ಸಂಕಷ್ಟಕ್ಕೆ ಸ್ಪಂದಿಸದ ಪ್ರಧಾನಿ ಮೋದಿ ಮತಭಿಕ್ಷೆಗೆ ರಾಜ್ಯ ಪ್ರವಾಸ

KannadaprabhaNewsNetwork | Published : Apr 14, 2024 1:55 AM

ಸಾರಾಂಶ

ನರೇಂದ್ರ ಮೋದಿ ಆಳ್ವಿಕೆಯಲ್ಲಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇದು ಘೋಷಿತ ತುರ್ತು ಪರಿಸ್ಥಿತಿಗಿಂತಲೂ ಹೆಚ್ಚು ಅಪಾಯಕಾರಿ. ಚುನಾವಣೆ ಹೊಸ್ತಿಲಲ್ಲಿ ಮತ್ತೆ ಮತಭಿಕ್ಷೆಗಾಗಿ ಮೋದಿ ಕರ್ನಾಟಕಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಟೀಕಿಸಿದರು.

- ನರೇಂದ್ರ ಮೋದಿ ಆಳ್ವಿಕೆಯಲ್ಲಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಡಿ.ಬಸವರಾಜ ಆರೋಪ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ನರೇಂದ್ರ ಮೋದಿ ಆಳ್ವಿಕೆಯಲ್ಲಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇದು ಘೋಷಿತ ತುರ್ತು ಪರಿಸ್ಥಿತಿಗಿಂತಲೂ ಹೆಚ್ಚು ಅಪಾಯಕಾರಿ. ಚುನಾವಣೆ ಹೊಸ್ತಿಲಲ್ಲಿ ಮತ್ತೆ ಮತಭಿಕ್ಷೆಗಾಗಿ ಮೋದಿ ಕರ್ನಾಟಕಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಟೀಕಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮೃದ್ಧ ಕರ್ನಾಟಕವನ್ನು ಮೋದಿ ಅಕ್ಷರಶಃ ಕೊಳ್ಳೆ ಹೊಡೆಯುತ್ತಿದ್ದಾರೆ. ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಈ ನೆಲದಲ್ಲಿ ಹಿಜಾಬ್‌, ಹಲಾಲ್ ಸೇರಿದಂತೆ ಹತ್ತು ಹಲವಾರು ವಿಚಾರ ಇಟ್ಟುಕೊಂಡು ಶಾಂತಿ, ಸಾಮರಸ್ಯಕ್ಕೆ ಧಕ್ಕೆ ತರುವಂತಹ ಕೆಲಸ ಬಿಜೆಪಿ ಮಾಡಿದೆ. ಈಗ ಬಿಜೆಪಿಗೆ ಜಾತ್ಯತೀತತೆ ಹೆಸರಿಟ್ಟುಕೊಂಡ ರಾಜ ಮನೆತನದಂತೆ ತಂದೆ, ಮಕ್ಕಳು, ಮೊಮ್ಮಕ್ಕಳಷ್ಟೇ ಅಧಿಕಾರಕ್ಕೆ ಯೋಗ್ಯರೆಂಬ ಅಲಿಖಿತ ನಿಯಮದ ಜೆಡಿಎಸ್‌ ಸಹ ಅದೇ ಹಾದಿ ತುಳಿದಿದೆ ಎಂದು ಆರೋಪಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಹಲವಾರು ಕಡೆ ಸುತ್ತಾಡಿದರೂ, ಸಾಕಷ್ಟು ರೋಡ್ ಶೋಗಳನ್ನು ಮಾಡಿದರೂ ಪ್ರಜ್ಞಾವಂತ ಮತದಾರರಾದ ಕನ್ನಡಿಗರು ಬಿಜೆಪಿಗೆ ಪಾಠ ಕಲಿಸಿದರು. ಇದೇ ಸೋಲಿನ ಸೇಡಿನ ಪ್ರತೀಕವಾಗಿ ರಾಜ್ಯಕ್ಕೆ ನೀಡಬೇಕಾದ ಅನುದಾನ ಪ್ರಧಾನಿ ನೀಡುತ್ತಿಲ್ಲ. ಇಡೀ ರಾಜ್ಯವೇ ಬರದಿಂದ ತತ್ತರಿಸಿದೆ. ಬರ ಪರಿಹಾರಕ್ಕೂ ಮೋದಿ ಸರ್ಕಾರ ಪರಿಹಾರದ ಹಣ ನೀಡಿಲ್ಲ. ಜಿಎಸ್‌ಟಿ ಹೆಸರಿನಲ್ಲಿ ರಾಜ್ಯಗಳ ಸುಲಿಗೆ ಮಾಡುತ್ತಿರುವ ನರೇಂದ್ರ ಮೋದಿ ಸರ್ಕಾರವು, ಅದರಲ್ಲಿ ರಾಜ್ಯದ ಪಾಲನ್ನು ಕೇಳಿದರೆ ದೇಶದ್ರೋಹಿಗಳೆಂದು ಹೀಗಳೆಯುತ್ತಿದೆ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ, ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಅವರ ಭಾಷಣ ಕೇಳಿ, ಮೋದಿಗೆ ಮತ ಹಾಕಿ ಎನ್ನುತ್ತಿದ್ದಾರೆ. 26 ವರ್ಷಗಳಿಂದ ಸಂಸದರಾಗಿದ್ದ ಬಿಜೆಪಿಯವರ ಸಾಧನೆ ಶೂನ್ಯವಾಗಿದೆ. ಪ್ರವಾಸ ಬಂದಾಗ, ಬರ ಬಂದ ಜಾಗ, ರಾಜ್ಯ ಸರ್ಕಾರ ಸಂಕಷ್ಟದಲ್ಲಿದ್ದಾಗ ನಿರೀಕ್ಷಿತಮಟ್ಟದ ಸಹಾಯವನ್ನಂತೂ ಕೇಂದ್ರ ಸರ್ಕಾರ ಮಾಡಲಿಲ್ಲ. ಅನ್ನ ಭಾಗ್ಯಕ್ಕೆ ಅಕ್ಕಿಯನ್ನೂ ನೀಡಲಿಲ್ಲ ಎಂದು ಟೀಕಿಸಿದರು.

