ಮಾನವ ಕಳ್ಳ ಸಾಗಾಣಿಕೆ ತಡೆ ಪ್ರತಿಯೊಬ್ಬರ ಜವಾಬ್ದಾರಿ

KannadaprabhaNewsNetwork |  
Published : Jul 31, 2024, 01:06 AM IST
ಕಾರ್ಯಕ್ರಮದಲ್ಲಿ ನ್ಯಾ. ಬಸವರಾಜ ಮಾತನಾಡಿದರು. | Kannada Prabha

ಸಾರಾಂಶ

ಮಾನವ ಕಳ್ಳ ಸಾಗಾಣಿಕೆಗೆ ಬಡತನ, ಹೆಚ್ಚುತ್ತಿರುವ ವಲಸೆ, ಕುಟುಂಬದ ಸಮಸ್ಯೆ ಮೂಲ ಕಾರಣ

ಗದಗ: ಮಾನವ ಕಳ್ಳ ಸಾಗಾಣಿಕೆ ಒಂದು ಸಾಮಾಜಿಕ ಪಿಡುಗಾಗಿದ್ದು, ಇದನ್ನು ತಡೆಗಟ್ಟುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಂಯುಕ್ತಾಶ್ರಯದಲ್ಲಿ ನಡೆದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನವ ಕಳ್ಳ ಸಾಗಾಣಿಕೆಗೆ ಬಡತನ, ಹೆಚ್ಚುತ್ತಿರುವ ವಲಸೆ, ಕುಟುಂಬದ ಸಮಸ್ಯೆ ಮೂಲ ಕಾರಣಗಳಾಗಿವೆ. ಸಂವಿಧಾನದ ಶಿಲ್ಪಿ ಡಾ.ಅಂಬೇಡ್ಕರ್ ಮಹಿಳೆ ಮತ್ತು ಮಕ್ಕಳು ಸುಶಿಕ್ಷಿತರಾದರೆ ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದ್ದರು.

ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವುದು ವಿವಿಧ ಇಲಾಖೆಗಳ ಕರ್ತವ್ಯವಲ್ಲದೇ ಸಮಾಜದ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯು ಕೂಡ ಆಗಿದೆ. ಲೈಂಗಿಕ ಶೋಷಣೆ, ಮಕ್ಕಳ ಭಿಕ್ಷಾಟನೆ, ಜೀತಕ್ಕಾಗಿ, ಬಾಲಕಾರ್ಮಿಕತೆ, ಅಂಗಾಂಗ ಕಸಿಗಾಗಿ, ಬಾಲ್ಯ ವಿವಾಹ ಮುಂತಾದ ಕಾರಣಗಳಿಗಾಗಿ ಮಾನವ ಕಳ್ಳ ಸಾಗಾಣಿಕೆ ಮಾಡಲಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಮೋಸ ಮಾಡಿ ಪಾಲಕರಿಂದ ಬೇರ್ಪಡಿಸಿ ನಂತರ ಅವರನ್ನು ವೇಶ್ಯಾವಾಟಿಕೆಗೆ ತಳ್ಳುವುದು ಹಾಗೂ ಮಕ್ಕಳನ್ನು ಅಪಹರಿಸಿ ಭಿಕ್ಷಾಟನೆಗೆ ಕಳುಹಿಸುವುದು ಇವೆಲ್ಲ ಮಾನವ ಕಳ್ಳ ಸಾಗಾಣಿಕೆಗಳಾಗಿವೆ. ಪ್ರಸ್ತುತ ಕಾಲದಲ್ಲಿ ಬಡತನವೊಂದೇ ಇದಕ್ಕೆ ಕಾರಣವಾಗಿರುವುದಿಲ್ಲ ಅದರೊಂದಿಗೆ ಅರಿವಿನ ಅಥವಾ ಜಾಗೃತಿಯ ಕೊರತೆ ಮುಖ್ಯವಾಗಿದೆ. ಆದ ಕಾರಣ ಕಾಲೇಜು ಯುವತಿಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಯಾವುದೇ ಕಾರಣಕ್ಕೂ ಯಾರಿಂದಲೂ ಪ್ರಲೋಭನೆಗೆ ಒಳಗಾಗಬಾರದು, ಮೊಬೈಲ್‍ನ ಮುಖಾಂತರ ಆಕರ್ಷಣೆಗೆ ಮತ್ತು ಆಸ್ತಿ ಅಮಿಷಗಳಿಗೆ ಒಳಗಾಗಿ ಮೋಸ ಹೋಗಬಾರದು. ಮಾನವ ಕಳ್ಳ ಸಾಗಾಣಿಕೆ ತಡೆಗಾಗಿ ತಮ್ಮ ಸುತ್ತಮುತ್ತ ಅರಿವು ಮೂಡಿಸುವುದು ಮುಖ್ಯವಾಗಿದೆ ಎಂದರು.

ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಮಾತನಾಡಿ, ಮಹಿಳೆ ಮತ್ತು ಮಕ್ಕಳನ್ನು ಕಳ್ಳತನ ಮಾಡಿ ಹೊರದೇಶಕ್ಕೆ ಕರೆದುಕೊಂಡು ಹೋಗುವುದು, ಅನೈತಿಕ ಕಾರ್ಯಗಳಿಗೆ ಬಳಸುವುದು, ಮಕ್ಕಳಿಗೆ ಭಿಕ್ಷಾಟನೆಯಲ್ಲಿ ತೊಡಗಿಸುವುದು ಹಾಗೂ ಅಪಾಯಕಾರಿ ಕಾರ್ಖಾನೆಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ತೊಡಗಿಸುವುದು ಬಂದ ಹಣ ವಸೂಲು ಮಾಡುವುದು ಇವೆಲ್ಲವುಗಳು ಮಾನವ ಕಳ್ಳ ಸಾಗಾಣಿಕೆಯ ಮುಖ್ಯ ಉದ್ದೇಶವಾಗಿದೆ. ಇದನ್ನು ತಡೆಗಟ್ಟಲು ಎಲ್ಲ ಇಲಾಖೆಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಹಾಗೂ ಟಾಸ್ಕ್ ಫೋರ್ಸ ಸಮಿತಿ ರಚನೆ ಮಾಡಿಕೊಂಡು ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಪ್ರತಿ ಎರಡು ತಿಂಗಳಿಗೊಮ್ಮೆ ಸಭೆಯ ನಡೆಸಿ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಮಂಜುನಾಥ ಅಸೂಟಿ ಮಾತನಾಡಿ, ಮಾನವ ಕಳ್ಳಸಾಗಣೆಯು ಹಿಂದಿನ ಕಾಲದಿಂದಲೂ ಜಾರಿಯಲ್ಲಿದೆ, ಇದೊಂದು ಸಂಘಟಿತವಾಗಿ ಮಾಡುವ ಅಪರಾಧವಾಗಿದ್ದು ಮಾರುಕಟ್ಟೆಯಲ್ಲಿ ಜಾನುವಾರು ಮಾರಾಟದಂತೆ ಮನುಷ್ಯರನ್ನು ಬಹಿರಂಗವಾಗಿ ಮಾರಲಾಗುತ್ತದೆ. ಆಧುನಿಕ ಕಾಲದಲ್ಲಿ ಮಾನವ ಕಳ್ಳ ಸಾಗಣೆ ಮಾಡಿ ಮಸಾಜ್ ಪಾರ್ಲರ್, ಬಾರ್, ಪಬ್, ಗಣಿಗಾರಿಕೆ, ಕೃಷಿ ಚಟುವಟಿಕೆಗಳಾದ ಕಾಫಿ, ರಬ್ಬರ್ ಎಸ್ಟೇಟ್, ಕೆಲಸಗಳಲ್ಲಿ ಅಪಾಯಕಾರಿ ಕ್ಷೇತ್ರಗಳಲ್ಲಿ ಬಳಕೆ ಮಾಡುತ್ತಾರೆ ಮತ್ತು ಕಾನೂನು ಬಾಹಿರವಾಗಿ ಇಚ್ಚೆ ವಿರುದ್ಧವಾಗಿ ಬಲವಂತವಾಗಿ ಗೌಪ್ಯ ಸ್ಥಳಕ್ಕೆ ಸ್ಥಳಾಂತರಿಸಿ ಲೈಂಗಿಕವಾಗಿ ಅಶ್ಲೀಲವಾಗಿ ಬಳಸಿಕೊಳ್ಳುತ್ತಾರೆ. ಮಾನವ ಕಳ್ಳಸಾಗಣೆಗೆ ಹೆಚ್ಚಾಗಿ ಹದಿಹರೆಯರು, ವಿಧವೆಯರು, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ, ಅನಕ್ಷರಸ್ಥರು, ನಿರುದ್ಯೋಗಿಗಳು, ಸೇರಿದಂತೆ ಇಂದಿನ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರನ್ನು ನಂಬಿ ಬಲಿಪಶುಗಳಾಗುತ್ತಾರೆ ಎಂದರು.

