ಕನ್ನಡಪ್ರಭ ವಾರ್ತೆ ಮೂಡುಬಿದಿರೆಭಾರತದಲ್ಲಿ ಕ್ರಿ.ಶ. ೧೫೫೨ ರಿಂದ ೧೬೦೬ ರವರೆಗೆ ೫೪ ವರ್ಷಗಳ ಸುದೀರ್ಘ ಕಾಲ ರಾಜ್ಯಭಾರ ನಡೆಸಿದ ರಾಣಿ ಚೆನ್ನಭೈರಾದೇವಿಯ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ ಪ್ರಕಟಸಿದ ವಿಶೇಷ ಅಂಚೆ ಚೀಟಿಯ ಲೋಕಾರ್ಪಣೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಗುರುವಾರ ನಡೆಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಅಂಚೆ ಚೀಟಿ ಬಿಡುಗಡೆಗೊಳಿಸಿ ಮಾತನಾಡಿ, ರಾಣಿ ಚೆನ್ನಭೈರಾದೇವಿಯ ಕೊಡುಗೆಗಳನ್ನು ಸ್ಮರಿಸಿದರು. ರಾಣಿ ಚೆನ್ನಭೈರಾದೇವಿಯ ಧೈರ್ಯ ಮತ್ತು ಸಾಧನೆಯನ್ನು ಸುವರ್ಣಾಕ್ಷರಗಳಲ್ಲಿ ಮಾತ್ರವಲ್ಲ ವಜ್ರದ ಅಕ್ಷರಗಳಲ್ಲಿ ಕೆತ್ತಬೇಕು. ರಾಣಿ ಚೆನ್ನಭೈರಾದೇವಿಯ ನಾಡಿನ ರಕ್ಷಣೆಗಾಗಿ ಆಕೆ ನಡೆಸಿದ ಹೋರಾಟ, ಸಾಮಾಜಿಕ ಕಾಳಜಿ, ಜಾತ್ಯತೀತ ಮನೋಭಾವ, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಅಭಿವೃದ್ಧಿಗಾಗಿ ಆಕೆ ಕೈಕೊಂಡ ರಾಜನೀತಿಗಳನ್ನು ಶ್ಲಾಘನೀಯ ಎಂದು ಪ್ರಶಂಸಿಸಿದರು.ಅಂಚೆಚೀಟಿ ಹೊರತಂದ ಭಾರತೀಯ ಅಂಚೆ ಇಲಾಖೆ ಹಾಗೂ ಪ್ರಾಯೋಜಕರಾದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳನ್ನು ಅವರು ಅಭಿನಂದಿಸಿದರು. ರಾಜ್ಯಸಭಾ ಸದಸ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸ್ವಾಗತಿಸಿ ಮಾತನಾಡಿ, ರಾಜ್ಯ ವಿಸ್ತರಣೆ ರಾಣಿ ಚೆನ್ನ ಭೈರಾದೇವಿಯ ರಾಜ ನೀತಿಯಾಗಿರಲಿಲ್ಲ. ಬದಲಿಗೆ ಪ್ರಜೆಗಳ ಬದುಕಿಗೆ ಸುಖ ಸೌಲಭ್ಯ ಒದಗಿಸುವುದು ಅವಳ ಉದ್ದೇಶವಾಗಿತ್ತು. ಆಕೆ ವಾಣಿಜ್ಯ ವ್ಯವಹಾರದಲ್ಲಿ ನಿಷ್ಣಾತೆಯಾಗಿದ್ದಳು ಎಂದು ಸ್ಮರಿಸಿದರು.ತನ್ನರಾಜ್ಯದಿಂದ ಕರಿ ಮೆಣಸು, ದಾಲ್ಚಿನ್ನಿ, ಶುಂಠಿ, ಏಲಕ್ಕಿ, ಗಂಧ, ಅಕ್ಕಿ, ಬೆಲ್ಲ, ದಂತ ಮುಂತಾದ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡಿಅಪಾರ ಪ್ರಮಾಣದ ವಿದೇಶೀ ವಿನಿಮಯ ಗಳಿಸಿದ್ದಳು. ರಾಜಕೀಯವಾಗಿ ವೈರ ಸಾಧಿಸುತ್ತಿದ್ದ ಪೋರ್ಚುಗೀಸರೊಡನೆ ಉತ್ತಮ ವ್ಯಾವಹಾರಿಕ ಸಂಬಂಧ ಇರಿಸಿಕೊಂಡು, ಅವರಿಂದಲೇ ‘ರೈನಾದ ಪೆಮೆಂಟಾ’ ಅರ್ಥಾತ್ ‘ಕರಿಮೆಣಸಿನ ಅರಸಿ’ ಎಂಬ ಬಿರುದು ಪಡೆದಿದ್ದಳು ಎಂದು ವಿವರಿಸಿದರು.ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ, ಚೆನ್ನಭೈರಾದೇವಿ ಸ್ಮಾರಕ ಅಂಚೆ ಚೀಟಿ ಹಾಗೂ ಬಿಡುಗಡೆ ಕಾರ್ಯಕ್ರಮವನ್ನು ಮೂಡುಬಿದಿರೆ ಎಕ್ಸಲೆಂಟ್ ಎಜುಕೇಶನ್ ಫೌಂಡೇಶನ್ ಮೂಲಕ ಪ್ರಾಯೋಜಿಸಲಾಗಿದೆ ಎಂದು ತಿಳಿಸಿದರು.ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ರಾಣಿ ಚೆನ್ನಭೈರಾದೇವಿಯ ಶೌರ್ಯ, ದೃಢ ನಿರ್ಧಾರ ಮತ್ತು ಆಡಳಿತ ಕೌಶಲ್ಯವನ್ನು ಸ್ಮರಿಸಿದರು. ಅಂಚೆ ಚೀಟಿ ಪ್ರಾಯೋಜಕ, ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆ ಅಧ್ಯಕ್ಷ ಯುವರಾಜ ಜೈನ್ ಉಪಸ್ಥಿತರಿದ್ದರು.ದೆಹಲಿಯ ಅಂಚೆ ಮಹಾನಿರ್ದೇಶಕ ಅಖಿಲೇಶ್‌ಕುಮಾರ್ ಪಾಂಡಿ, ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಸಿಂಗ್, ‘ಕರಿಮೆಣಸಿನ ರಾಣಿ’ ಕಾದಂಬರಿಯ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿರುವ ಖ್ಯಾತ ಲೇಖಕ ಡಾ.ಗಜಾನನ ಶರ್ಮ, ಸಂಯೋಜಕ ಹುಬ್ಬಳ್ಳಿಯ ಖ್ಯಾತ ಉದ್ಯಮಿ ಮಹಾವೀರ ಕುಂದೂರ್, ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಬಿ.ಪಿ.ಸಂಪತ್‌ಕುಮಾರ ಮತ್ತಿತರ ಪ್ರಮುಖರು ಹಾಜರಿದ್ದರು.