ಪಕ್ಷದ ಮುಖಂಡರಾದ ಬಿ.ಎಚ್. ಉದಯಕುಮಾರ, ಎಂ.ಕೆ.ಲಿಯಾಖತ್ ಅಲಿ, ಡಿ.ಶಿವಕುಮಾರ, ಬಿ.ಎಸ್.ಸುರೇಶ, ಮುಬಾರಕ್‌ ಇತರರು ಇದ್ದರು.

- - - ಕೋಟ್‌ ದಾವಣಗೆರೆ ನಗರಸಭೆ ಅಧ್ಯಕ್ಷನಾಗಿ, ಪಾಲಿಕೆ ಸದಸ್ಯರಾಗಿದ್ದ ಶಿವನಹಳ್ಳಿ ರಮೇಶ ಕಾಂಗ್ರೆಸ್ ಬಿಟ್ಟಿದ್ದು, ವೈಯಕ್ತಿಕವಾಗಿ ನೋವುಂಟು ಮಾಡಿದೆ. ಬಿಜೆಪಿಗೆ ಹೋಗಿರುವ ಶಿವನಹಳ್ಳಿ ರಮೇಶರನ್ನು ವಾಪಸ್‌ ಕಾಂಗ್ರೆಸ್ ಪಕ್ಷಕ್ಕೆ ಮರಳುವಂತೆ ಮನವೊಲಿಸುವ ಕೆಲಸ ಮಾಡುತ್ತೇನೆ

- ಡಿ.ಬಸವರಾಜ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ

- - - -13ಕೆಡಿವಿಜಿ1:

ದಾವಣಗೆರೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

Share this article