ಶೈಕ್ಷಣಿಕ ಜೀವನಕ್ಕೆ ಪ್ರಾಥಮಿಕ ಶಿಕ್ಷಣವೇ ಬುನಾದಿ

KannadaprabhaNewsNetwork | Published : Feb 9, 2025 1:16 AM

ಸಾರಾಂಶ

ದೇಶದ ಉಜ್ವಲ ಭವಿಷ್ಯವಾಗಿರುವ ವಿದ್ಯಾರ್ಥಿ ಸಮೂಹಕ್ಕೆ ಗುಣಮಟ್ಟದ ಶಿಕ್ಷಣ ಜತೆಗೆ ಸಂಸ್ಕಾರದ ಮಹತ್ವ ತಿಳಿಸುವ ಕಾರ್ಯ ಎಷ್ಟು ಮುಖ್ಯವೋ ತಂತ್ರಜ್ಞಾನದ ಸಮರ್ಥ ಬಳಕೆಯೊಂದಿಗೆ ಶಿಕ್ಷಣ ನೀಡುವುದು ಸಹ ಮುಖ್ಯವಾಗಿದೆ.

ಗಜೇಂದ್ರಗಡ: ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಪ್ರಾಥಮಿಕ ಶಿಕ್ಷಣವೇ ಬುನಾದಿಯಾಗಿದ್ದು, ಶಿಕ್ಷಕರು ಮತ್ತು ಪಾಲಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಚಲನಚಿತ್ರ ನಟ ಶ್ರೀನಗರ ಕಿಟ್ಟಿ ಹೇಳಿದರು.

ಸ್ಥಳೀಯ ಜಿ.ಕೆ. ಬಂಡಿ ಗಾರ್ಡನ್‌ನಲ್ಲಿ ನಡೆದ ಬ್ರೈಟ್ ಬಿಗನಿಂಗ್ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ ೨ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೇಶದ ಉಜ್ವಲ ಭವಿಷ್ಯವಾಗಿರುವ ವಿದ್ಯಾರ್ಥಿ ಸಮೂಹಕ್ಕೆ ಗುಣಮಟ್ಟದ ಶಿಕ್ಷಣ ಜತೆಗೆ ಸಂಸ್ಕಾರದ ಮಹತ್ವ ತಿಳಿಸುವ ಕಾರ್ಯ ಎಷ್ಟು ಮುಖ್ಯವೋ ತಂತ್ರಜ್ಞಾನದ ಸಮರ್ಥ ಬಳಕೆಯೊಂದಿಗೆ ಶಿಕ್ಷಣ ನೀಡುವುದು ಸಹ ಮುಖ್ಯವಾಗಿದೆ. ಹೀಗಾಗಿ ಶಿಕ್ಷಕರು ಮತ್ತು ಪಾಲಕರು ವಿದ್ಯಾರ್ಥಿಯ ಶೈಕ್ಷಣಿಕ ಸರ್ವಾಂಗೀಣ ಅಭಿವೃದ್ಧಿಗೆ ಪಾಠ, ಆಟ ಹಾಗೂ ನಮ್ಮ ನೆಲದ ಮಹತ್ವ ಸಾರುವ ಕಥೆ ತಿಳಿ ಹೇಳುವ ಕಾರ್ಯ ಮಾಡಬೇಕಿದೆ ಎಂದ ಅವರು, ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಮನಸ್ಸು ಅರಳುವ ಹೂವಿನಂತಿರುತ್ತದೆ, ಅವರಿಗೆ ಪ್ರೀತಿ ಹಾಗೂ ಕಾಳಜಿಯಿಂದ ಸರಿ, ತಪ್ಪುಗಳ ತಿಳಿವಳಿಕೆ ಜತೆಗೆ ಪಾಠ, ಪ್ರವಚನ ನಡೆಸಿ ಸಮಾಜಕ್ಕೆ ದೊಡ್ಡ ಕೊಡುಗೆಯಾಗಿ ವಿದ್ಯಾರ್ಥಿಗಳನ್ನು ನೀಡಿ ಎಂದರು.

ಸಚಿವ ಸಂತೋಷ ಲಾಡ್ ಮಾಧ್ಯಮ ಸಲಹೆಗಾರ ಇರ್ಫಾನ್ ಮುದಗಲ್ ಮಾತನಾಡಿ, ಪಟ್ಟಣದಲ್ಲಿ ಶೈಕ್ಷಣಿಕ ಅಭಿವೃದ್ಧಿ ದೃಷ್ಠಿಯಿಂದ ಆರಂಭವಾಗಿರುವ ಬ್ರೈಟ್ ಬಿಗನಿಂಗ್ ಪೂರ್ವ ಪ್ರಾಥಮಿಕ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಈಗಾಗಲೇ ನೂರಕ್ಕೂ ಅಧಿಕ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಿಕ್ಷಕರ ಕಾರ್ಯ ಪ್ರಶಂಸನೀಯ. ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಮ್ಮರವಾಗಿ ಈ ಭಾಗದಲ್ಲಿ ದೊಡ್ಡ ಶಿಕ್ಷಣ ಸಂಸ್ಥೆಯಾಗಿ ಬೆಳೆದು ವಿದ್ಯಾರ್ಥಿಗಳ ಬಾಳಿಗೆ ಹೊಸ ಆಶಾಕಿರಣವಾಗಿ ನಿಲ್ಲಲ್ಲಿ ಎಂದರು.

ಈ ವೇಳೆ ಸಂಜು ವೆಡ್ಸ್ ಗೀತಾ-೨ ಚಿತ್ರದ ಟ್ರೈಲರ್ ಬಿಡುಗಡೆ ಬಳಿಕ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮೆಡಲ್ ಹಾಗೂ ಪ್ರಶಸ್ತಿ ಪ್ರತ ವಿತರಣೆ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಚಿತ್ರ ನಿರ್ಮಾಪಕ ಚಲವಾದಿ ಕುಮಾರ, ನಿರ್ದೇಶಕ ನಾಗಶೇಖರ, ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಣ್ಣ, ಮುಖಂಡ ಅಂದಪ್ಪ ಸಂಕನೂರ, ಆರ್.ಜಿ.ಮ್ಯಾಕಲ್, ಕೆ.ಎಸ್. ವನ್ನಾಲ, ಶಾಲೆಯ ಶೀತಲ್ ಓಲೆಕಾರ, ನಾಜಿಯಾ ಮುದಗಲ್, ಕಿರಣ ನಿಡಗುಂದಿ, ವಿಜಯಲಕ್ಷ್ಮೀ ಎಂ, ನಾಗರಾಜ ಹೊಸಮನಿ, ಗುಲಾಂ ಹುನಗುಂದ, ರಾಜು ನಂದಿಹಾಳ, ಕಿರಣ ಬಡಿಗೇರ, ಭಾಷಾ ಸಾಂಗ್ಲೀಕರ, ಕಳಕು ಚನ್ನಿ, ರಫೀಕ್ ಮ್ಯಾಗೇರಿ, ವೀರೇಶ ಹುನಗುಂದ ಇದ್ದರು.

Share this article