ಕೌಶಲ್ಯ, ಉದ್ಯೋಗ ಸೃಷ್ಟಿಗೆ ಪ್ರಧಾನಿ ಇಂಟರ್ನ್‌ಶಿಪ್‌ ಯೋಜನೆ ಸಹಕಾರಿ: ನಿರ್ಮಲಾ ಸೀತಾರಾಮನ್‌

KannadaprabhaNewsNetwork |  
Published : Oct 16, 2025, 02:01 AM IST
15ಎಚ್‌ಪಿಟಿ3- ಹೊಸಪೇಟೆಯ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ನಡೆದ ಪ್ರಧಾನಮಂತ್ರಿ ಇಂಟರ್ನ್‌ಶಿಪ್‌ ಯೋಜನೆ ಕುರಿತು ಯುವ ಸಮೂಹದ ಜೊತೆ ಸಂವಾದದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಾತನಾಡಿದರು. | Kannada Prabha

ಸಾರಾಂಶ

ಪ್ರಧಾನಮಂತ್ರಿ ಇಂಟರ್ನ್‌ಶಿಪ್‌ ಯೋಜನೆಯಿಂದ ಯುವಕರಲ್ಲಿ ಕೌಶಲ್ಯ ಹಾಗೂ ಉದ್ಯೋಗ ಸೃಷ್ಟಿಗೆ ಅನುಕೂಲ ಆಗಲಿದೆ.

ಹೊಸಪೇಟೆ: ಪ್ರಧಾನಮಂತ್ರಿ ಇಂಟರ್ನ್‌ಶಿಪ್‌ ಯೋಜನೆಯಿಂದ ಯುವಕರಲ್ಲಿ ಕೌಶಲ್ಯ ಹಾಗೂ ಉದ್ಯೋಗ ಸೃಷ್ಟಿಗೆ ಅನುಕೂಲ ಆಗಲಿದೆ. ಇದರ ಪ್ರಯೋಜನ ಪಡೆದುಕೊಂಡರೆ; ದೇಶದ ಉತ್ತಮ ಕಂಪನಿಗಳಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಈ ಭಾಗದಲ್ಲೂ ಯುವಕರು ಇಂಟರ್ನ್‌ಶಿಪ್‌ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡು ಮುಂದುವರಿದಿರುವುದು ಖುಷಿಯ ವಿಚಾರವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ನಡೆದ ಪ್ರಧಾನಮಂತ್ರಿ ಇಂಟರ್ನ್‌ಶಿಪ್‌ ಯೋಜನೆ ಕುರಿತು ಯುವ ಸಮೂಹದ ಜೊತೆ ಸಂವಾದದಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗದ ಸೃಷ್ಟಿಯ ಭಾಗವಾಗಿರುವ ಈ ಕಾರ್ಯಕ್ರಮದ ಅನ್ವಯ ಉತ್ತಮ ಕಂಪನಿಗಳಲ್ಲಿ ಇಂಟರ್ನ್‌ಶಿಪ್‌ ನೀಡುವ ಮೂಲಕ ಶೈಕ್ಷಣಿಕ ಕಲಿಕೆಗೆ ಅನುಕೂಲ ಆಗಿದೆ. ಇದರಿಂದ ಪ್ರಶಿಕ್ಷಣಾರ್ಥಿಗಳಿಗೆ ತಮ್ಮ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಅನುಭವ ಪಡೆಯಲು ಅನುಕೂಲ ಆಗಲಿದೆ. ಹೈಸ್ಕೂಲ್, ಐಟಿಐ, ಡಿಪ್ಲೋಮಾ ಮತ್ತು ಪದವಿಗಳಂತಹ ಅರ್ಹತೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಆಗಿದ್ದು, ಬಡ, ಮಧ್ಯಮ ವರ್ಗದ ಯುವಕರಿಗೆ ಉದ್ಯೋಗ ಕಲ್ಪಿಸುವ ಗುರಿಯೊಂದಿಗೆ ಈ ಯೋಜನೆ ರೂಪಿಸಲಾಗಿದ್ದು, ನಿಮ್ಮಂತಹ ಯುವಕರು ಆಸಕ್ತಿಯಿಂದ ಕಲಿತರೆ, ಖಂಡಿತ ಈ ಯೋಜನೆ ಸಾಕಾರಗೊಳ್ಳಲಿದೆ ಎಂದರು.

