ಬಾಟಂ..ಒಂದು ಮರ ಹತ್ತು ಮಕ್ಕಳಿಗೆ ಸಮ

KannadaprabhaNewsNetwork | Published : Apr 23, 2025 12:34 AM

ಸಾರಾಂಶ

ಮರದ ಬೇರಿನಿಂದ ಹಿಡಿದು ಅದರ ತುತ್ತ ತುದಿಯವರೆಗೆ ಮನುಷ್ಯ ಸೇರಿದಂತೆ ಅನೇಕ ಜೀವಿಗಳು ಬದುಕುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಹತ್ತು ಬಾವಿಗಳು ಒಂದು ಕೆರೆಗೆ ಸಮ. ಹತ್ತು ಕೆರೆಗಳು ಒಂದು ಸರೋವರಕ್ಕೆ ಸಮ. ಹತ್ತು ಸರೋವರಗಳು ಒಂದು ಮಗುವಿಗೆ ಸಮ. ಒಂದು ಮರ ಹತ್ತು ಮಕ್ಕಳಿಗೆ ಸಮ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷ ಡಾ.ಟಿ.ಎಸ್. ಹರ್ಷ ತಿಳಿಸಿದರು.ನಗರದ ಎಸ್ಪಿ ಕಚೇರಿ ಬಳಿ ಪರಿಸರಕ್ಕಾಗಿ ನಾವು, ಪರಿಸರ ಬಳಗವು ವಿಶ್ವ ಭೂ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಮರವಿಲ್ಲದೆ ನರನಿರಬಲ್ಲನೇ? ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಮಕ್ಕಳನ್ನು ಹೇಗೆ ಪಾಲನೆ ಮಾಡುತ್ತೇವೋ ಹಾಗೆಯೇ ಪರಿಸರವನ್ನು ಪಾಲನೆ ಮಾಡಬೇಕು. ಆದರೆ, ಇದನ್ನು ಯಾರು ಪಾಲಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ವಿಷಾದಿಸಿದರು.ಮರದ ಬೇರಿನಿಂದ ಹಿಡಿದು ಅದರ ತುತ್ತ ತುದಿಯವರೆಗೆ ಮನುಷ್ಯ ಸೇರಿದಂತೆ ಅನೇಕ ಜೀವಿಗಳು ಬದುಕುತ್ತಿದೆ. ಹೀಗಾಗಿ ನಮಗೆ ಪ್ರತಿಯೊಂದು ವೃಕ್ಷವೂ ಕಲ್ಪವೃಕ್ಷವಿದ್ದಂತೆ. ಮರದ ಯಾವುದೇ ಭಾಗವೂ ಅನುಪಯುಕ್ತವಾಗುವುದಿಲ್ಲ. ಇಂದು ಹವಾಮಾನವೇ ಬದಲಾಗಿದೆ. ಸರಿಯಾಗಿ ಮಳೆ ಬರುತ್ತಿಲ್ಲ. ಕಾರಣ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಎಂದು ಅವರು ಹೇಳಿದರು.ಪ್ರಕೃತಿಯ ಮತ್ತೊಂದು ಮುಖ್ಯವಾದ ಸಂಪನ್ಮೂಲ ಎಂದರೆ ಸೂಕ್ಷ್ಮಾಣು ಜೀವಿಗಳು. ಯಾವುದೇ ಜೀವಿ ಸತ್ತಾಗ ಅವುಗಳನ್ನು ಕೊಳೆಯುವಂತೆ ಮಾಡಿ ಅವುಗಳನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಮರಕ್ಕೆ ಬೇಕಾದಂತಹ ಖನಿಜಾಂಶವನ್ನು ನೀಡುವಂತಹದ್ದು ನಮ್ಮ ಕಣ್ಣಿಗೆ ಕಾಣದಂತಿರುವ ಸೂಕ್ಷ್ಮಾಣು ಜೀವಿಗಳು ಎಂದರು. ಪರಿಸರ ಎಂದರೆ ಭೂಮಿ. ಮರ, ಗಿಡ ಹಾಗೂ ನಾವು ಪಡೆಯುತ್ತಿರುವ ಪ್ರತಿಯೊಂದು ಸಂಪತ್ತು ಸಹ ಭೂಮಿಯಿಂದ. ಮನುಷ್ಯನ ಬದುಕಲು ಅವಶ್ಯವಿರುವ ನೀರು ಸಹ ಹುಟ್ಟುವುದು ಭೂಮಿಯಿಂದ. ಹಿಂದೆ ಶುದ್ಧವಾದ ನೀರು ಅಂತರ್ಜಲದಿಂದ ಸಿಗುತ್ತಿತ್ತು. ನಮ್ಮ ದೇಹಕ್ಕೆ ಅವಶ್ಯವಿರುವ ಮಿನರಲ್ಸ್‌ ಗಳು ನೀರಿನಲ್ಲಿ ಸಿಗುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರು ವಿರಳವಾಗಿದೆ ಎಂದು ಅವರು ತಿಳಿಸಿದರು.ನಂತರ ಪರಿಸರ ಗೀತೆಗಳ ಗಾಯನ ಜರುಗಿತು. ಪರಿಸರ ಬಳಗದ ಸಂಸ್ಥಾಪಕ ಸದಸ್ಯ ಪರಶುರಾಮೇಗೌಡ, ಚಿಂತಕರಾದ ಪ್ರೊ. ಕಾಳೇಗೌಡ ನಾಗವಾರ, ಹೊರೆಯಾಲ ದೊರೆಸ್ವಾಮಿ, ಪ್ರೊ. ಲತಾ ಕೆ. ಬಿದ್ದಪ್ಪ, ಡಾ. ಕಾಳಚನ್ನೇಗೌಡ, ಗಂಟಯ್ಯ, ಲೀಲಾ ವೆಂಕಟೇಶ್, ವಿಶ್ವನಾಥ್, ವಸಂತ್ ಕುಮಾರ್ ಮೈಸೂರುಮಠ, ಕಮಲ್ ಗೋಪಿನಾಥ್, ಕಾಮಾಕ್ಷಿ ಗೌಡ, ಭಾಗ್ಯಾ, ಪ್ರಭಾ, ಅಂಜನಾ, ಲೀಲಾ ಶಿವಕುಮಾರ್, ಗೋಕುಲ, ಮನೋಹರ್, ಶೈಲಜೇಶ್ , ಕಾವ್ಯಾ, ಸಲ್ಮಾ, ಅಕ್ಬರ್, ಡಾ. ರಾಮಕೃಷ್ಣ, ಶ್ವೇತಾ, ಬಾನು ಪ್ರಶಾಂತ್ ಮೊದಲಾದವರು ಇದ್ದರು.

Share this article