಿದ್ಯಾರ್ಥಿಗಳ ತಂಡದಿಂದ ಆಕರ್ಷಕ ಪಥಸಂಚಲನ ಸಂಚಲನ ನಡೆಯಿತು. ಪೆರೇಡ್ ಕಮಾಂಡರ್ ಆಗಿ ದೈಹಿಕ ಶಿಕ್ಷಣ ಅಧೀಕ್ಷಕ ಡಾ. ಸದಾಶಿವ ಎಸ್ ಪಲ್ಯದ್ ಕಾರ್ಯನಿರ್ವಹಿಸಿದರು. ಕುಶಾಲನಗರ ಪುರಸಭೆ ಅಧ್ಯಕ್ಷರಾದ ಜಯಲಕ್ಷ್ಮಿ, ಉಪಾಧ್ಯಕ್ಷರಾದ ಪುಟ್ಟಲಕ್ಷ್ಮಿ, ಸದಸ್ಯರಾದ ಸುರಯ್ಯ ಬಾನು, ಪೊಲೀಸ್ ಉಪ ಅಧೀಕ್ಷಕರಾದ ಪಿ ಚಂದ್ರಶೇಖರ್, ಮುಖ್ಯಾಧಿಕಾರಿ ಟಿ ಎಸ್ ಗಿರೀಶ್, ಅರಣ್ಯಾಧಿಕಾರಿ ರಕ್ಷಿತ್ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ನಾಡಗೀತೆ ರೈತ ಗೀತೆ ಮತ್ತು ವಂದೇ ಮಾತರಂ ಗೀತೆಗಳನ್ನು ಹಾಡಲಾಯಿತು. ನಂತರ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

PREV

Recommended Stories

ಅಭಿಮಾನ್‌ ಸ್ಟುಡಿಯೋ ಬಳಿಯೇ ವಿಷ್ಣು ದರ್ಶನ ಕೇಂದ್ರ : ಕಿಚ್ಚ ಸುದೀಪ್‌ ಅವರಿಂದ ಜಾಗ ಖರೀದಿ
ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