ವನ್ಯಜೀವಿಗಳಿಂದಾದ ಬೆಳೆ ಹಾನಿಯಾಗದಂತೆ ತಡೆಯಿರಿ

KannadaprabhaNewsNetwork |  
Published : Aug 23, 2024, 01:23 AM IST
ಅರ್ಜಿ ಆಂದೋಲನ ಸಭೆ ನಡೆಯಿತು | Kannada Prabha

ಸಾರಾಂಶ

ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದಿಂದ ಗುರುವಾರ ಅಡಕೆ ಬೆಳೆಗೆ ವನ್ಯಪ್ರಾಣಿಗಳಿಂದ ಉಂಟಾದ ನಷ್ಟಕ್ಕೆ ಅರಣ್ಯ ಇಲಾಖೆ ಪರಿಹಾರ ಕೊಡಬೇಕೆಂಬ ಒತ್ತಾಯದ ಮನವಿಯನ್ನು ನೀಡಲು ಬೆಳೆಗಾರರ ಅರ್ಜಿ ಆಂದೋಲನ ಸಭೆ ನಡೆಯಿತು

ಕನ್ನಡಪ್ರಭ ವಾರ್ತೆ ಸಾಗರ

ವನ್ಯಜೀವಿಗಳಿಂದ ಅಡಕೆ ಬೆಳೆ ಹಾನಿಯಾಗದಂತೆ ರಕ್ಷಣೆ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಅರಣ್ಯ ಇಲಾಖೆ ಇದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್.ಜಯಂತ್ ಆರೋಪಿಸಿದರು.

ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದಿಂದ ಗುರುವಾರ ಅಡಕೆ ಬೆಳೆಗೆ ವನ್ಯಪ್ರಾಣಿಗಳಿಂದ ಉಂಟಾದ ನಷ್ಟಕ್ಕೆ ಅರಣ್ಯ ಇಲಾಖೆ ಪರಿಹಾರ ಕೊಡಬೇಕೆಂಬ ಒತ್ತಾಯದ ಮನವಿಯನ್ನು ನೀಡಲು ಸೇರಿದ್ದ ಬೆಳೆಗಾರರ ಅರ್ಜಿ ಆಂದೋಲನ ಸಭೆಯಲ್ಲಿ ಮಾತನಾಡಿ, ಮಂಗ, ಹಂದಿ, ಕಾಡುಕೋಣಗಳ ಉಪಟಳ ಹೆಚ್ಚಾಗಿದೆ. ಮಂಗಗಳನ್ನು ಕೊಲ್ಲಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಅವಕಾಶವಿದೆ ಎಂದರು.

ಮಂಗಗಳು ಬೆಳೆಯುತ್ತಿರುವ ಅಡಕೆಯನ್ನು ಚೀಪಿ ಬಿಸಾಕುತ್ತವೆ. ಇದರಿಂದ ಬೆಳೆಗಾರರಿಗೆ ಬೆಳೆ ಇಲ್ಲದಂತಾಗುತ್ತದೆ. ಅವುಗಳನ್ನು ಕೊಲ್ಲಲು ಡಿಎಫ್ಒ ಅವರು ಬರವಣಿಗೆಯಲ್ಲಿ ರೈತರಿಗೆ ಅನುಮತಿ ಕೊಡಬೇಕು. ಇದಕ್ಕೆ ಕಾನೂನಿನಲ್ಲಿ ಅವಕಾಶವಿದ್ದರೂ ಅಧಿಕಾರಿಗಳು ಬೆಳೆಗಾರರ ಮೇಲೆ ದೌರ್ಜನ್ಯ ನಡೆಸಲು ಅವಕಾಶ ನೀಡುತ್ತಿಲ್ಲವೆಂದು ದೂರಿದರು.

