ಹಾವೇರಿ: ಇತ್ತೀಚಿಗೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ಹಾಗೂ ಬಾಲ್ಯವಿವಾಹದಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಬಾಲ್ಯ ವಿವಾಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾವ್ದಾರಿಯಾಗಿದೆ ಎಂದು ಶಿಗ್ಗಾಂವಿ ತಹಸೀಲ್ದಾರ್ ಸಂತೋಷ ಹಿರೇಮಠ ಹೇಳಿದರು.
ಶಿಗ್ಗಾಂವಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಗುರುವಾರ ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಶಿಗ್ಗಾಂವಿ ತಹಸೀಲ್ದಾರ್ ಕಚೇರಿ ಸಹಯೋಗದಲ್ಲಿ ಆಯೋಜಿಸಲಾದ ಬಾಲ್ಯವಿವಾಹ ನಿಷೇಧ ಕುರಿತ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಪೊಕ್ಸೋ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಹೆಣ್ಣು ಮಕ್ಕಳ ಉನ್ನತ ಶಿಕ್ಷಣದ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಿ. ವಿಶ್ವನಾಥ ಮಾತನಾಡಿ, ಅನೇಕ ಕಾರಣಗಳಿಂದ ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಬಾಲ್ಯವಿವಾಹ ಮಾಡಲಾಗುತ್ತಿದೆ. ಇದರಿಂದ ಅನೇಕ ತೊಂದರೆ ಅನುಭವಿಸಬೇಕಾಗಿದೆ. ಹೆಣ್ಣು ಮಗುವಿನ ಶಿಕ್ಷಣಕ್ಕೆ ಮಹತ್ವ ನೀಡುವ ಮೂಲಕ ಬಾಲ್ಯ ವಿವಾಹ ತಡೆಗೆ ಸಹಕಾರ ನೀಡಬೇಕು ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಣೇಶ ಲಿಂಗನಗೌಡ್ರ ಮಾತನಾಡಿ, ತಾಯಂದಿರ ಸಭೆಯಲ್ಲಿ ಬಾಲ್ಯವಿವಾಹ ಹಾಗೂ ಪೊಕ್ಸೋ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಲಾಗಿದೆ. ತಮ್ಮ ಅಕ್ಕಪಕ್ಕದಲ್ಲಿ ಇಂತಹ ಪ್ರಕರಣಗಳು ಕಂಡುಬಂದರೆ ಮಕ್ಕಳ ಸಹಾಯವಾಣಿ-೧೦೯೮ಕ್ಕೆ ಕರೆ ಮಾಡಲು ತಿಳಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆರು, ಮೇಲ್ವಿಚಾರಕಿಯರು, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿ, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ಭಾಗವಹಿಸಿದ್ದರು.