ಮಾತೃಭಾಷೆಯಲ್ಲಿ ಮಾತನಾಡಿ: ನಿಮ್ಮ ಪ್ರಶ್ನೆಗಳಿಗೆ ನಾನು ಖಂಡಿತಾ ಉತ್ತರಿಸುವೆ. ಯಾರೂ ಹೆದರದೇ ಮುಕ್ತವಾಗಿ ಸಂವಾದದಲ್ಲಿ ಭಾಗಿಯಾಗಬಹುದು. ಇಂಗ್ಲಿಷ್‌ನಲ್ಲಿ ಮಾತನಾಡಲು ಯುವತಿ ಆರ್ಯ ತೊದಲಿದರು, ಆಗ ನಿಮ್ಮ ಮಾತೃಭಾಷೆಯಲ್ಲೆ ಮಾತನಾಡಿ ಎಂದು ಸಚಿವೆ ಹುರಿದುಂಬಿಸಿದರು. ಆಗ ಮಲಯಾಳಂನಲ್ಲಿ ಆರ್ಯ ಮಾತನಾಡಿದರು.

ಆಂಧ್ರಪ್ರದೇಶದ ಕಡಪ ಜಿಲ್ಲೆಯ ಹರಿಕೃಷ್ಣ ಎಂಬ ಯುವಕನಿಗೆ "ಎಂಥ ಪೆದ್ದಗ ಪನಿ ಚೇಶ್ಯಾವು ನಾನಾ " (ಎಂತಹ ದೊಡ್ಡ ಕೆಲಸ ಮಾಡಿದೀಯಾ ಅಪ್ಪ) ಎಂದು ಸಚಿವೆ ನಿರ್ಮಲಾ ಸೀತಾರಾಮನ್‌, ಈ ಯುವಕ ಕಂಪನಿಯಲ್ಲಿ ಮಾಡುತ್ತಿರುವ ಕಾರ್ಯ ವೈಖರಿ ಗುಣಗಾನ ಮಾಡಿ; ಕಂಪನಿಯೊಂದರಲ್ಲಿ ಉದ್ಯೋಗ ನೇಮಕಾತಿ ಆಫರ್‌ ಲೆಟರ್‌ನ್ನು ಹರಿಕೃಷ್ಣಗೆ ಸಚಿವೆ ನಿರ್ಮಲಾ ಸೀತಾರಾಮನ್‌ ನೀಡಿದರು.

ಈ ವೇಳೆ ಹರಿಕೃಷ್ಣ ತಲೆ ಸವರಿ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು.

ಉದ್ಯೋಗಕ್ಕಾಗಿ ಕೌಶಲ್ಯ ಮುಖ್ಯ. ಹಾಗಾಗಿ ನಾವು ಯುವಕರಲ್ಲಿ ಕೌಶಲ್ಯ ಬೆಳೆಸಲು ಈ ಯೋಜನೆ ರೂಪಿಸಿದ್ದೇವೆ. ಇದೊಂದು ಮಹತ್ತರ ಯೋಜನೆ ಆಗಿದೆ. ಇದರಲ್ಲಿ ಮಾರ್ಪಾಡು ಮಾಡಬೇಕು ಎಂಬ ಸಲಹೆ ಇದ್ದರೂ ನಾವು ಮುಕ್ತವಾಗಿ ಸ್ವೀಕಾರ ಮಾಡುತ್ತೇವೆ. ಉದ್ಯೋಗದಾತ ಕಂಪನಿಗಳ ಪ್ರತಿನಿಧಿಗಳು ಕೂಡ ನಿಮ್ಮ ಸಲಹೆ ನೀಡಬಹುದು. ಈ ಭಾಗದಲ್ಲಿ ಬಲ್ಡೋಟ ಸಮೂಹದ ಎಂಎಸ್‌ಪಿಎಲ್‌ ಕಂಪನಿ ಕೂಡ ಉದ್ಯೋಗ ಸೃಷ್ಟಿಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಇಂಟರ್ನಿಗಳಿಗೂ ಅನುಕೂಲ ಆಗಿದೆ ಎಂದರು.

ಅಧಿಕಾರಿಗಳಾದ ಅನಿರುದ್ಧ ಶ್ರವಣ್‌, ವಿಶಾಲ್‌, ಬಾಲ ಮುರುಗನ್‌ , ರೀಚಾ, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಇದ್ದರು. ವಿವಿಧ ಕಡೆಯಿಂದ ಆಗಮಿಸಿದ್ದ ಪ್ರಶಿಕ್ಷಣಾರ್ಥಿಗಳು ಕೂಡ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!
ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!