ಗುಣಮಟ್ಟ ಶಿಕ್ಷಣದಿಂದ ಪ್ರತಿಭಾ ಪಲಾಯನಕ್ಕೆ ತಡೆ

KannadaprabhaNewsNetwork | Published : Jun 30, 2024 12:46 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಪ್ರತಿ ವರ್ಷ ೧೮ ಲಕ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ. ಅತ್ಯುನ್ನತ ಮತ್ತು ಗುಣಮಟ್ಟದ ಸಂಶೋಧನೆ ಭಾರತದಲ್ಲಿ ನೀಡಿದಾಗ ಮಾತ್ರ ಪ್ರತಿಭಾ ಪಲಾಯನ ತಡೆಯಲು ಸಾಧ್ಯವಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರತಿ ವರ್ಷ ೧೮ ಲಕ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ. ಅತ್ಯುನ್ನತ ಮತ್ತು ಗುಣಮಟ್ಟದ ಸಂಶೋಧನೆ ಭಾರತದಲ್ಲಿ ನೀಡಿದಾಗ ಮಾತ್ರ ಪ್ರತಿಭಾ ಪಲಾಯನ ತಡೆಯಲು ಸಾಧ್ಯವಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಹೇಳಿದರು.ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ನಗರದ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ ಸಂಶೋಧನೆ ಮತ್ತು ಪ್ರಕಟಣೆಯಲ್ಲಿನ ಪ್ರಚಲಿತ ಪ್ರವೃತ್ತಿಗಳು ಎಂಬ ವಿಷಯದ ಕುರಿತಾದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಅರಿಸಿ ವಿದೇಶಕ್ಕೆ ತೆರಳಿದ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆದು ನಂತರ ಅಲ್ಲಿಯೆ ಕೆಲಸ ಗಿಟ್ಟಿಸಿಕೊಂಡು ಆ ದೇಶದಲ್ಲಿ ನೆಲೆಯೂರುತ್ತಾರೆ. ಭಾರತದ ಪ್ರಗತಿಗೆ ಸಹಕಾರಿಯಾಗ ಬೇಕಾಗಿದ್ದ ಪ್ರತಿಭೆಗಳು ವಿದೇಶ್ಕಕೆ ಹೋಗಿ ಆ ದೇಶಗಳ ಪ್ರಗತಿಗೆ ಕೊಡುಗೆ ನೀಡುತ್ತಿರುವುದು ಸಾಮಾನ್ಯವಾಗಿ ಕಾಣುತ್ತೇವೆ. ಗುಣಮಟ್ಟದ ಮತ್ತು ಕೌಶಲ್ಯರಹಿತ ಶಿಕ್ಷಣ ಫಲವಾಗಿ ಜಾಗತಿಕ ಮಟ್ಟದಲ್ಲಿ ಮೊದಲ ೧೦೦ ಸ್ಥಾನಗಳಲ್ಲಿ ಭಾರತದ ಒಂದು ವಿಶ್ವವಿದ್ಯಾಲಯ ಸ್ಥಾನ ಪಡೆಯಲು ಸಾಧ್ಯವಾಗುತ್ತಿಲ್ಲ. ಗುಣಮಟ್ಟದ ಉನ್ನತ ಶಿಕ್ಷಣ, ಪ್ರಚಲಿತ ಪಠ್ಯಕ್ರಮ ಮತ್ತು ಮೌಲ್ಯಾಧಾರಿತ ಸಂಶೋಧನೆಗೆ ಆದತ್ಯೆ ನೀಡುವ ಅವಶ್ಯಕತೆಯಿದೆ ಎಂದರು.

