ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಜಾಗೃತಿ ಮೂಡಿಸಿ

KannadaprabhaNewsNetwork |  
Published : Jul 31, 2024, 01:11 AM IST
1 | Kannada Prabha

ಸಾರಾಂಶ

ಮಾನವ ಕಳ್ಳ ಸಾಗಣಿಕೆ ಎಂಬ ದೊಡ್ಡ ಪಿಡುಗನ್ನು ನಾಶಮಾಡಲು ಕೇವಲ ಒಬ್ಬರಿಂದ ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಮಾನವ ಕಳ್ಳ ಸಾಗಣಿಕೆ ಎಂಬುದು ಸಮಾಜದ ಗಂಭೀರ ಸಮಸ್ಯೆಯಾಗಿದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದ್ದು, ಮಾಧ್ಯಮಗಳು ಮಾನವ ಕಳ್ಳ ಸಾಗಾಣಿಕೆಯ ಬಗ್ಗೆ ಹೆಚ್ಚು ಪ್ರಚಾರ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರವೀಂದ್ರ ಹೆಗಡೆ ತಿಳಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಖಿ ಸ್ಟ್ಯಾಂಪ್ ಸೆಂಟರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಡಿ ವಿಶ್ವಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಮಾನವ ಕಳ್ಳ ಸಾಗಣಿಕೆ ಎಂಬ ದೊಡ್ಡ ಪಿಡುಗನ್ನು ನಾಶಮಾಡಲು ಕೇವಲ ಒಬ್ಬರಿಂದ ಸಾಧ್ಯವಿಲ್ಲ. ಹೀಗಾಗಿ, ಪ್ರತಿಯೊಂದು ಇಲಾಖೆ, ಪ್ರತಿಯೊಂದು ಸಂಸ್ಥೆ ಹಾಗೂ ಸಾರ್ವಜನಿಕರ ಒಗ್ಗಟ್ಟಿನಿಂದ ಸಮಾಜದಲ್ಲಿ ಮಾನವ ಕಳ್ಳ ಸಾಗಾಣಿಕೆ ಎಂಬ ಸಮಸ್ಯೆಯನ್ನು ಇಲ್ಲದಂತೆ ಮಾಡಬಹುದು ಎಂದರು.

ಮಕ್ಕಳು, ಬಡವರಿಗೆ ಉದ್ಯೋಗದ ನೀಡುವುದಾಗಿ ನಂಬಿಸಿ ಅವರನ್ನು ಬಾಲಕಾರ್ಮಿಕಯನ್ನಾಗಿ ಹಾಗೂ ಇತ್ಯಾದಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ. ಇಂತಹ ತಪ್ಪಿತಸ್ಥರ ವಿರುದ್ಧ ಕೈಗೊಂಡ ಕ್ರಮಗಳನ್ನು ಮಾಧ್ಯಮಗಳು ಪ್ರಸಾರ ಮಾಡಬೇಕು. ಇದರಿಂದ ಜನರಲ್ಲಿ ಅರಿವು ಮೂಡುತ್ತದೆ. ಅಲ್ಲದೇ ಮುಂದೆ ಎಚ್ಚರಿಕೆಯಿಂದ ಇರಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

ಎಲ್ಲರೂ ಕೈಜೋಡಿಸಿ

ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ಕೆ.ಎಂ. ಗಾಯತ್ರಿ ಮಾತನಾಡಿ, ಅಸಂಘಟಿತ ವಲಯಗಳು ಸಂಘಟಿತವಾಗಿ ಮಾಡುವ ಶೋಷಣೆಯೇ ಮಾನವ ಕಳ್ಳ ಸಾಗಾಣಿಕೆ. ಇದರ ಬಗ್ಗೆ ಪ್ರತಿಯೊಂದು ಇಲಾಖೆಯೂ ತಮ್ಮ ತಮ್ಮ ವ್ಯಾಪ್ತಿಗೆ ಬರುವ ಸಾರ್ವಜನಿಕರಿಗೆ ವಿಶೇಷ ಕಾರ್ಯಕ್ರಮಗಳನ್ನು ಕೈಗೊಂಡು ಜಾಗೃತಿ ಮೂಡಿಸಬೇಕು ಎಂದರು.

