ರಾಣಿಬೆನ್ನೂರು: ಪ್ರಧಾನಿ ನರೇಂದ್ರ ಮೋದಿ ಕ್ರೀಡೆಗೆ ವಿಶೇಷ ಆದ್ಯತೆ ನೀಡಿದ್ದಾರೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸಂಸದರ ಕ್ರೀಡಾಮಹೋತ್ಸವ ಸಿದ್ಧತೆ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ದೇಶದ ಯುವಜನತೆಯಲ್ಲಿ ಕ್ರೀಡೆ, ಸಂಸ್ಕೃತಿ ಮತ್ತು ನಾಯಕತ್ವದ ಮನೋಭಾವ ಬೆಳೆಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲೂ ಸಂಸದರ ಕ್ರೀಡಾ ಮಹೋತ್ಸವ 2025-26 ಪ್ರಾರಂಭಿಸಿದೆ. ಫಿಟ್ ಇಂಡಿಯಾ, ಖೇಲೋ ಇಂಡಿಯಾ ಮತ್ತು ಜೀತೋ ಇಂಡಿಯಾ ಮೂಲಕ ವಿಶೇಷವಾಗಿ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಇದರ ಫಲವಾಗಿ ಒಲಿಂಪಿಕ್ಸ್ ಮತ್ತು ಪ್ಯಾರಾ ಒಲಿಂಪಿಕ್ಸನಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರತ ಇತಿಹಾಸದಲ್ಲೇ ಅತಿ ಹೆಚ್ಚು ಪದಕಗಳನ್ನು ಗಳಿಸಿದೆ ಎಂದರು. ಬಿಜೆಪಿ ಮುಖಂಡ ಭರತ ಬೊಮ್ಮಾಯಿ ಮಾತನಾಡಿದರು. ಪಕ್ಷದ ಶಹರ ಘಟಕದ ಅಧ್ಯಕ್ಷ ಮಂಜುನಾಥ ಕಾಟಿ, ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಸ ಸಿರಿಗೇರಿ, ಕೆ.ಶಿವಲಿಂಗಪ್ಪ, ಭಾರತಿ ಜಂಬಗಿ, ಸಿದ್ಧು ಚಿಕ್ಕಬಿದರಿ, ಕರಬಸಪ್ಪ ಮಾಕನೂರ, ಮಾಳಪ್ಪ ಪೂಜಾರ ಮತ್ತಿತರರಿದ್ದರು.