ಮೊಬೈಲ್, ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಸೌಲಭ್ಯಗಳನ್ನು ಶೈಕ್ಷಣಿಕವಾಗಿ ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಬೇಕು. ಅಂತರ್ ಶಿಸ್ತಿನ ಮತ್ತು ಬಹುಶೀಸ್ತಿನ ಜ್ಞಾನ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಸಂಶೋಧನಾರ್ಥಿಗಳು ಪಡೆಯಲು ಮುಂದಾಗಬೇಕು. ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬರ ಪಾತ್ರವಿರವುದು. ವೈದ್ಯ, ವಕೀಲ, ಶಿಕ್ಷಕ, ಪೌರಕಾರ್ಮಿಕ, ರೈತ ಮತ್ತು ವ್ಯಾಪಾರಿ ಹೀಗೆ ಎಲ್ಲ ವೃತ್ತಿಗಳು ಸಮಾನ ಮಹತ್ವ ಸಮಾಜದಲ್ಲಿ ಪಡೆದಿವೆ. ಆದ್ದರಿಂದ ಹಾಗಾಗೀ ಸಂವಿಧಾನ ನೀಡಿದ ಹಕ್ಕು ಪ್ರತಿಪಾದನೆ ತೊಡುಗುವುದರ ಜೊತೆಗೆ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಅರಿತು ದೇಶದ ಉನ್ನತಿ ಎಲ್ಲರೂ ಶ್ರಮಿಸಬೇಕು ಎಂದರು.ಆರ್‌ಸಿಯು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಅವಿರತವಾದ ಪರಿಶ್ರಮದಿಂದ ಯಶಸ್ಸು ಸಾಧ್ಯ. ಆದ್ದರಿಂದ ಸಂಶೋಧನಾರ್ಥಿಗಳು 3 ವರ್ಷ ಶ್ರದ್ಧೆ ಮತ್ತು ಆಸಕ್ತಿ ವಹಿಸಿ ಉತ್ತಮ ಮೌಲ್ಯಯುತ ಸಂಶೋಧನೆಗೆ ಮುಂದಾಗಬೇಕು. ಹುದ್ದೆ ಬಡ್ತಿ ಮತ್ತು ಪಿಎಚ್‌ಡಿ ಪದವಿಗಾಗಿ ಸಂಶೋಧನೆ ಮಾಡುವ ಬದಲಾಗಿ, ಮನುಕುಲ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಸಂಶೋಧನೆಗಳ ಪರಿಹಾರ ನೀಡವಂತಾಗಬೇಕು ಎಂದರು. ಪಠ್ಯಕ್ರಮ ಪರಿಷ್ಕರಣೆ ಸಮಿತಿಯ ಮುಖ್ಯಸ್ಥ ಪ್ರೊ.ಎಂ.ಜಿ.ಹೆಗಡೆ ಮತ್ತು ಅಜೀಂ ಪ್ರೇಮಜಿ ವಿವಿಯ ಸಲಹೆಗಾರ ಪ್ರೊ.ದೇವಕಿ ಲಕ್ಷ್ಮೀ ನಾರಾಯಣ ಅವರು ಸಂಶೋಧನೆ ಮತ್ತು ಪ್ರಕಟಣೆ ಕುರಿತಾಗಿ ಮಾತನಾಡಿದರು. ಸಂಶೋಧನೆ ಮತ್ತು ಸಂಶೋಧನಾ ಲೇಖನ ಮಂಡಿಸಲು ವಿದೇಶಕ್ಕೆ ತೆರಳುತ್ತಿರುವ ಇಂಗ್ಲಿಷ್‌ ವಿಭಾಗದ ಪ್ರೊ.ನಾಗರತ್ನಾ ಪರಾಂಡೆ ಮತ್ತು ಡಾ.ಪೂಜಾ ಹಲ್ಯಾಳ್ ಅವರಿಗೆ ಗೌರವಿಸಲಾಯಿತು.ಮೌಲ್ಯಮಾಪನ ಕುಲಸಚಿವ ಪ್ರೊ.ರವೀಂದ್ರನಾಥ ಕದಂ, ಹಣಕಾಸು ಅಧಿಕಾರಿ ಪ್ರೊ.ಎಸ್.ಬಿ.ಆಕಾಶ, ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಪ್ರೊ.ಬಸವರಾಜ ಪದ್ಮಶಾಲಿ, ವಿಶೇಷಾಧಿಕಾರಿ ಪ್ರೊ.ವಿಶ್ವನಾಥ ಆವಟಿ, ಪ್ರೊ.ಜೆ.ಮಂಜಣ್ಣ, ಪ್ರೊ. ಬಾಲಚಂದ್ರ ಹೆಗಡೆ, ಪ್ರೊ.ಎಂ.ಸಿ.ಯರಿಸ್ವಾಮಿ ಸೇರಿದಂತೆ ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು. ಕುಲಸಚಿವೆ ರಾಜಶ್ರೀ ಜೈನಾಪೂರ ಪರಿಚಯಿಸಿದರು. ರಾಘವೇಂದ್ರ ಶೇಟ್ ಸ್ವಾಗತಿಸಿದರು. ಅರ್ಚನಾ ಪೂಜಾರ ವಂದಿಸಿದರು ಮತ್ತು ಪ್ರಿಯಾ ಬೀಳಗಿ ನಿರೂಪಿಸಿದರು.

Share this article