ಶಾಲೆಯಿಂದಲೇ ಮಕ್ಕಳಿಗೆ ಅಪರಿಚಿತರಿಂದ ದೂರವಿರುವಂತೆ ಎಚ್ಚರಿಕೆ ವಹಿಸಲು ಅರಿವು ಮೂಡಿಸಬೇಕು. ಕಾರ್ಮಿಕ ಇಲಾಖೆಯವರು ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ, ಬಾಲಕಾರ್ಮಿಕ ಮುಕ್ತರನ್ನಾಗಿ ಮಾಡಬೇಕು. ಸರ್ಕಾರೇತರ ಸಂಸ್ಥೆಗಳು ಮಾನವ ಕಳ್ಳ ಸಾಗಾಣಿಕೆಯನ್ನು ತಡೆಯಲು ಕೈಜೋಡಿಸಬೇಕು. ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಗ್ರಾಮ ಸಭೆಗಳನ್ನು ನಡೆಸಿ, ಜನರಿಗೆ ಮಾನವ ಕಳ್ಳ ಸಾಗಾಣಿಕೆ ಬಗ್ಗೆ ವಿಷಯ ಮುಟ್ಟಿಸಬೇಕು. ಇದರಲ್ಲಿ ಪ್ರತಿಯೊಂದು ಇಲಾಖೆಯ ಹಾಗೂ ಸಾರ್ವಜನಿಕರ ಪಾತ್ರ ಬಹಳ ಮುಖ್ಯವಾಗಿದ್ದು, ಎಲ್ಲರೂ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.

ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ಇಂದು ಬಡತನದಿಂದ ಇರುವವರು ನಿರುದ್ಯೋಗಿಗಳು ಕುರುಡು ನಂಬಿಕಯಿಂದ ಹಾಗೂ ಉದ್ಯೋಗದ ಆಸೆಯಿಂದ ಜನರನ್ನು ನಂಬಿ, ಮಾನವ ಕಳ್ಳ ಸಾಗಾಣಿಕೆಗೆ ಬಲಿಯಾಗುತ್ತಿದ್ದಾರೆ. ಇದನ್ನು ಜನರು ಆದಷ್ಟು ಬೇಗ ಅರಿತು, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುಂದಾಗಬೇಕು. ಆಗ ಮಾತ್ರವೇ ಕಳ್ಳ ಸಾಗಾಣಿಕೆಯ ಅಂತ್ಯ ಸಾಧ್ಯ.

ಇದೇ ವೇಳೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರು ಅಧಿಕಾರಿಗಳಿಗೆ ಮಾನವ ಕಳ್ಳ ಸಾಗಣಿಕೆ ತಡೆಗಟ್ಟುವ ಸಂಬಂಧ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ. ದಿನೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಯೋಗೇಶ್ ಮೊದಲಾದವರು ಇದ್ದರು.

-----

ಕೋಟ್...

ಮಕ್ಕಳನ್ನು ಮಾನವ ಕಳ್ಳ ಸಾಗಾಣಿಕೆ ಮಾಡಿ ರಸ್ತೆ ಬದಿಗಳಲ್ಲಿ ಮಕ್ಕಳನ್ನು ಪೆನ್, ಸ್ಟಿಕರ್ಸ್ ಹೀಗೆ ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡಲು, ಭಿಕ್ಷೆ ಬೇಡಲು ಬಿಡುತ್ತಾರೆ. ಸಾರ್ವಜನಿಕರು ಅದನ್ನು ಗುರುತಿಸದೆ ಕೊಂಡುಕೊಳ್ಳುವುದರ ಮೂಲಕ ಪರೋಕ್ಷವಾಗಿ ಕಳ್ಳ ಸಾಗಾಣಿಕೆಗೆ ಸಹಾಯ ಮಾಡಿದಂತಾಗುತ್ತದೆ. ಹೀಗಾಗಿ, ಈ ರೀತಿಯಾಗಿ ಯಾವುದೇ ವ್ಯಕ್ತಿ ಅಥವಾ ಮಕ್ಕಳು ಕಂಡು ಬಂದರೆ ಅವರ ಹಿನ್ನೆಲೆಯನ್ನು ತಿಳಿದು, ಅಂತಹ ಜನರಿಗೆ ಜಾಗೃತಿ ಮೂಡಿಸಬೇಕು.

- ರವೀಂದ್ರ ಹೆಗಡೆ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ

----

ಪ್ರಸ್ತುತ ಮಾನವ ಕಳ್ಳ ಸಾಗಾಣಿಕೆ ಎಂಬುದು ಒಂದು ದೊಡ್ಡ ಸಮಸ್ಯೆಯಾಗಿದ್ದು, ಕಾಣೆಯಾದ ಯಾವುದೇ ಪ್ರಕರಣವನ್ನು ನಿರ್ಲಕ್ಷಿಸದೆ ಸರಿಯಾದ ಕ್ರಮ ಕೈಗೊಳ್ಳಬೇಕು. ಮಾನವ ಕಳ್ಳ ಸಾಗಾಣಿಕೆ ಎಂಬುದು ದೊಡ್ಡ ಮಟ್ಟದ ಅಪರಾಧವಾಗಿದ್ದು, ದೇಶದ ಭದ್ರತೆಗೆ ಮಾರಕವಾಗಿದೆ. ಹೀಗಾಗಿ, ಪ್ರತಿಯೊಬ್ಬರೂ ಕೈಜೋಡಿಸಿ ಮಾನವ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟಲು ಮುಂದಾಗಬೇಕು.

- ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