ಜ್ಞಾನ ಕಾವೇರಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ, ಜ್ಞಾನಗಂಗಾ ದತ್ತಿನಿಧಿ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Jul 10, 2024, 12:31 AM IST
ಚಿತ್ರ : ಪ್ರೆಸ್ 1 - ಹಿರಿಯ ಪತ್ರಕರ್ತ ಹೊಸ ದಿಗಂತ ಪತ್ರಿಕೆಯ ಜಿಲ್ಲಾ ವರದಿಗಾರ ಕೆ. ತಿಮ್ಮಪ್ಪ ಅವರಿಗೆ ಪ್ರದಾನ ಮಾಡಲಾಯಿತು.  | Kannada Prabha

ಸಾರಾಂಶ

ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕ ಹಾಗೂ ಕೊಡಗು ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ಮಂಗಳವಾರ ವಿಶ್ವ ವಿದ್ಯಾಲಯದ ಜ್ಞಾನ ಕಾವೇರಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಜ್ಞಾನಗಂಗಾ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಸಮಸ್ಯೆಗಳನ್ನು ಹೆಚ್ಚಾಗಿ ಪ್ರತಿಬಿಂಬಿಸುವುದಕ್ಕಿಂತ ಅವುಗಳ ಪರಿಹಾರದ ಕಡೆಗೆ ಹೆಚ್ಚು ಆದ್ಯತೆ ಕೊಡುವ ವರದಿಗಳನ್ನು ಮಾಡುವುದು ಹೆಚ್ಚು ಸಮಾಜಮುಖಿ ಕೆಲಸವಾಗುತ್ತದೆ ಎಂದು ಕೊಡಗು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ ಅಶೋಕ ಸಂಗಪ್ಪ ಆಲೂರ ಅಭಿಪ್ರಾಯಪಟ್ಟಿದ್ದಾರೆ.

ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕ ಹಾಗೂ ಕೊಡಗು ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ಮಂಗಳವಾರ ವಿಶ್ವ ವಿದ್ಯಾಲಯದ ಜ್ಞಾನ ಕಾವೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಜ್ಞಾನಗಂಗಾ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ನಾಲ್ಕು ಆಧಾರಗಳೆನಿಸಿದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾ ರಂಗಗಳು ಸಮಾಜಮುಖಿ ಕೆಲಸ ಮಾಡಬೇಕು. ವಿಶೇಷವಾಗಿ ಪತ್ರಿಕಾ ರಂಗ ಸಮಾಜದ ಆಗು ಹೋಗುಗಳನ್ನು ವಿಭಿನ್ನತೆಯಿಂದ ನೋಡಿ ಸ್ಪಷ್ಟತೆಯಿಂದ ವರದಿ ಮಾಡಬೇಕೆಂದು ಸಲಹೆ ನೀಡಿದರು.

ಕೊಡಗು ವಿಶ್ವ ವಿದ್ಯಾಲಯದಲ್ಲಿ ವಿಜ್ಞಾನ ವಿಷಯಗಳ ಮತ್ತು ಇತ್ತೀಚಿನ ಸಂಶೋಧನೆಗಳ ಕುರಿತು ವರದಿಗಾರಿಕೆಯ ಬಗ್ಗೆ ವಿಶೇಷ ಕಾರ್ಯಾಗಾರ ಆಯೋಜಿಸುವುದಾಗಿ ಘೋಷಿಸಿದರು.

ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ವಿಶ್ವ ವಿದ್ಯಾಲಯದಲ್ಲಿ ಬಿ.ಸಿ.ಎ, ಎಂ.ಸಿ.ಎ ಹಾಗೂ ಎಂ.ಬಿ.ಎ ನೂತನ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ವಿಶ್ವವಿದ್ಯಾಲಯದ ಕುಲಸಚಿವ ಡಾ. ಸೀನಪ್ಪ ಮಾತನಾಡಿ, ಯಾವುದೇ ವಿಷಯ ಅಥವಾ ಸರ್ಕಾರವನ್ನು ಉಳಿಸುವ ಇಲ್ಲವೇ ಅಳಿಸುವ ಶಕ್ತಿಯನ್ನು ಪತ್ರಕರ್ತರ ಲೇಖನಿ ಹೊಂದಿದೆ ಎಂದರು.

ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರ, ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಹಾಗೂ ಸತ್ಯವನ್ನು ಜನರ ಮುಂದಿಡುವ ಪತ್ರಕರ್ತರಿಗೆ ಕಾನೂನಿನ ರಕ್ಷಣೆ ಇಲ್ಲ. ಪತ್ರಿಕಾ ವೃತ್ತಿ ಹಿಂದೆಂದಿಗಿಂತಲೂ ಹೆಚ್ಚು ಸವಾಲಿನಂತಾಗಿದ್ದು, ಇತ್ತೀಚೆಗೆ ತಾಂತ್ರಿಕತೆ ಬೆಳೆದಿರುವ ಹಿನ್ನೆಲೆಯಲ್ಲಿ ಮುದ್ರಣಾ ಮಾಧ್ಯಮಕ್ಕೆ ಪೆಟ್ಟು ಬೀಳುವ ಆತಂಕ ಎದುರಾಗಿದೆ ಎಂದರು.

ಜೂನಿಯರ್ ಅಲೂಮಿನಿ ಕ್ಲಬ್‌ನ ವಲಯಾಧ್ಯಕ್ಷ ಎಂ.ಡಿ. ರಂಗಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಸ್ವಚ್ಛತೆ ಹಾಗೂ ಸಹಾಯ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರುಳೀಧರ್ ಮಾತನಾಡಿ, ಈಗ ಕೊಡಗಿನಲ್ಲೇ ಉನ್ನತ ಶಿಕ್ಷಣ ದೊರಕುತ್ತಿರುವುದು ಹರ್ಷದಾಯಕ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಕೊಡುಗೆಯ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ಹೇಳಿದರು.

ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಪ್ರಸ್ತಾವಿಕವಾಗಿ ಮಾತನಾಡಿದರು.

ಪುಲಿಯಂಡ ರಾಮ್ ದೇವಯ್ಯ ಅವರು ತಮ್ಮ ಜ್ಞಾನಗಂಗಾ ಶಾಲೆಯ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿನಿಧಿ ಪ್ರಶಸ್ತಿಯನ್ನು ‘ಹೊಸ ದಿಗಂತ’ ಪತ್ರಿಕೆಯ ಜಿಲ್ಲಾ ವರದಿಗಾರ ಕೆ. ತಿಮ್ಮಪ್ಪ ಅವರಿಗೆ ಪ್ರದಾನ ಮಾಡಲಾಯಿತು.

ವಿದ್ಯಾರ್ಥಿ ಅಮೃತ್‌ರಾಜ್ ಪ್ರಾರ್ಥಿಸಿದರು. ಕೊಡಗು ಜಿಲ್ಲಾ ಸಂಘದ ನಿರ್ದೇಶಕ ಡಿ.ಪಿ. ಲೋಕೇಶ್ ಸನ್ಮಾನಿತರನ್ನು ಪರಿಚಯಿಸಿದರು. ಉಪನ್ಯಾಸಕ ಜಮೀರ್ ಅಹಮ್ಮದ್ ನಿರೂಪಿಸಿದರು. ಸಂಘದ ಖಜಾಂಚಿ ನವೀನ್ ಕುಮಾರ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!