ಕನ್ನಡಪ್ರಭ ಚಿಕ್ಕಮಗಳೂರು:
ಪ್ರಣಾಳಿಕೆ ಮುಂದಿಟ್ಟು, ಅವರ ಸಾಧನೆಯನ್ನು ಬಿಂಬಿಸುವ ಬದಲು ಪ್ರಧಾನಿಯವರು ಕ್ಷುಲಕ ವಿಚಾರವನ್ನು ಮುಂದಿಟ್ಟು ಈ ಚುನಾವಣೆ ನಡೆಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಹಾಗೂ ವಿಪರ್ಯಾಸ ಸಂಗತಿ ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಮುಖಂಡ ಕೆ.ಎಲ್. ಅಶೋಕ್ ಹೇಳಿದರು.ಚುನಾವಣಾ ಆಯೋಗದ ಪಕ್ಷಪಾತ ಧೋರಣೆ ಖಂಡಿಸಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗುವಂತೆ ಒತ್ತಾಯಿಸಿ ಎದ್ದೇಳು ಕರ್ನಾಟಕ ಸಂಘಟನೆ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮತದಾರರ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಪ್ರಧಾನಿಯವರು, ಈ ದೇಶದ ಪ್ರಮುಖ ಸಮಸ್ಯೆಗಳ ಬಗ್ಗೆ ಮಾತನಾಡದೇ ಆ ಸಮಸ್ಯೆಗಳನ್ನು ಪಲ್ಲಟ ಮಾಡುವಂತಹ ಕೀಳು ದರ್ಜೆಯ ಭಾಷಣವನ್ನು ಇಡೀ ದೇಶದಲ್ಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಮತದಾರರು ಜಾಗೃತಗೊಂಡಿದ್ದಾರೆ. ಶೋಷಿತರು, ಬಡವರು, ಅಲ್ಪಸಂಖ್ಯಾತರು, ಮಹಿಳೆಯರು, ತುಳಿತಕ್ಕೆ ಒಳಗಾದವರು ಎಲ್ಲರೂ ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯಬೇಕು ಮತ್ತು ರಕ್ಷಿಸಲು ಪಣ ತೊಟ್ಟು ಸಂವಿಧಾನದ ಪರ, ಪ್ರಜಾಪ್ರಭುತ್ವದ ಪರ ಮತದಾನ ಮಾಡಿದ್ದಾರೆ ಎಂದರು.
ಇತ್ತೀಚೆಗೆ ನಡೆದ ಲೋಕಸಭೆಯ ವಿವಿಧ ಹಂತದ ಚುನಾವಣೆಗೆ ಸಂಬಂಧಿಸಿದಂತೆ ಮತದಾನದ ಬಗ್ಗೆ ಸರಿಯಾದ ಮಾಹಿತಿ ಕೇಂದ್ರ ಚುನಾವಣಾ ಆಯೋಗ ನೀಡುತ್ತಿಲ್ಲ. ಈ ಸಂಬಂಧ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು, ಇಡೀ ಆಡಳಿತ ವರ್ಗ ಇದರ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದೆ. ಈ ಚುನಾವಣೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂಬ ಅನುಮಾನ ಮೂಡುತ್ತಿದೆ ಎಂದರು. 21 ರಂದುಯಈ ಬಾರಿಯ ಲೋಕ ಚುನಾವಣೆ ಸಾಮಾನ್ಯವಾದುದಲ್ಲ, ಸರ್ವಾಧಿಕಾರಿಯ ಸೋಲು ಮತ್ತು ಗೆಲುವಿನ ಪ್ರಶ್ನೆಯಾಗಿದೆ. ಚುನಾವಣಾ ಫಲಿತಾಂಶವನ್ನು ಪಾರದರ್ಶಕವಾಗಿ ಪ್ರಕಟಿಸಬೇಕು, ಚುನಾವಣೆ ನಡೆಯಬೇಕು, ಹಾಗೆ ಆದಲ್ಲಿ ನಮ್ಮ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆಯ ಕೆಲಸ ಆಗುತ್ತೆ ಎಂದರು.