ಕಾಡುಪ್ರಾಣಿಗಳಿಂದ ರೈತರಿಗೆ ಬಹಳಷ್ಟು ಕಿರುಕುಳವಾಗುತ್ತಿದೆ. ಇರುವ ಕಾನೂನನ್ನು ಬಳಸಲು ಅವಕಾಶ ಕೊಡಬೇಕು. ಮಂಗಗಳನ್ನು ಹೊಡೆಯಲು ಅವಕಾಶ ಕೊಡಬೇಕು. ಸರ್ಕಾರಿ ವ್ಯವಸ್ಥೆ ಜನರ ಪರವಾಗಿಲ್ಲ. ಬ್ರಿಟಿಷರ ಮಾದರಿಯಲ್ಲಿ ಆಡಳಿತ ನಡೆಯುತ್ತಿದೆ. ರೈತರಿಗೆ ತಹಸೀಲ್ದಾರ್‌ ಕಚೇರಿಗಳಲ್ಲಿ ಗೌರವ ಸಿಗುತ್ತಿಲ್ಲ. ಇವಕ್ಕೆಲ್ಲ ಪರಿಹಾರವೆಂದರೆ ರೈತರ ಸಂಘಟನೆ ಒಂದೇ ಈ ಕುರಿತು ಹೋರಾಟ ಅನಿವಾರ್ಯ ಎಂದು ಹೇಳಿದರು.

ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಕಾಡುಪ್ರಾಣಿಗಳಿಂದ ಬೆಳೆಗಾರರ ಬೆಳೆ ನಷ್ಟಕ್ಕೆ ಅರಣ್ಯ ಇಲಾಖೆ ಪರಿಹಾರ ಕೊಡಬೇಕು. ಬೆಳೆ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಬೆಳೆ ನಷ್ಟಕ್ಕೆ ಒಂದು ಕಾಲಮಿತಿಯಲ್ಲಿ ಪರಿಹಾರ ಕೊಡಬೇಕು. ಒಂದು ಅಡಕೆ ಗಿಡ ನಾಶವಾದರೆ ₹೬೦೦ ಪರಿಹಾರ ಕೊಡಬೇಕೆಂದಿದೆ. ಇಲಾಖೆ ತಮ್ಮ ಗುತ್ತಿಗೆದಾರರ ಕೆಲಸವನ್ನು ಬೇಗ ಮಾಡಿಕೊಡುತ್ತದೆ. ರೈತರ ಬಗ್ಗೆ ಮಾತ್ರ ನಿರ್ಲಕ್ಷ್ಯ, ಉನ್ನತ ಅಧಿಕಾರಿಗಳಿದ್ದೂ ರೈತರ ಪರ ನ್ಯಾಯ ಕೊಡಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.

ಆಪ್ಸ್ಕೋಸ್ ಅಧ್ಯಕ್ಷ ಇಂದೂದರ ಗೌಡ ಮಾತನಾಡಿ, ಬೆಳೆಗಾರರ ಸಮಸ್ಯೆಗೆ ತಕ್ಷಣ ಪರಿಹಾರ ಕೊಡಬೇಕು. ಕೊಳೆ ರೋಗದಿಂದ ಶೇ.೫೦ ರಷ್ಟು ಬೆಳೆ ನಷ್ಟವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮಂಗಗಳಿಂದ ಹೆಚ್ಚು ಹಾನಿಯಾಗುತ್ತಿದೆ. ಬೆಳೆಗಾರರು ಆತಂಕದಲ್ಲಿ ಬದುಕುತ್ತಿದ್ದಾರೆ ಎಂದರು.

ತೋಟಗರ್ಸ್ ಅಧ್ಯಕ್ಷ ಕೆ.ಸಿ.ದೇವಪ್ಪ, ನ್ಯಾಯವಾದಿ ರವೀಶ್ಕುಮಾರ್ ಮತ್ತಿತರರು ಮಾತನಾಡಿದರು. ಬೆಳೆಗಾರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ಕಾರ್ಯದರ್ಶಿ ರಾಜೇಂದ್ರ ಖಂಡಿಕ, ಪ್ರಮುಖರಾದ ಕಲಸೆ ಚಂದ್ರಪ್ಪ, ಆರ್.ಎಸ್.ಗಿರಿ, ಯು.ಎಚ್.ರಾಮಪ್ಪ, ಶ್ರೀಧರ ಈಳಿ, ರಜನೀಶ ಹೆಗಡೆ, ಹು.ಬಾ.ಅಶೋಕ, ಸ್ವಾಮಿದತ್ತ, ಪ್ರಸನ್ನ ಕೆರೆಕೈ, ಕೆ.ವಿ.ಪ್ರವೀಣ, ವೆಂಕಟೇಶ್ ಬೆಳೆಯೂರು ಮತ್ತಿತರರು ಹಾಜರಿದ್ದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