ಕಾರವಾರ: ವಿಧಾನಸಭಾ ಚುನಾವಣೆಗೂ ಮೊದಲು ಐದು ಗ್ಯಾರಂಟಿ ಜಾರಿಗೆ ತಲುವುದಿಲ್ಲ. ಇದರಿಂದ ಅರ್ಥ ವ್ಯವಸ್ಥೆ ಹಾಳಾಗಬಹುದು ಎಂದು ಬಿಜೆಪಿ ಟೀಕೆ, ಚೇಷ್ಟೆ ಮಾಡಿತ್ತು. ಗ್ಯಾರಂಟಿ ಜಾರಿಗೆಯಾಗಿ ಜನರು ಕಾಂಗ್ರೆಸ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಕ್ಕೆ ಬಿಜೆಪಿ ಮೋದಿ ಕಿ ಗ್ಯಾರಂಟಿ ಎಂದು ನಮ್ಮ ಯೋಜನೆಯನ್ನು ಪ್ರಣಾಳಿಕೆಯಲ್ಲಿ ತರುತ್ತಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ ಲೇವಡಿ ಮಾಡಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಷ್ಟಪಟ್ಟು ಗ್ಯಾರಂಟಿ ಯೋಜನೆಗೆ ವ್ಯವಸ್ಥೆ ಮಾಡುತ್ತಿದೆ. ಗ್ಯಾರಂಟಿ ಬಂದ್ ಆಗಬೇಕು. ಸರ್ಕಾರದ ಹೆಸರು ಹಾಳಾಗಬೇಕು ಎಂದು ಬಿಜೆಪಿಗರು ಹೊಂಚು ಹಾಕಿದ್ದಾರೆ ಎಂದು ಆರೋಪಿಸಿದರು.
೧೦ ವರ್ಷದ ಹಿಂದೆ ಅಧಿಕಾರಕ್ಕೆ ಬರುವಾಗ ಮೋದಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ೧೦ ವರ್ಷದಲ್ಲಿ ಎಷ್ಟು ಉದ್ಯಿಗ ಸೃಷ್ಟಿ ಆಗಬೇಕಿತ್ತು. ಆಗಿದೆಯೇ? ಮೋದಿ ನೀಡಿದ ಕೊಡುಗೆಯಿಂದ ಪದವೀಧರರು ಮನೆಯಲ್ಲಿದ್ದಾರೆ. ಕಷ್ಟಪಟ್ಟು ಓದಿಸಿದ ತಂದೆ- ತಾಯಿ ಏನು ಮಾಡಬೇಕು ಎಂದು ಕಿಡಿಕಾರಿದರು.ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ ಮಾತನಾಡಿ, ಬಿಜೆಪಿಯವರು ೨೦೧೯ರಲ್ಲಿ ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದಿದ್ದರು. ದ್ವಿಗುಣ ಮಾಡುವುದಿರಲಿ, ರೈತರನ್ನು ಸಾವಿನ ಮನೆಗೆ ಕಳಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತು ಪ್ರಣಾಳಿಕೆ ಮಾಡಿಲ್ಲ. ದೇಶದ ಉದ್ದಗಲಕ್ಕೂ ಪಾದಯಾತ್ರೆ ಮಾಡಿ ಪ್ರಣಾಳಿಕೆ ತಯಾರಿಸಿದ್ದಾರೆ. ಮಹಿಳೆಯರು, ಯುವಕರು, ಕಾರ್ಮಿಕರು, ರೈತರನ್ನು ಒಳಗೊಂಡು ಎಲ್ಲ ವರ್ಗದವರಿಗೂ ನ್ಯಾಯ ಒದಗಿಸಿದ್ದಾರೆ ಎಂದರು.
ನಗರದ ಮಾಲಾದೇವಿ ಕ್ರೀಡಾಂಗಣದಿಂದ ಸವಿತಾ, ಸುಭಾಸ್ ಸರ್ಕಲ್ ಮೂಲಕ ಎಂಜಿ ರಸ್ತೆಯವರೆಗೆ ಮೆರವಣಿಗೆ ನಡೆಸಲಾಯಿತು. ನಾಲ್ಕು ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಕಾಂಗ್ರೆಸ್ ಹಿರಿಯ ನಾಯಕ ಪಿ.ಜಿ.ಆರ್. ಸಿಂಧ್ಯ, ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ್, ಶಿರಸಿ ಶಾಸಕ ಭೀಮಣ್ಣ ನಾಯ್ಕ, ನಿವೇದಿತ್ ಆಳ್ವಾ ಮೊದಲಾದವರು ಇದ್ದರು.