ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ಆಯೋಜಿತ “ಪತ್ರಿಕಾ ದಿನಾಚರಣೆ” ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ ಅವರು ಮಾತನಾಡಿದರು.
ಕೊಡಗು ಪತ್ರಕರ್ತರ ಸಂಘದ “ಸ್ವಾಸ್ಥ್ಯ, ಸುಂದರ, ಸಮಾಜ” ಎನ್ನುವ ಘೋಷವಾಕ್ಯದಂತೆ ಪತ್ರಿಕಾ ಕ್ಷೇತ್ರವು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಸದಾ ಶ್ರಮಿಸುತ್ತಿದೆ ಎಂದು ತಿಳಿಸಿದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬಲ ತುಂಬುವ ಮತ್ತು ಬೆಂಬಲವನ್ನು ನೀಡುವ ಕಾರ್ಯದ ಮೂಲಕ ಸುಂದರ ಸಮಾಜ ನಿರ್ಮಾಣ ಸಾಧ್ಯವೆನ್ನುವ ಅನಿಸಿಕೆ ವ್ಯಕ್ತಪಡಿಸಿದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಮಾತನಾಡಿ, ಆರೋಗ್ಯಕರ ಸಮಾಜ ನಿಮಾಣದಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಮಹತ್ವ ಪೂರ್ಣವಾದದ್ದು. ಇಂತಹ ಪತ್ರಿಕಾ ಕ್ಷೇತ್ರ ಬದಲಾವಣೆಗಳಿಗೆ ತನ್ನನ್ನು ತೆರೆದುಕೊಳ್ಳುತ್ತಿರುವ ಈ ದಿನಮಾನಗಳಲ್ಲಿ, ಅದನ್ನು ಎಲ್ಲರೂ ಒಗ್ಗೂಡಿ ಎದುರಿಸಿ ಮುನ್ನಡೆಯುವ ಬಗ್ಗೆ ಚಿಂತಿಸುವ ಅಗತ್ಯವಿದೆಯೆಂದು ತಿಳಿಸಿದರು.
ಪತ್ರಿಕಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಪತ್ರಕರ್ತರಿಗೆ ಮಾಸಾಶನ ಸೌಲಭ್ಯವಿದ್ದು, ಇಲ್ಲಿಯವರೆಗೆ ಇದರ ಸೌಲಭ್ಯವನ್ನು ಆರು ಮಂದಿ ಜಿಲ್ಲೆಯಲ್ಲಿ ಪಡೆದುಕೊಂಡಿದ್ದಾರೆ. ಇದೀಗ ರಾಜ್ಯ ಸರ್ಕಾರ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಒದಗಿಸುತ್ತಿದ್ದು, ಇಂತಹ ಸೌಲಭ್ಯಗಳನ್ನು ಪತ್ರಕರ್ತರು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಭಾಷಾ ಜ್ಞಾನ ಪಡೆಯುವುದು ಅವಶ್ಯ:
ಕೊಡಗು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ಕೊಡಗಿನ ಶನಿವಾರಸಂತೆಯಲ್ಲಿ 142 ವರ್ಷಗಳ ಹಿಂದೆ “ಕೊಡಗು ಚಂದ್ರಿಕೆ” ಪತ್ರಿಕೆಯ ಆರಂಭದೊಂದಿಗೆ ಜಿಲ್ಲೆಯಲ್ಲಿ ಪತ್ರಿಕಾ ಕ್ಷೇತ್ರ ಪಾದಾರ್ಪಣೆ ಮಾಡಿ ಮುನ್ನಡೆಯುತ್ತಾ ಬಂದಿದೆ. ಶನಿವಾರಸಂತೆ ಕೊಡಗಿನ ಪತ್ರಿಕಾ ಕ್ಷೇತ್ರದ ಆರಂಭಕ್ಕೆ ಕಾರಣವಾಗಿರುವಂತೆಯೇ, ಇದೇ ಊರು ಕೊಡಗಿನ ಹೆಮ್ಮೆಯ ಸೇನಾನಿ ಫೀ.ಮಾ.ಕಾರ್ಯಪ್ಪ ಅವರ ಹುಟ್ಟಿದ ಊರೂ ಆಗಿದೆಯೆಂದು ಸಂತಸ ವ್ಯಕ್ತಪಡಿಸಿದರು.
ವಾರ್ಷಿಕ ಪ್ರಶಸ್ತಿ ಪ್ರದಾನ- ಸಮಾರಂಭದಲ್ಲಿ ಈ ಬಾರಿಯ ವಾರ್ಷಿಕ ಪ್ರಶಸ್ತಿಗಳನ್ನು 10 ಮಂದಿಗೆ ಪ್ರದಾನ ಮಾಡಲಾಯಿತು. ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಯನ್ನು ಕುಡೆಕಲ್ ಸಂತೋಷ್‌ರಿಗೆ, ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿ ಮೋಹನ್ ರಾಜ್, ಅತ್ಯುತ್ತಮ ಪರಿಣಾಮಕಾರಿ ವರದಿ ಪ್ರಶಸ್ತಿಯನ್ನು ಪ್ರಸಾದ್ ಸಂಪಿಗೆ ಕಟ್ಟೆ, ರಾಜಕೀಯ ವರದಿ ಪ್ರಶಸ್ತಿಯನ್ನು ವಿಘ್ನೇಶ್ ಭೂತನಕಾಡು, ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಯನ್ನು ಸುನಿಲ್ ಪೂಜಾರಿ, ಕೊಡಗಿನ ಆದಿವಾಸಿ ಜನಾಂಗದ ಜೀವನ ಕುರಿತ ಮಾನವೀಯ ವರದಿ ಪ್ರಶಸ್ತಿಯನ್ನು ಡಿ.ಪಿ.ಲೋಕೇಶ್, ಅತ್ಯುತ್ತಮ ಕೃಷಿ ವರದಿ ಪ್ರಶಸ್ತಿಯನ್ನು ವಿನೋದ್ ಮೂಡಗದ್ದೆ ಅವರಿಗೆ ಅತಿಥಿ ಗಣ್ಯರು ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಿದರು.
ಟಿ.ಜೆ.ಪ್ರವೀಣ್ ಕುಮಾರ್ ಅವರು ಪ್ರಾರ್ಥಿಸಿದರೆ, ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಸ್ವಾಗತಿಸಿದರು. ಕುಡೆಕಲ್ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಸನ್ಮಾನಿತರನ್ನು ಶಿವಪ್ಪ, ಹನೀಫ್, ರಂಜಿತ್ ಕವಲಪಾರ, ನವೀನ್ ಚಿನ್ನಪ್ಪ, ಗುರುದರ್ಶನ್, ನಾಸೀರ್, ಪ್ರಭಾಕರ್, ವತ್ಸಲ, ದುಶ್ಯಂತ್ ಮತ್ತು ಉಷಾ ಪ್ರೀತಂ ಅವರು ಸಭೆಗೆ ಪರಿಚಯಿಸಿದರು. ಪಿ.ಎಂ. ರವಿ ಅವರು ಸರ್ವರನ್ನೂ ವಂದಿಸಿದರು.