28ರಂದು ಶಿರಸಿಗೆ ಪ್ರಧಾನಿ ಮೋದಿ

KannadaprabhaNewsNetwork | Published : Apr 24, 2024 2:25 AM

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಪ್ರಪ್ರಥಮ ಬಾರಿಗೆ ಶಿರಸಿ ನಗರಕ್ಕೆ ಆಗಮಿಸಲಿದ್ದು, ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿದೆ.

ಶಿರಸಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಪ್ರಚಾರಕ್ಕಾಗಿ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲು ಏ. ೨೮ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ.

ಕ್ಷೇತ್ರದ ೮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ ಸುಮಾರು ೧ ಲಕ್ಷಕ್ಕಿಂತ ಹೆಚ್ಚು ಜನರು ಆಗಮಿಸುವ ನಿರೀಕ್ಷೆಯಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಪ್ರಪ್ರಥಮ ಬಾರಿಗೆ ಶಿರಸಿ ನಗರಕ್ಕೆ ಆಗಮಿಸಲಿದ್ದು, ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿದೆ. ಕಿತ್ತೂರು, ಖಾನಾಪುರ ಒಳಗೊಂಡ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ೧ ಲಕ್ಷ ಕಾರ್ಯಕರ್ತರು ಸಮಾವೇಶಕ್ಕೆ ಸಾಕ್ಷಿಯಾಗಲಿದ್ದಾರೆ. ಏ. ೨೮ರಂದು ಕರ್ನಾಟಕದ ಶಿರಸಿ, ಬೆಳಗಾವಿ ಮತ್ತು ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ನಡೆಸಲಿದ್ದಾರೆ ಎಂದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮೊದಲ ಹಂತದಲ್ಲಿ ಮಠ-ಮಂದಿರಗಳಿಗೆ ಭೇಟಿ ನೀಡಿ, ಸಮುದಾಯದ ಸಭೆ, ಗಣ್ಯರ ಸಭೆ, ಕಿತ್ತೂರು, ಖಾನಾಪುರ ಒಳಗೊಂಡಂತೆ ೮ ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ೭೯ ಮಹಾಶಕ್ತಿ ಕೇಂದ್ರಗಳಲ್ಲಿ ಪ್ರಚಾರ ಸಭೆ ಪ್ರಾರಂಭಿಸಲಾಗಿದ್ದು, ೪೮ ಮಹಾಶಕ್ತಿ ಕೇಂದ್ರಗಳಲ್ಲಿ ಪ್ರಚಾರ ಸಭೆ ಮುಗಿಸಲಾಗಿದ್ದು, ಪ್ರತಿಯೊಂದು ಕಡೆಗಳಲ್ಲಿಯೂ ಉತ್ತಮ ಬೆಂಬಲ ದೊರೆಯುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಜೆಡಿಎಸ್ ಜಿಲ್ಲಾ ಸಂಚಾಲಕ ಉಪೇಂದ್ರ ಪೈ, ಜಿಲ್ಲಾ ವಕ್ತಾರ ಸದಾನಂದ ಭಟ್ಟ, ಪಕ್ಷದ ಪ್ರಮುಖರಾದ ಗೋವಿಂದ ನಾಯ್ಕ ಭಟ್ಕಳ, ಶಿವಾಜಿ ನರಸಾನಿ, ಆರ್.ವಿ. ಹೆಗಡೆ ಚಿಪಗಿ ಇದ್ದರು.ಹೆಬ್ಬಾರ್ ನಮ್ಮ ಪಕ್ಷದ ಶಾಸಕರು

ಶಾಸಕ ಶಿವರಾಮ ಹೆಬ್ಬಾರ್ ನಮ್ಮ ಪಕ್ಷದ ಶಾಸಕರು. ಅವರ ಫೋಟೋವನ್ನು ಚುನಾವಣಾ ಪ್ರಚಾರದ ಕರಪತ್ರದಲ್ಲಿ ಹಾಕಿದ್ದೇವೆ. ಕಾರ್ಯಕರ್ತರ ಸಮಾವೇಶದಲ್ಲಿ ಸ್ಥಳೀಯ ಕಾರ್ಯಕರ್ತರ ವಿರೋಧ ವ್ಯಕ್ತವಾದ್ದರಿಂದ ಕೈಬಿಟ್ಟಿದ್ದೇವೆ ಹೊರತು ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಪ್ರಧಾನಿ ಕಾರ್ಯಕ್ರಮದಲ್ಲಿಯೂ ಅವರು ಪಾಲ್ಗೊಳ್ಳಲಿದ್ದಾರೆ ಎಂದರು.

ಹಾಲಿ ಸಂಸದರು ಪ್ರಧಾನಿ ಕಾರ್ಯಕ್ರಮದಲ್ಲಿ ಭಾಗವಹಿಸುವರೇ ಎಂಬ ಮಾಧ್ಯಮದರ ಪ್ರಶ್ನೆಗೆ ಉತ್ತರಿಸಿ, ನಮ್ಮ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಆಹ್ವಾನ ನೀಡಿದ್ದೇವೆ. ಆಗಮಿಸುವ ವಿಶ್ವಾಸವಿದೆ ಎಂದು ಎನ್.ಎಸ್. ಹೆಗಡೆ ತಿಳಿಸಿದರು.

Share this article