ಪ್ರಧಾನಿ ಮೋದಿ ರೈತರ ಸಾಲ, ಬಡ್ಡಿ ಮನ್ನಾ ಮಾಡಲಿ: ಬಸವರಾಜ ರಾಯರಡ್ಡಿ

KannadaprabhaNewsNetwork |  
Published : Oct 04, 2026, 02:30 AM IST
ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಜರುಗಿದ ಜನಸೇವಾ ಕಾರ್ಯಕ್ರಮದಲ್ಲಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿದರು. | Kannada Prabha

ಸಾರಾಂಶ

ಈ ಬಿಜೆಪಿಯವ್ರು ಏನೂ ಮಾಡೋಲ್ಲ, ಬಂದ್ರನಾ ಕುಂಕುಮ ಹಚ್ತಾರೆ, ಒಂದು ಕೇಸರಿ ಟವಲ್ ಹಾಕ್ತಾರಾ, ಜೈ ಶ್ರೀ ರಾಮ್, ಜೈ ಹನುಮಾನ್ ಅಂತಾರೆ, ಅಪ್ಪಿತಪ್ಪಿಯೂ ಬಸವಣ್ಣನ ಹೆಸರು ಹೇಳುವುದಿಲ್ಲ, ಶರಣರ ಹೆಸರು ಅವ್ರ ಬಾಯಲ್ಲಿ ಬರುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಕುಕನೂರು: 12 ವರ್ಷ ಆಡಳಿತ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ರೈತರ ಸಾಲ ಹಾಗೂ ಬಡ್ಡಿ ಮನ್ನಾ ಮಾಡಲಿ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಜರುಗಿದ ಜನಸೇವಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬರಗಾಲದಲ್ಲೂ ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲ ಆಗಿವೆ. ಕಾಂಗ್ರೆಸ್ ಯೋಜನೆಗಳು ಬರಗಾಲದಲ್ಲಿ ಜನರಿಗೆ ಆಸರೆ ಆಗಿವೆ. ರಾಜ್ಯದಲ್ಲಿ ₹4.20 ಲಕ್ಷ ಕೋಟಿ ಬಜೆಟ್‌ನಲ್ಲಿ ₹1.20 ಲಕ್ಷ ಕೋಟಿಯನ್ನು ನೇರವಾಗಿ ಜನರಿಗೆ ನೀಡುತ್ತಿದ್ದೇವೆ. ₹83 ಸಾವಿರ ಕೋಟಿ ಅಭಿವೃದ್ಧಿ ಕಾಮಗಾರಿಗೆ ನೀಡಿದ್ದೇವೆ. ಕೇಂದ್ರ ಸರ್ಕಾರ ಬರಗಾಲಕ್ಕೆ ₹1 ಸಹ ನೀಡುತ್ತಿಲ್ಲ. ಈ ಬಿಜೆಪಿಯವ್ರು ಏನೂ ಮಾಡೋಲ್ಲ, ಬಂದ್ರನಾ ಕುಂಕುಮ ಹಚ್ತಾರೆ, ಒಂದು ಕೇಸರಿ ಟವಲ್ ಹಾಕ್ತಾರಾ, ಜೈ ಶ್ರೀ ರಾಮ್, ಜೈ ಹನುಮಾನ್ ಅಂತಾರೆ, ಅಪ್ಪಿತಪ್ಪಿಯೂ ಬಸವಣ್ಣನ ಹೆಸರು ಹೇಳುವುದಿಲ್ಲ, ಶರಣರ ಹೆಸರು ಅವ್ರ ಬಾಯಲ್ಲಿ ಬರುವುದಿಲ್ಲ. ಯಾಕೆ ಈ ಮಾತು ಹೇಳಿದ್ದೇನೆ ಅಂದರೆ ಅವ್ರು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡ್ತಾರೆ. ನಾವೂ ಜನರ ಹೆಸರಿನಲ್ಲಿ ರಾಜಕಾರಣ ಮಾಡ್ತೇವೆ. ನಮಗೆ ಜನರೇ ದೇವರು, ಜನ ಸೇವೆಯೇ ನಮಗೆ ದೇವರ ಸೇವೆ ಎಂದರು.

