ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರು, ಹುಬ್ಬಳ್ಳಿ, ತುಮಕೂರು, ಶಿವಮೊಗ್ಗ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ ಸೇರಿದಂತೆ ರಾಜ್ಯಾದ್ಯಂತ ಬಿಜೆಪಿ ವತಿಯಿಂದ ವಿಶೇಷ ಪೂಜೆ, ಆರೋಗ್ಯ ತಪಾಸಣೆ, ರಕ್ತದಾನ, ಅನ್ನದಾಸೋಹ, ಹಣ್ಣು ಹಂಪಲು, ಬಟ್ಟೆ, ನೋಟ್ ಪುಸ್ತಕ ವಿತರಣೆ ಸಂಭ್ರಮ ಸಡಗರದಿಂದ ನಡೆಯಿತು.ಹುಬ್ಬಳ್ಳಿಯಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೊರಕೆ ಹಿಡಿದು ಕಸಗುಡಿಸುವ ಮೂಲಕ ಸ್ವಚ್ಛತಾ ಹೀ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು. ಸೆಂಟ್ರಲ್ ಆಸ್ಪತ್ರೆ ಹುಬ್ಬಳ್ಳಿ, ಎಚ್‌ಸಿಜಿ ಕ್ಯಾನ್ಸರ್ ಸೆಂಟರ್ ಹಾಗೂ ರಾಷ್ಟ್ರೋತ್ತಾನ ರಕ್ತ ಕೇಂದ್ರದ ಸಹಯೋಗದೊಂದಿಗೆ ವೈದ್ಯಕೀಯ ಶಿಬಿರವೂ ನಡೆಯಿತು.
ತುಮಕೂರಿನಲ್ಲಿ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯಸಚಿವ ವಿ.ಸೋಮಣ್ಣ ಮಾತನಾಡಿ, ವಿಶ್ವದ ಭೂಪಟದಲ್ಲಿ ಭಾರತದ ಏಕತೆ, ಸಾರ್ವಭೌಮತೆ ಎತ್ತಿ ಹಿಡಿಯುವಲ್ಲಿ ಹಾಗೂ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವಲ್ಲಿ ಪ್ರಧಾನಿ ಮೋದಿಯವರ ಶ್ರಮ, ಕೊಡುಗೆ ಅಪಾರ ಎಂದರು.ಶಿವಮೊಗ್ಗದಲ್ಲಿ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಪಾಲ್ಗೊಂಡಿದ್ದರು. ಅನ್ನ ಸಂತರ್ಪಣೆ ನಡೆಯಿತು. ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ 68ನೇ ಬಾರಿ ರಕ್ತದಾನ ಮಾಡಿದರು.
ಚಿಕ್ಕಬಳ್ಳಾಪುರದಲ್ಲಿ ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ನಮೋ ಯುವ ರನ್ ವಾಕಥಾನ್‌ಗೆ ಚಾಲನೆ ನೀಡಲಾಯಿತು. ಚಾಮರಾಜನಗರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಪೌರಕಾರ್ಮಿಕರಿಗೆ ಸನ್ಮಾನ ಮತ್ತು ಬಟ್ಟೆ ವಿತರಣೆ, ಶಾಲಾ ಮಕ್ಕಳಿಗೆ ಪೆನ್ನು-ಪುಸ್ತಕ, ಸಮವಸ್ತ್ರ ವಿತರಣೆ, ಸಸಿ ನೆಡುವ ಕಾರ್ಯಕ್ರಮಗಳು ನಡೆದವು.ರಾಮನಗರದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಮೋದಿ ಅವರ ಭಾವಚಿತ್ರ ಹಿಡಿದು ಸಿಹಿ ಹಂಚಿ, 101 ಈಡುಗಾಯಿ ಹೊಡೆದರು. ಬೀದರ್, ಕೋಲಾರ, ಮಂಡ್ಯದಲ್ಲೂ ರಕ್ತದಾನ ನಡೆಯಿತು.