ಕನ್ನಡಪ್ರಭ ವಾರ್ತೆ ಮಂಡ್ಯ
ಮೈಸೂರು ವಿಶ್ವ ವಿದ್ಯಾಲಯಕ್ಕೆ ವಿಲೀನ ಮಾಡುವುದಾಗಿ ಹೇಳಿ ಸಾರ್ವಜನಿಕರ ದಿಕ್ಕು ತಪ್ಪಿಸಿ ಮಂಡ್ಯ ವಿವಿಯನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ವಿವಿ ಮುಚ್ಚುವ ಪ್ರಕ್ರಿಯೆಯಲ್ಲಿ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ಅವರು ಸಹಮತ ವ್ಯಕ್ತಪಡಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಗೆ ವಿವಿ ಒದಗಿಸಿರುವುದು ಕೇಂದ್ರ ಸರ್ಕಾರ. ರಾಜ್ಯ ಸರ್ಕಾರ ಸದರಿ ವಿವಿಯನ್ನು ಆರ್ಥಿಕ ಹೊರೆ ನೆಪವೊಡ್ಡಿ ಮುಚ್ಚಲು ಮುಂದಾಗಿದೆ. ವಾಸ್ತವವಾಗಿ ಮೈಸೂರು ವಿವಿ ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದೆ. ಕಾಯಂ ಉಪನ್ಯಾಸಕರ ನೇಮಕ ಹಾಗೂ ಹಾಲಿ ಉಪನ್ಯಾಸಕರಿಗೆ ವೇತನ ನೀಡಲು ಸಂಕಷ್ಟ ಎದುರಿಸುತ್ತಿದೆ ಎಂದರು.ಮಂಡ್ಯ ವಿವಿ ಹಂತ ಹಂತವಾಗಿ ಪ್ರತಿಷ್ಠಿತ ಹೆಜ್ಜೆ ಇಡುತ್ತಿದೆ. ಹೆಜ್ಜೆ ತಪ್ಪಿದರೆ ಸರಿಪಡಿಸಬೇಕಾದ ಜನಪ್ರತಿನಿಧಿಗಳು ಹಾಗೂ ಸರ್ಕಾರ ಇಲ್ಲದ ಕಾರಣ ನೀಡಿ ವಿವಿಯನ್ನು ಮುಚ್ಚುವ ಅತಿರೇಕತೆ ವರ್ತನೆ ತೋರುತ್ತದೆ ಎಂದು ಆರೋಪಿಸಿದರು.
ರೂಸ ಅನುದಾನಡಿ ಮಂಡ್ಯ ವಿವಿಗೆ ಬೇಕಾದ ಅಗತ್ಯ ಕಟ್ಟಡಗಳು ನಿರ್ಮಾಣವಾಗಿದೆ. 8 ಕಿ.ಮೀ ವ್ಯಾಪ್ತಿಯಲ್ಲಿ 100 ಎಕರೆ ವಿಸ್ತೀರ್ಣ ಜಾಗವಿದೆ. ಅಗತ್ಯ ಕಟ್ಟಡಗಳಿವೆ. ವಿಜ್ಞಾನ ಬೋಧನೆಗೆ ಅನುಕೂಲಕರ ಪ್ರಯೋಗಾಲಯಗಳಿವೆ. ಅನುಕೂಲಕರ ಸೌಲಭ್ಯವಿದ್ದರೂ ವಿವಿಯನ್ನು ಮುಚ್ಚುವ ನಿರ್ಧಾರವೇಕೆ ಎಂದು ಪ್ರಶ್ನಿಸಿದರು.ಕರ್ನಾಟಕ ಸಂಘದ ಪ್ರೊ.ಜಯಪ್ರಕಾಶ್‌ಗೌಡ ಮಾತನಾಡಿ, ದಕ್ಷಿಣ ಭಾರತದಲ್ಲಿ ಮದರಾಸ್ ವಿವಿಯಿಂದ ಮೈಸೂರು ವಿವಿ ಹೊರಬಂದಾಗ ಇದೇ ರೀತಿಯಾದ ಅಪ ಪ್ರಚಾರ, ಅಂಜಿಕೆ, ಅಳುಕು ಇದ್ದವು. ಅಂತೆಯೇ ಮಂಡ್ಯ ವಿವಿಯು ಅತ್ಯುನ್ನತವಾಗಿ ಮುನ್ನಡೆಯಲಿದೆ ಎಂದರು.
ಮಂಡ್ಯ ವಿವಿಯು ತನ್ನ ಛಾಪನ್ನು ಮೂಡಿಸಿದೆ. ಅಧಿಕಾರ ವಿಕೇಂದ್ರೀಕರಣ ಪ್ರಜಾಪ್ರಭುತ್ವದ ಮುಖ್ಯ ಲಕ್ಷಣ. ಅದನ್ನು ಕೇಂದ್ರೀಕರಣಗೊಳಿಸುತ್ತಿರುವ ಮನಸ್ಸುಗಳ ಬಗ್ಗೆ ನಮ್ಮ ತಿರಸ್ಕಾರವಿದೆ. ಈ ವಿಷಯದ ಬಗೆಗಿನ ವಾದಗಳು ಸಂವಾದವಾಗಿ ರೂಪುಗೊಂಡಾಗ ಮಾತ್ರ ತಾರ್ಕಿಕತೆಯನ್ನು ತಲುಪುತ್ತದೆ ಎಂದರು.ಮಂಡ್ಯ ಶಾಸಕ ಪಿ.ರವಿಕುಮಾರ್ ಮಂಡ್ಯ ವಿವಿಯನ್ನು ಉಳಿಸಿಕೊಳ್ಳಲು ದನಿಯೆತ್ತಿದ್ದಾರೆ. ವಿವಿ ಸಂಬಂಧ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮುಂದಾಗಿದ್ದಾರೆ. ವಿವಿ ಪ್ರವೇಶ ಕಮಾನಿಗೆ 3 ಕೋಟಿ ರೂ ವೆಚ್ಚದಲ್ಲಿ ಗುದ್ದಲಿಪೂಜೆ ಸಲ್ಲಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರೊ.ಜಯಪ್ರಕಾಶ್ ಗೌಡ, ಚಿಂತಕರಾದ ಜಿ.ಟಿ.ವೀರಪ್ಪ, ಹುಲ್ಕೆರೆ ಮಹದೇವು, ನಾಗರೇವಕ್ಕ, ಇಂಡುವಾಳು ಚಂದ್ರಶೇಖರ್ , ಎಸ್.ಬಿ.ಶಂಕರೇಗೌಡ, ಎಸ್.ನಾರಾಯಣ, ಮಂಜುನಾಥ್ ಸೇರಿದಂತೆ ಹಲವರಿದ್ದರು.