ಮೋದಿ ಮೋದಿ ಅನ್ತಾರಲ್ಲ, ಈ ಮೋದಿ ಟ್ರೈನ್ ಯಾಕ್ ಪ್ರೀ ಮಾಡ್ಬಾರ್ದು, ಈ ಬಿಜೆಪಿಯವ್ರು ಸುಮ್ಮನೆ ದೂರುವ ಕೆಲಸ ಮಾಡುತ್ತಿದ್ದಾರೆ. ಬರ ಬಂದಿದೆಯಲ್ಲ, ಕೇಂದ್ರ ಸರ್ಕಾರ ರೈತರ ಸಾಲ, ಬಡ್ಡಿ ಮನ್ನಾ ಮಾಡಲಿ. ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿ ಇದ್ದಾಗ ₹73 ಸಾವಿರ ಕೋಟಿ ರೈತರ ಸಾಲ, ಬಡ್ಡಿ ಮನ್ನಾ ಮಾಡಿದರು. 12 ವರ್ಷ ಆಯ್ತು ಮೋದಿ ಪ್ರಧಾನಿ ಆಗಿ, ಒಮ್ಮೆಯಾದ್ರೂ ರೈತರ ಸಾಲ, ಬಡ್ಡಿ ಮನ್ನಾ ಮಾಡಲಿ ನೋಡೋಣ. ಬಿಜೆಪಿ ರಾಜ್ಯದಲ್ಲಿ ಅಧಿಕಾರ ಇದ್ದಾಗ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್ ಒಮ್ಮೆಯೂ ರೈತರ ಸಾಲ, ಬಡ್ಡಿ ಮನ್ನಾ ಮಾಡಿಲ್ಲ. ಹಿಂದೆ ಸಿದ್ದರಾಮಯ್ಯ, ಎಸ್.ಎಂ. ಕೃಷ್ಣ, ರಾಮಕೃಷ್ಣ ಹೆಗಡೆ,, ದೇವೇಗೌಡ ಸಿಎಂ ಇದ್ದಾಗ ಮಾಡಿದ್ದರು. ಬರ ಬಿದ್ದಿದೆ, 210 ತಾಲೂಕು ಬರ ಇದೆ. ಸುಮಾರು ₹45 ಸಾವಿರ ಕೋಟಿ ಬೆಳೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದೇವೆ. ನಾವು ಕೇಂದ್ರಕ್ಕೆ ₹4.5 ಲಕ್ಷ ಕೋಟಿ ಟ್ಯಾಕ್ಸ್ ನೀಡುತ್ತೇವೆ. ಜಿಎಸ್ಟಿ ₹2 ಲಕ್ಷ ಕೋಟಿ ಪ್ರತಿ ವರ್ಷ ಕೊಡುತ್ತೇವೆ. ಅದರಲ್ಲಿ ₹1 ಲಕ್ಷ ಕೋಟಿ ಜಿಎಸ್‌ಟಿ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ನಮಗೆ ಕೇಂದ್ರ ಸರ್ಕಾರ ಹಣ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಈ ಬಿಜೆಪಿ ಏನೂ ಕೊಡಲು ಆಗದೆ ಕುಂಕುಮ ಹಚ್ಚಿ, ಕೇಸರಿ ಶಾಲು ಹಾಕುವ ಕೆಲಸ ಮಾಡುತ್ತದೆ ಎಂದರು.

ಪ್ರಮುಖರಾದ ಯಂಕಣ್ಣ ಯರಾಶಿ, ಹನುಮಂತಗೌಡ ಚಂಡೂರು, ಸಂಗಮೇಶ ಗುತ್ತಿ, ಶಿವನಗೌಡ ದಾನರಡ್ಡಿ, ತಿಮ್ಮಣ್ಣ ಚೌಡಿ, ಶಿವಕುಮಾರ ಆದಾಪುರ, ಬಸವರಾಜ ಮಾಸೂರು, ಮಂಜುನಾಥ ಕಡೇಮನಿ, ಈರಪ್ಪ ಕುಡಗುಂಟಿ, ಕೆರಿಬಸಪ್ಪ ನಿಡಗುಂದಿ, ಅಶೋಕ ತೋಟದ, ರೆಹೆಮಾನಸಾಬ ಮಕ್ಕಪ್ಪನವರ್ ಇತರರಿದ್ದರು.