ಸಂಘಟನೆಯ ಮುಖಂಡ ಗೌಸ್ ಮೊಹಿಯುದ್ದೀನ್ ಮಾತನಾಡಿ, ಚುನಾವಣಾ ಆಯೋಗ ಪಾರದರ್ಶಕವಾಗಿ ಕೆಲಸ ಮಾಡುತ್ತಿಲ್ಲ. ಅಭಿವೃದ್ಧಿ ಹೆಸರಲ್ಲಿ ಮತಯಾಚನೆ ಮಾಡಿ ಗೆದ್ದು ಬರುವಂತಹ ಸರ್ಕಾರ ಜಾತಿ, ಧರ್ಮದ ಮೇಲೆ ಕೋಮುವಾದವನ್ನು ಬಿತ್ತಿ ಆ ಮೂಲಕ ಮತಗಳನ್ನು ಪಡೆಯುವ ಹುನ್ನಾರವನ್ನು ಮಾಡುತ್ತಿದೆ. ಇದಕ್ಕೆ ಮೋದಿ ಹೊರತಾಗಿಲ್ಲ ಎಂದು ಆರೋಪಿಸಿದರು.ಮುಸ್ಲಿಮರು ಈ ದೇಶಕ್ಕೆ ಮಾರಕ ಅವರಿಂದ ಹಿಂದುಗಳಿಗೆ ತೊಂದರೆಯಾಗುತ್ತೆ, ಹಿಂದು ಹೆಣ್ಣು ಮಕ್ಕಳ ತಾಳಿಗೆ ಗಂಡಾಂತರ ಬರಬಹುದೆಂದು ಹೇಳಿದ್ದಾರೆ. ಈ ಸಂಬಂಧ ಅವರ ವಿರುದ್ಧ ದೂರು ನೀಡಿದ್ದರೂ ಕೂಡ ಎಫ್‌ಐಆರ್ ಮಾಡಿಲ್ಲ, ಅನಂತಕುಮಾರ್ ಹೆಗ್ಡೆ ಅವರನ್ನು ಬಂಧಿಸಬೇಕೆಂದು ದೂರು ನೀಡಿದರೂ ಕೂಡ ಕೆಲಸ ಆಗಿಲ್ಲ. ವಾರಣಾಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧೆ ಮಾಡಲು ನಾಮಪತ್ರ ಸಲ್ಲಿಸಲು ಬಿಡಲಿಲ್ಲ, ಹೀಗೆ ಎದುರಾಳಿಯನ್ನು ಬಗ್ಗು ಬಡಿಯುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಟಿ.ಎಲ್. ಗಣೇಶ್, ಮೋಹನ್‌ಕುಮಾರ್, ಹಸನಬ್ಬ, ಕೂದುವಳ್ಳಿ ಮಂಜುನಾಥ್, ಹೊನ್ನಪ್ಪ, ಮೇಘಾ ಮಲ್ನಾಡ್ ಹಾಗೂ ಕಾರ್ಯಕರ್ತರು ಹಾಜರಿದ್ದರು. 21 ರಂದು ಗಾಂಧಿ ಭವನದಲ್ಲಿ ಸಭೆ: ಮತ ಎಣಿಕೆ ದಿನದಂದು ಗಂಡಾಂತರ ತರುವ ನಿಟ್ಟಿನಲ್ಲಿ ಕೇಂದ್ರದ ಗೃಹ ಸಚಿವ ಅಮಿತ್ ಶಾ, ಮೋದಿಯವರ ಮಾತು ಅನುಮಾನಕ್ಕೆ ಕಾರಣವಾಗಿದೆ. ಹಾಗಾಗಿ ಮೇ 21 ಬೆಂಗಳೂರಿನ ಗಾಂಧಿ ಭವನದಲ್ಲಿ ಸಭೆ ಕರೆಯಲಾಗಿದೆ. ಇದರಲ್ಲಿ ನಿವೃತ್ತ ಸೈನಿಕ ಅಧಿಕಾರಿಗಳು, ಪ್ರಗತಿಪರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.