ಮಕ್ಕಳು ಯಾವುದೇ ರೀತಿಯ ತೊಂದರೆಗೊಳಗಾದರೆ ಮಕ್ಕಳ ಸಹಾಯವಾಣಿ ಸಂಖ್ಯೆ 1098, ಮಾನವ ಹಕ್ಕುಗಳ ಆಯೋಗ ಸಹಾಯವಾಣಿ 18004252333, ಮಹಿಳಾ ಸಹಾಯವಾಣಿ 181, ಕಾರ್ಮಿಕ ಸಹಾಯವಾಣಿ 155214, ತುರ್ತು ಸ್ಪಂದನ ಸಹಾಯವಾಣಿ 112 ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಈ ವೇಳೆ ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ. ಪಲ್ಲೇದ ಮಾತನಾಡಿದರು. ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು ಮಕ್ಕಳ ರಕ್ಷಣಾ ಘಟಕದ ಮಲ್ಲಪ್ಪ ಹೊಸಳ್ಳಿ ಪ್ರತಿಜ್ಞಾ ವಿಧಿ ಬೋಧಿಸಿದರು. ಮಹಿಳಾ ಅಭಿವೃದ್ಧಿ ಅಧಿಕಾರಿ ಕಮಲಾ ಬೇಟಿ ಬಚಾವೋ ಬೇಟಿ ಪಢಾವೋ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಮಕ್ಕಳ ರಕ್ಷಣಾ ಘಟಕದ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ಮಾನವ ಕಳ್ಳ ಸಾಗಾಣಿಕೆಗೆ ಒಳಗಾಗಿ ಬಿಡುಗಡೆ ಹೊಂದಿದ ಸಿದ್ಧಪ್ಪ ಅವರು ತಮ್ಮ ಅನುಭವ ಕಾರ್ಯಕ್ರಮದಲ್ಲಿ ಹಂಚಿಕೊಂಡರು.

ಜಿಪಂ ಸಿಇಒ ಭರತ್.ಎಸ್., ಉಪವಿಭಾಗಾಧಿಕಾರಿ ಗಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ವಕೀಲರ ಸಂಘದ ಅಧ್ಯಕ್ಷ ಎಂ.ಐ. ಹಿರೇಮನಿ ಪಾಟೀಲ, ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ. ಕುರ್ತಕೋಟಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ ಇತರರು ಇದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ.ಎಂ ಸ್ವಾಗತಿಸಿದರು. ಮಲ್ಲಪ್ಪ ಹೊಸಳ್ಳಿ ನಿರೂಪಿಸಿದರು. ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಫೀಕಾ ಹಳ್ಳೂರ ವಂದಿಸಿದರು.

PREV

Recommended Stories

ಧರ್ಮಸ್ಥಳ ಕಾಡಲ್ಲಿ ಅಸ್ಥಿಪಂಜರ: ಇದು ದೂರುದಾರ ತೋರಿಸಿದ್ದಲ್ಲ
ಕೆಆರ್‌ಎಸ್‌ ಕಟ್ಟಿಸಿದ್ದೇ ಟಿಪ್ಪು ಅಂತ ಹೇಳಿಲ್ಲ : ಮಹದೇವಪ್ಪ