ವೋಟ್ ಹಾಕದವರನ್ನು ಲಿಸ್ಟಿನಿಂದ ತೆಗೆಸುತ್ತಿರುವ ಬಿಜೆಪಿ: ಈ ಬಿಜೆಪಿಯವ್ರು ತಮಗೆ ವೋಟ್ ಹಾಕದೆ ಇರುವವರನ್ನು ವೋಟರ್‌ ಲೀಸ್ಟ್‌ನಿಂದ ತೆಗೆಸುವ ಕೆಲಸ ಮಾಡುತ್ತಿದ್ದಾರೆ. ಮತದಾರರು ಇಲ್ಲ ಅಂತ ಅರ್ಜಿ ಕೊಡುತ್ತಿದ್ದಾರೆ. ಕಾನೂನಾತ್ಮಕವಾಗಿ ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ. ಅರ್ಜಿ ಕೊಟ್ಟವರ ಮಾಹಿತಿ ತಪ್ಪಿದ್ದರೆ ಒಂದು ವರ್ಷ ಜೈಲು ಆಗುತ್ತದೆ. ಈ ಬಿಜೆಪಿ ಕಾರ್ಯಕರ್ತರು ಅವರ ನಾಯಕರ ಮಾತು ಕೇಳಿ ಈ ರೀತಿ ಕೆಲಸ ಮಾಡಬಾರದು. ಈ ರೀತಿ ಮಾಡಲು ಹೇಳಿದ ಬಿಜೆಪಿ ನಾಯಕರು ಆರಾಮವಾಗಿ ಇರ್ತಾರೆ, ಕಾರ್ಯಕರ್ತರು ಜೈಲಿಗೆ ಹೋಗಬೇಕಾಗುತ್ತದೆ. ಕುಕನೂರಿನಲ್ಲಿ ಮುಸ್ಲಿಂ, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಜನರು ತಮಗೆ ವೋಟ್ ಹಾಕುವುದಿಲ್ಲ ಎಂದು ಅವರನ್ನು ಮತದಾರರ ಪಟ್ಟಿಯಿಂದ ತೆಗೆಯಲು ಬಿಜೆಪಿ ಕಾರ್ಯಕರ್ತರು ಅರ್ಜಿ ಕೊಟ್ಟಿದ್ದಾರೆ ಎಂದರು.

40 ದಿನದಲ್ಲಿ 20 ಹೊಸ ಯೋಜನೆ: ಉನ್ನತ ಶಿಕ್ಷಣ ಸಚಿವನಾದ 40 ದಿನದಲ್ಲಿ 20 ಹೊಸ ಯೋಜನೆಗಳು ರಾಜ್ಯದ ವಿದ್ಯಾರ್ಥಿಗಳಿಗೆ ನೀಡಿದ್ದೇನೆ. ದೀಪಿಕಾ ಯೋಜನೆಯಲ್ಲಿ 50 ಸಾವಿರ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹30 ಸಾವಿರ ವಿದ್ಯಾರ್ಥಿ ವೇತನ ನೀಡುತ್ತಿದ್ದೇವೆ. ಎಲ್ಲ ವಿವಿಯಲ್ಲಿ ಒಂದೇ ದರಪಟ್ಟಿಯಲ್ಲಿ ಮಾಕ್ಸ್ ಕಾರ್ಡ್‌ ವಿತರಣೆ ಆಗಬೇಕು. ಆ ನಿಟ್ಟಿನಲ್ಲಿ ಕಾರ್ಯ ನಡೆದಿದೆ. ಎಲ್ಲ ವಿವಿಗಳ ರೀವ್ಯೂ ಮಾಡ್ತಾ ಇದ್ದೇನೆ ಎಂದು ಸಚಿವ ರಾಯರಡ್ಡಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ
ಮೇವು ಕೊರತೆ: ರೈತರಲ್ಲಿ ಆತಂಕ