ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ದೇಶದ ಗಟ್ಟಿಯಾದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾಧ್ಯಮದ ಪಾತ್ರ ಅತಿ ಮುಖ್ಯವಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದ್ದಾರೆ.ಅವರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕತ್ತರಿಘಟ್ಟ ಲಕ್ಷ್ಮಿದೇವಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಕರ್ತರು ಮತ್ತು ವಿತರಕರನ್ನು ಸನ್ಮಾನಿಸಿ ಮಾತನಾಡಿದರು. ಪತ್ರಿಕಾರಂಗ ತಂತ್ರಜ್ಞಾನದ ಮೂಲಕ ಅತಿ ವೇಗವಾಗಿ ಉನ್ನತ ಮಟ್ಟಕ್ಕೆ ಹೋಗುತ್ತಿದೆ. ಇದು ಹೆಮ್ಮೆಯ ವಿಚಾರವಾಗಿದೆ ಎಂದರು.
ಸಮಾಜಕ್ಕೆ ಮಾಧ್ಯಮದ ಸೇವೆ ಅಗತ್ಯವಿದೆ. ತಾಲೂಕು ಹಂತದಲ್ಲಿ ಉತ್ತಮ ಪತ್ರಕರ್ತರ ಭವನ ಚನ್ನರಾಯಪಟ್ಟಣದಲ್ಲಿ ನಿರ್ಮಾಣವಾಗಿದ್ದು, ಭವನ ನಿರ್ಮಾಣ ಹಾಗೂ ಕ್ಷೇಮನಿಧಿಗೆ ಸಹಕಾರ ನೀಡಿದ್ದನ್ನು ಸ್ಮರಿಸಿ, ದ್ವೇಷ ಅಸೂಯೆ ದೂರ ಇಟ್ಟು ಶಾಂತಿಯ ಬದುಕು ನಮ್ಮದಾಗಬೇಕು. ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರ ಉತ್ತಮ ಕಾರ್ಯ ಮಾಡುತ್ತಿದ್ದು, ಬಸ್‌ಗಳ ಸಂಖ್ಯೆ ಕಡಿಮೆಯಾಗಬಾರದು ಎಂದು ಮುಖ್ಯಮಂತ್ರಿಗಳಿಗೆ ಮಾಧ್ಯಮದ ಮೂಲಕ ತಿಳಿಸಿ, ಪತ್ರಕರ್ತರ ಕುಟುಂಬಕ್ಕೂ ಉಚಿತ ಬಸ್‌ಪಾಸ್ ನೀಡಲಿ ಎಂದರು.ಕತ್ತರಿಘಟ್ಟ ಮೆಳಿಯಮ್ಮ ಆಧ್ಯಾತ್ಮ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿ, ದಿನಪತ್ರಿಕೆಗಳ ಪ್ರದರ್ಶನ ಮಾಡುವ ಮೂಲಕ ಉದ್ಘಾಟಿಸಿ ಆಶೀರ್ವಾದ ನೀಡಿ, ಪತ್ರಿಕಾ ದಿನಾಚರಣೆ ಹಬ್ಬದಂತೆ ಆಚರಣೆಯಾಗಬೇಕು. ಪತ್ರಕರ್ತರಿಗೆ ತವರುಮನೆ ಕತ್ತರಿ ಘಟ್ಟವಾಗಲಿ. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಮಾಜದಲ್ಲಿ ಪ್ರಾಮುಖ್ಯತೆ ಹೊಂದಿದಂತೆ ಪತ್ರಕರ್ತರು ಸಮಾಜಕ್ಕೆ ಅಗತ್ಯ ಎಂದರು. ತಾಲೂಕಿನ ಪತ್ರಕರ್ತರಾದ ನಂದನ್ ಪುಟ್ಟಣ್ಣ, ಲೋಹಿತ್, ವಿತರಕರಾದ ವೇಣುಕುಮಾರ್, ವೆಂಕಟೇಶಚಾರ್ ಅವರನ್ನು ಗೌರವಿಸಲಾಯಿತು.
ಇದೇ ಸಂದರ್ಭ ಲೋಕಸಭಾ ಸದಸ್ಯ ಶ್ರೇಯಸ್ ಎಂ.ಪಟೇಲ್, ಮಾಜಿ ಎಮ್‌ಎಲ್‌ಸಿ ಎಂ.ಎ ಗೋಪಾಲಸ್ವಾಮಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿ ಆನಂದ್ ಹಾಗೂ ಗಣ್ಯರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಅತಿಥಿಗಳಾದ ಡಿವೈಎಸ್‌ಪಿ ಎನ್.ಕುಮಾರ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವೇಣುಕುಮಾರ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್. ಬಿ. ಮದನ್‌ಗೌಡ, ಮಾಜಿ ಅಧ್ಯಕ್ಷ ರವಿ ನಾಕಲಗೂಡು, ಬಾಳ್ಳು ಗೋಪಾಲ್, ತಾಲೂಕು ಕಸಾಪ ಅಧ್ಯಕ್ಷ ಎಚ್. ಎನ್ ಲೋಕೇಶ್, ತಾಲೂಕು ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ನಟೇಶ್, ಹಾಸನ ಜಿಲ್ಲೆಯ ಹಿರಿಯ ಪತ್ರಕರ್ತ ಕೆಂಚೇಗೌಡ, ನಂಜುಂಡೇಗೌಡ, ಉದಯ್ ಕುಮಾರ್, ಗುಡಿಗೌಡರು, ಗ್ರಾ.ಪಂ. ಸದಸ್ಯರು ಮೊದಲಾದವರು ಭಾಗಿಯಾಗಿದ್ದರು.